ಹೊಸನಗರದಲ್ಲಿ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಪರಿಶೀಲನಾ ಸಭೆ - ಡೆಂಗ್ಯೂ ನಿಯಂತ್ರಣಕ್ಕೆ ಎಲ್ಲಾ ಇಲಾಖೆ ಅಧಿಕಾರಿಗಳೂ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದ ಶಾಸಕ ಬೇಳೂರು ಮತ್ತು ಆರಗ
ಹೊಸನಗರ : ಮಹಾಮಾರಿ ಡೆಂಗ್ಯೂ ವಿಪರೀತ ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟಲು ಎಲ್ಲಾ ಇಲಾಖೆಯವರೂ ಸನ್ನದ್ಧರಾಗಿರಬೇಕು ಮತ್ತು ಯಾವುದೇ ರೀತಿಯಲ್ಲೂ ನಿರ್ಲಕ್ಷ್ಯಮಾಡಬಾರದು ಎಂದು ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಅವರು ತಾಲ್ಲೂಕಿನ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇಂದು ಇಲ್ಲಿನ ತಾಲ್ಲೂಕು ಪಂಚಾಯತ್ ಕೊಡಚಾದ್ರಿ ಸಭಾಂಗಣದಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಪರಿಶೀಲನಾ ಸಭೆಯಲ್ಲಿ ಡೆಂಗ್ಯೂ ನಿಯಂತ್ರಣದ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿದ ಅವರು, ಯಾವ್ಯಾವ ಪಂಚಾಯ್ತಿಗಳ ಪಿಡಿಓಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.
ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಅವರು ಸಭೆಯಲ್ಲಿ ಉಪಸ್ಥಿತರಿದ್ದು, ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಎಲ್ಲರೊಂದಿಗೆ ಸಹಕರಿಸಿ ಕರ್ತವ್ಯ ನಿರ್ವಹಿಸಬೇಕು. ಅರಣ್ಯ ಇಲಾಖೆಯವರು ಈ ಪಾಠವನ್ನು ಮೊದಲು ಕಲಿಯಬೇಕು. ಅಭಿವೃದ್ಧಿ ಕಾಮಗಾರಿಗಳಿಗೆ ಅನವಶ್ಯಕವಾಗಿ ತಡೆಯೊಡ್ಡದೆ ಸಹಕರಿಸಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.
ಶಾಸಕರಿಬ್ಬರೂ ತಾಲ್ಲೂಕಿನ ಮಕ್ಕಳ ಶಿಕ್ಷಣ, ಶಾಲಾಭಿವೃದ್ಧಿ ಸಮಿತಿಯವರು ಮಾಡಬೇಕಿರುವ ಕೆಲಸಗಳು, ಮೆಸ್ಕಾಂ ಅಧಿಕಾರಿಗಳು ಮಾಡುತ್ತಿರುವ ಅನವಶ್ಯಕ ದಂಡ ವಸೂಲಿ... ಸೇರಿದಂತೆ ಹಲವು ವಿಷಯಗಳ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ಆಗಬೇಕಾಗಿರುವ ಕೆಲಸಗಳ ಬಗ್ಗೆ ಗಮನ ಹರಿಸುವಂತೆ ತಿಳಿಸಿದರು.
ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುವಾಗ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಾಮಗಾರಿ ಸ್ಥಳದಲ್ಲಿದ್ದು ಗುಣಮಟ್ಟದ ಕಾಮಗಾರಿ ನೀಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಹೇಳಿದ ಶಾಸಕರಿಬ್ಬರು, ಈಗ ಮಳೆಗಾಲವಾದ್ದರಿಂದ ಸರ್ಕಾರಿ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರ ಸ್ನಾನಕ್ಕೆ ಬಿಸಿನೀರಿನ ಸೌಲಭ್ಯ ನೀಡುವಲ್ಲಿ ಅಧಿಕಾರಿಗಳು ಶ್ರಮವಹಿಸಬೇಕೆಂದು ಸೂಚಿಸಿದರು.
ಈ ಬಾರಿ ಹೆಚ್ಚಿನ ಮಳೆ ಬೀಳುತ್ತಿರುವ ಕಾರಣ ತಾಲ್ಲೂಕಿನ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಡೆಂಗ್ಯೂ ನಿಯಂತ್ರಣಕ್ಕೆ ಶ್ರಮಿಸುವುದರೊಂದಿಗೆ, ಅತಿವೃಷ್ಟಿಯಿಂದ ಉಂಟಾಗಬಹುದಾದ ಅನಾಹುತಗಳನ್ನು ಎದುರಿಸಲು ಸದಾ ಸಿದ್ಧರಾಗಿರುವಂತೆ ಹೇಳಿದರು.
ಈ ಸಂದರ್ಭದಲ್ಲಿ ಕೈಗಾರಿಕೆ ಇಲಾಖೆ ವತಿಯಿಂದ 2023-24ನೇ ಸಾಲಿನ ಕುಶಲಕರ್ಮಿಗಳಿಗೆ ಶಾಸಕರು ಕಿಟ್ ವಿತರಿಸಿದರು.
ಕಾಮೆಂಟ್‌ಗಳಿಲ್ಲ