ಶಿವಮೊಗ್ಗ ತ್ಯಾವರೆಕೊಪ್ಪ ಸಿಂಹಧಾಮದ ಬಳಿ ಕಾರುಗಳ ನಡುವೆ ಅಪಘಾತ - ಮೂವರ ಸಾವು
ಶಿವಮೊಗ್ಗ : ಇಲ್ಲಿನ ತ್ಯಾವರೆಕೊಪ್ಪ ಹುಲಿ ಸಿಂಹಧಾಮದ ಬಳಿಯ ಮುತ್ತಿನಕೊಪ್ಪದಲ್ಲಿ ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟು, ವಿದೇಶಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಇಂದು ನಡೆದಿದೆ.
ಶಿವಮೊಗ್ಗದಿಂದ ಸಾಗರದ ಜೋಗಕ್ಕೆ ಹೋಗುತ್ತಿದ್ದ ಇನ್ನೋವಾ ಕಾರು ಹಾಗೂ ಸಾಗರದಿಂದ ಶಿವಮೊಗ್ಗದ ಕಡೆ ಬರುತ್ತಿದ್ದ ಮಾರುತಿ ಸ್ವಿಫ್ಟ್ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಸ್ವಿಫ್ಟ್ ಕಾರು ಓವರ್ ಟೇಕ್ ಮಾಡುವ ಭರದಲ್ಲಿ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಸ್ವಿಫ್ಟ್ ಕಾರಿನಲ್ಲಿದ್ದ ಚಿತ್ರದುರ್ಗ ಮೂಲದ ಚಾಲಕ ಚಂದ್ರು, ಚಳ್ಳಕೆರೆ ಬೆಳಲಗೆರೆಯ ಇಮಾಮ್ ಸಾಬ್ ಮತ್ತು ಸಿದ್ಧಣ್ಣ ಎನ್ನುವವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಓಬಕ್ಕ ಎನ್ನುವ ಮಹಿಳೆ ಗಾಯಗೊಂಡಿದ್ದು ಅವರ ಸ್ಥಿತಿ ಗಂಭೀರವಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನೋವಾ ಕಾರಿನಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ವಿದೇಶಿ ಪ್ರವಾಸಿಗರಿದ್ದು, ಅವರು ಶಿವಮೊಗ್ಗದ ಕಿಮ್ಮನೆ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು. ಇವರು ಜೋಗ ನೋಡಲು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಏರ್ ಬ್ಯಾಗ್‌ನಿಂದ ಇವರ ಜೀವ ಉಳಿದಿದೆ ಎನ್ನಲಾಗುತ್ತಿದೆ. ವಿದೇಶಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಇನ್ನೋವಾ ಕಾರಿನ ಚಾಲಕ ಗಿರೀಶ್ ಗಾಯಗೊಂಡಿದ್ದು, ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದ್ದು, ಕಾರಿನ ಅತಿವೇಗದ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.
ಕಾಮೆಂಟ್‌ಗಳಿಲ್ಲ