ಭಾರೀ ಮಳೆಗೆ ಹೊಸನಗರ ಕಲ್ಲುಹಳ್ಳ ಸೇತುವೆ ತಡೆಗೋಡೆ ಕುಸಿತ - ತಪ್ಪಿದ ಭಾರೀ ಅನಾಹುತ - ಎಂ.ಗುಡ್ಡೇಕೊಪ್ಪ, ಸುಳುಗೋಡಿನಲ್ಲಿ ಮನೆಗಳ ಮೇಲೆ ಬಿದ್ದ ಮರ
ಹೊಸನಗರ: ಸೋಮವಾರ ರಾತ್ರಿ ಪಟ್ಟಣದಲ್ಲಿ ಸುರಿದ ಭಾರೀ ಮಳೆಗೆ ಪಟ್ಟಣಕ್ಕೆ ಸಮೀಪದಲ್ಲೇ ಇರುವ ಕಲ್ಲುಹಳ್ಳ ಸೇತುವೆಯ ತಡೆಗೋಡೆ ಕುಸಿದಿದೆ. ಪಟ್ಟಣದಲ್ಲಿ ಹಾದು ಹೋಗುವ ರಾಣೆಬೆನ್ನೂರು- ಬೈಂದೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 766 c ಗೆ ಕಲ್ಲುಹಳ್ಳ ಎಂಬಲ್ಲಿ ಈ ಸೇತುವೆ ನಿರ್ಮಾಣವಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಡಿಯಲ್ಲಿ ಅಂದಾಜು ಸುಮಾರು 5 ಕೋಟಿ ಅನುದಾನದಲ್ಲಿ ಸೇತುವೆ ಇತ್ತೀಚೆಗೆ ನಿರ್ಮಾಣವಾಗಿತ್ತು. ಲೋಕಾರ್ಪಣೆಗೊಳ್ಳುವ ಮೊದಲೇ ಸೇತುವೆಯ ತಡೆಗೋಡೆ ಕುಸಿದು ಭಾರೀ ಅವಘಡವೊಂದು ತಪ್ಪಿದೆ.
ಇದೇ ರೀತಿ ಮಳೆ ಮುಂದುವರೆದಲ್ಲಿ ಇನ್ನಷ್ಟು ಭಾಗ ಕುಸಿಯುವ ಭೀತಿ ಈ ಭಾಗದ ಪ್ರಯಾಣಿಕರನ್ನು ಕಾಡುತ್ತಿದೆ. ಮುಂದಾಗುವ ಅನಾಹುತ ತಪ್ಪಿಸಲು ಸಂಬಂಧ ಪಟ್ಟ ಇಲಾಖೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನತೆ ಒತ್ತಾಯಿಸಿದ್ದಾರೆ. ತಕ್ಷಣವೇ ಕ್ರಮ ಕೈಗೊಳ್ಳದೇ ಹೋದರೆ ಕರಾವಳಿ ಪ್ರದೇಶದ ಸಂಪರ್ಕ ತಪ್ಪುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ. ಜೊತೆಗೆ ಕಳಪೆ ಕಾಮಗಾರಿಯ ಕುರಿತು ಸೂಕ್ತ ತನಿಖೆ ಕೈಗೊಳ್ಳುವಂತೆಯೂ ನಾಗರೀಕರು ಒತ್ತಾಯಿಸಿದ್ದಾರೆ.
ಎಂ.ಗುಡ್ಡೇಕೊಪ್ಪ, ಸುಳುಗೋಡಿನಲ್ಲಿ ಮನೆಗಳ ಮೇಲೆ ಬಿದ್ದ ಮರ
ಹೊಸನಗರ ತಾಲ್ಲೂಕಿನೆಲ್ಲೆಡೆ ಪುನರ್ವಸು ಮಳೆಯ ಬಿರುಸು ಜಾಸ್ತಿಯಾಗುತ್ತಿದ್ದು, ಅಲ್ಲಲ್ಲಿ ಅನಾಹುತ ಸಂಭವಿಸಿದೆ. ಭಾರೀ ಮಳೆಗೆ ಹೊಸನಗರ ಪಟ್ಟಣಕ್ಕೆ ಸಮೀಪ ಇರುವ ಎಂ. ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ವರಕೋಡು ಗ್ರಾಮದ ದೊರೆದಿಂಬ ಎಂಬಲ್ಲಿ ಜೈನಾಬಿ ಕೋಂ ಮಾಸಿಂಸಾಬ್ ಎಂಬುವವರ ಮನೆ ಮೇಲೆ ಮರ ಉರುಳಿ ಬಿದ್ದ ಪರಿಣಾಮ ಮನೆ ಜಖಂಗೊಂಡು ನಷ್ಟವುಂಟಾಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಕೌಶಿಕ್ ಭೇಟಿ ನೀಡಿದ್ದಾರೆ.
ಇದೇ ರೀತಿ ತಾಲ್ಲೂಕಿನ ಸುಳಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಗಿಣಿಕಲ್ ಗ್ರಾಮದ ವಾಸಿ ಕಟ್ಟಿನಗದ್ದೆ ಹಿರಿಯಣ್ಣ ಎನ್ನುವ ಕೃಷಿಕರ ಮನೆ ಮೇಲೆ ಮರ ಬಿದ್ದ ಪರಿಣಾಮ ಮನೆ ಜಖಂಗೊಂಡು ನಷ್ಟವಾಗಿದೆ. ಸ್ಥಳಕ್ಕೆ ನಗರ ಹೋಬಳಿ ಉಪ ತಹಶೀಲ್ದಾರ್, ಸುಳಗೋಡು ಗ್ರಾಮ ಪಂಚಾಯತಿ ಪಿಡಿಓ ಸೇರಿದಂತೆ ಹಲವರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.
ಮಾಸ್ತಿಕಟ್ಟೆಯಲ್ಲಿ ಸೋಮವಾರ ಒಂದೇ ದಿನ ದಾಖಲೆಯ 247 ಮಿಲಿ ಮೀಟರ್ ಮಳೆ
ಪುನರ್ವಸು ಮಳೆಯ ಬಿರುಸು ಹೇಗಿದೆಯೆಂದರೆ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ಸೋಮವಾರ ಒಂದೇ ದಿನ ದಾಖಲೆಯ 247 ಮಿಲಿ ಮೀಟರ್ ಮಳೆ ಬಿದ್ದಿದೆ. ಇಂದು ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ಹುಲಿಕಲ್ಲಿನಲ್ಲಿ 245 ಮಿಲಿ ಮೀಟರ್, ಮಾಣಿಯಲ್ಲಿ 240 ಮಿಲಿ ಮೀಟರ್, ಯಡೂರಿನಲ್ಲಿ 229 ಮಿಲಿ ಮೀಟರ್, ಸಾವೇಹಕ್ಲಿನಲ್ಲಿ 210 ಮಿಲಿ ಮೀಟರ್, ಕಾರ್ಗಲ್ಲಿನಲ್ಲಿ 194 ಮಿಲಿ ಮೀಟರ್, ಬಿದನೂರು ನಗರದಲ್ಲಿ 157 ಮಿಲಿ ಮೀಟರ್, ಹೊಸನಗರದಲ್ಲಿ 138 ಮಿಲಿ ಮೀಟರ್, ಹೊಂಬುಜದಲ್ಲಿ 125.4 ಮಿಲಿ ಮೀಟರ್, ಅರಸಾಳಿನಲ್ಲಿ 91.8 ಮಿಲಿ ಮೀಟರ್ ಮಳೆ ಬಿದ್ದಿದೆ.
ನಿನ್ನೆಯೇ ಹೊಸನಗರ ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಶಿವಮೊಗ್ಗ ಜಿಲ್ಲೆಯೆಲ್ಲೆಡೆ ಮಳೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವ ವರದಿ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಗಳು ಇಂದು ಜಿಲ್ಲೆಯ ಎಲ್ಲಾ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
ಕಾಮೆಂಟ್‌ಗಳಿಲ್ಲ