Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ಪಟ್ಟಣದಲ್ಲಿ ಬೆಳಕಿನಲ್ಲಿ ಉರಿಯುತ್ತವೆ ಬೀದಿ ದೀಪಗಳು...!? ಬೀದಿ ದೀಪಗಳ ನಿರ್ವಹಣೆ ಟೆಂಡರ್ ಕೇವಲ ಪಟ್ಟಣ ಪಂಚಾಯಿತಿ ಕಚೇರಿ ಪುಸ್ತಕಕ್ಕೆ ಸೀಮಿತವಾಯಿತೇ?!

ಹೊಸನಗರ: ಮಳೆಗಾಲ ಎಂದರೆ ಮಲೆನಾಡು ಭಾಗದ ಜನವಸತಿ ಪ್ರದೇಶಗಳಲ್ಲಿ ವಿದ್ಯುತ್ ಎಂಬ ಮಾಯೆ ನಿತ್ಯ ಕಣ್ಣಾಮಚ್ಚಲೆ ಆಟ‌ ಆಡುವುದು ಸಾಮಾನ್ಯ ಸಂಗತಿ. ಇತ್ತೀಚೆಗೆ ಜನ ಸಹ‌ ಇದಕ್ಕೆ ಒಗ್ಗಿ ಹೋಗಿದ್ದಾರೆ. ನಿರಂತರ ಸುರಿವ ಮಳೆಯಿಂದಾಗಿ ಹಲವು ದಿನಗಳ ಕಾಲ ಕರೆಂಟ್ ಇಲ್ಲದೆ ಜನರು ತಮ್ಮ ನಿತ್ಯಕಾಯಕ ಶೈಲಿಯನ್ನೇ ಬದಲಾಯಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಹೊಸನಗರ ತಾಲ್ಲೂಕು ವ್ಯಾಪ್ತಿಯ ಹಲವು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡು, ಮತ್ತೆ ಸಂಪರ್ಕ ಸಿಗದೆ ಹಲವು ದಿನಗಳೇ ಕಳೆದಿವೆ. ಹೀಗಿದ್ದರೂ ಭಾರೀ ಮಳೆಯ ನಡುವೆಯೇ ವಿದ್ಯುತ್ ಇಲಾಖೆ ಸಿಬ್ಬಂದಿಗಳು ಸಂಪರ್ಕ ಕಲ್ಪಿಸಲು ನಿರಂತರ ಶ್ರಮವಹಿಸಿರುವುದು ಕಂಡು ಬರುತ್ತಿದೆ.

ಇದು ಒಂದೆಡೆಯಾದರೆ, ಇನ್ನೊಂದೆಡೆ ಅಗತ್ಯವಿಲ್ಲದೇ ಇದ್ದಾಗ ಹಗಲಿನಲ್ಲೇ ಬೀದಿ ದೀಪ ಬೆಳಗಿಸಿ ವಿನಾಕಾರಣ ವಿದ್ಯುತ್‌ ನಷ್ಟವನ್ನುಂಟು ಮಾಡುವ, ಈ ಮೂಲಕ ಸರ್ಕಾರದ ಬೊಕ್ಕಸಕ್ಕೂ ಹೊರೆಯಾಗುವ ಕೆಲಸವನ್ನೂ ನೀವು ನೋಡಬೇಕೆಂದರೆ ಈ ಸಮಯದಲ್ಲಿ ಹೊಸನಗರ ಪಟ್ಟಣಕ್ಕೆ ಬರಬೇಕು. ನಿಜ, ಸರ್ಕಾರ ಜನ ಸಾಮಾನ್ಯರಿಗೆ ಉಚಿತ ವಿದ್ಯುತ್ ಗ್ಯಾರಂಟಿ ನೀಡಿದ್ದರೆ, ಈ ಕಡೆ ಹೊಸನಗರ ಪಟ್ಟಣ ಪಂಚಾಯಿತಿಯ ನೌಕರ ವರ್ಗ ತಮಗೂ ಈ ಉಚಿತ ವಿದ್ಯುತ್‌ ಗ್ಯಾರಂಟಿ ಇದೆ ಎಂದುಕೊಂಡಿದ್ದಾರೇನೋ ಎನ್ನುವಂತೆ ಬೆಳಗಾದರೂ ಪ್ರತೀದಿನ ಹತ್ತಾರು ವಿದ್ಯುತ್ ಬೀದಿ ದೀಪಗಳು ಸೂರ್ಯ ನೆತ್ತಿ ಮೇಲೆ ಬರುವವರೆಗೂ ಉರಿಯುವುದು ದಿನನಿತ್ಯದ ಕಥೆಯಾಗಿದೆ. ಜೊತೆಗೆ ಇದು ಹೊಸನಗರ ಪಟ್ಟಣ ಪಂಚಾಯಿತಿಯ ನೌಕರರ ಬೇಜವಾಬ್ದಾರಿತನಕ್ಕೂ ಹಿಡಿದ ಕೈಗನ್ನಡಿಯಾಗಿದೆ.

ಅವ್ಯವಸ್ಥೆಯ ಆಗರವೇ ಆಗಿರುವ ಹೊಸನಗರ ಪಟ್ಟಣ ಪಂಚಾಯಿತಿಯಲ್ಲಿ ಒಂದಲ್ಲ ಒಂದು ಸಮಸ್ಯೆಗಳು. ಈಗ ನೋಡಿದರೆ ಹಗಲಿನಲ್ಲೂ ಬೀದಿ ದೀಪ ಬೆಳಗಿಸುವ ಮೂಲಕ ಸರ್ಕಾರದ ಸಂಪನ್ಮೂಲದ ಬಗ್ಗೆ ತನಗೆಷ್ಟು ಕಾಳಜಿ ಇದೆ ಎನ್ನುವುದನ್ನು ತೋರಿಸಿಕೊಳ್ಳುತ್ತಿದೆ. ಅಂದಹಾಗೇ ಇಲ್ಲಿ ವಿದ್ಯುತ್ ಬೀದಿದೀಪಗಳ ನಿರ್ವಹಣೆಗೆ ಪ್ರತ್ಯೇಕ ನೌಕರರು ಎಂದಿಲ್ಲ. ಇಲ್ಲಿ ನೀರುಗಂಟಿಯೇ ಬೀದಿ ಬದಿಯ ವಿದ್ಯುತ್ ದೀಪಗಳ ನಿರ್ವಹಣೆ ಕೆಲಸದ ಹೊಣೆಗಾರಿಕೆ ಹೊತ್ತಿರುವುದು ಜಿಲ್ಲೆಯಲ್ಲೇ ವಿಶೇಷ ಸಂಗತಿ. ನೀರುಗಂಟಿ ವಿದ್ಯುತ್ ದೀಪಗಳ ನಿರ್ವಹಣೆಯನ್ನೇಕೆ ಮಾಡುತ್ತಾನೆ ಎನ್ನುವ ಪ್ರಶ್ನೆಯಲ್ಲೇ ಹೊಸನಗರ ಪಟ್ಟಣ ಪಂಚಾಯಿತಿಯ ಕಾರ್ಯವೈಖರಿ ಎಂತಹದ್ದು ಎನ್ನುವುದು ತಿಳಿದುಬಿಡುತ್ತದೆ.

ಬೀದಿ ದೀಪಗಳ ನಿರ್ವಹಣೆ ಟೆಂಡರ್ ಕಚೇರಿ ಪುಸ್ತಕಕ್ಕಷ್ಟೇ ಸೀಮಿತವಾಗಿದ್ದು, ನೀರುಗಂಟಿಯೋರ್ವನ ಕೈಗೆ ಟೆಂಡರುದಾರ ನೀಡುವ ಪುಡಿಗಾಸು ಏಕಕಾಲಕ್ಕೆ ಓರ್ವ ವ್ಯಕ್ತಿಯೇ ಎರಡೂ ಕಾರ್ಯ ನಿರ್ವಹಿಸುವಂತೆ ಮಾಡಿದೆ ಎನ್ನುವ ದೂರು ಕೇಳಿ ಬರುತ್ತಿದೆ. ಈ ಕಾರ್ಯ ಕೆಲವು ವರ್ಷಗಳಿಂದ ನಿರಂತರವಾಗಿ ಸಾಗಿ ಬಂದಿದೆ ಎನ್ನುವ ದೂರುಗಳು ಜನರಲ್ಲಿದೆ. ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುತ್ತಿರುವ ಹಾಗೂ ಖಾಯಂ ಮುಖ್ಯಾಧಿಕಾರಿಯೇ ಇಲ್ಲದ ಹೊಸನಗರ ಪಟ್ಟಣ ಪಂಚಾಯಿತಿ ಆಡಳಿತ ವೈಖರಿಯನ್ನು ಕೇಳುವವರೇ ಇಲ್ಲವಾಗಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಬಗ್ಗೆ ಚುರುಕು ಮುಟ್ಟಿಸಲಿ ಎಂಬುದೇ ನಾಗರೀಕರ ಆಶಯವಾಗಿದೆ.

ಕಾಮೆಂಟ್‌ಗಳಿಲ್ಲ