ಶಾಸಕ ಬೇಳೂರು ಗೋಪಾಲಕೃಷ್ಣ ಅವರ ವಿದೇಶ ಪ್ರವಾಸ ಪೂರ್ವ ನಿಯೋಜಿತ ಕಾರ್ಯಕ್ರಮ, ರಾಜಕೀಯ ಬಣ್ಣ ಬಳಿಯಬೇಡಿ - ಹೊಸನಗರ ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ
ಹೊಸನಗರ : ಶಾಸಕ ಬೇಳೂರು ಗೋಪಾಲಕೃಷ್ಣ ಅವರ ವಿದೇಶ ಪ್ರವಾಸ ಪೂರ್ವ ನಿಯೋಜಿತ ಕಾರ್ಯಕ್ರಮವಾಗಿದ್ದು, ಈ ಕುರಿತು ವಿರೋಧಿಗಳ ಮಾತಿಗೆ ಕ್ಷೇತ್ರದ ಜನತೆ ಕಿವಿಗೊಡಬಾರದು ಎಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ ವಿನಂತಿಸಿದರು.
ಪಟ್ಟಣದ ಗಾಂಧಿ ಮಂದಿರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಹಾನಿ, ಪ್ರಕೃತಿ ವಿಕೋಪ, ಡೆಂಗ್ಯೂನಂತಹ ಭೀಕರ ಕಾಲಘಟ್ಟವು ಸೇರಿದಂತೆ ತಾಲ್ಲೂಕಿನ ಎಲ್ಲಾ ಸಮಸ್ಯೆಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಕ್ತ ಪರಿಹಾರ ನೀಡಲಿದ್ದಾರೆ. ವಿದೇಶದಲ್ಲಿದ್ದರೂ ತಾಲ್ಲೂಕಿನ ಹಿರಿಯ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಸಮಸ್ಯೆಗಳಿಗೆ ತಕ್ಷಣ ಅಗತ್ಯ ಪರಿಹಾರ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದಾರೆ ಎಂದು ಹೇಳಿದರು.
ಹೊಸನಗರ ತಾಲ್ಲೂಕಿನಲ್ಲಿ ಮಳೆಯಿಂದ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ಶಾಸಕ ಬೇಳೂರು ಆಪ್ತರಿಂದ ಮುಂದುವರಿದ ಧನ ಸಹಾಯ
ಕೆಲವು ಮಾಧ್ಯಮಗಳಲ್ಲಿ ಬಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಗೂಂಡಾಗಿರಿ ಮಾಡುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ಗೂಂಡಾ ಸಂಸ್ಕೃತಿ ಬಿಜೆಪಿಯದ್ದು. ಕಾಂಗ್ರೆಸ್ಸಿನಲ್ಲಿ ಗೂಂಡಾಗಿರಿಗೆ ಮನ್ನಣೆಯೇ ಇಲ್ಲ. ಜನರೊಂದಿಗೆ ಬೆರೆತು ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವುದು ಪಕ್ಷದ ಸಂಸ್ಕೃತಿ. ಇದನ್ನು ಅನಾದಿ ಕಾಲದಿಂದಲೂ ಪಕ್ಷ ರೂಢಿಸಿಕೊಂಡು ಬಂದಿದೆ. ಮಳೆಹಾನಿ, ಪ್ರಕೃತಿ ವಿಕೋಪಕ್ಕೆ ಶಾಸಕರ ಸೂಚನೆ ಮೇರೆಗೆ ಸಮರೋಪಾದಿಯಲ್ಲಿ ಕೆಲಸ ಸಾಗಿದೆ. ಸ್ವತಃ ತಹಶೀಲ್ದಾರ್, ಇಓ, ಶಾಸಕರ ಆಪ್ತ ಸಹಾಯಕರೇ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಿಸಲು ಒಗ್ಗೂಡಿ ಶ್ರಮಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಸಂತ್ರಸ್ತರಿಗೆ ಶಾಸಕರು ತಮ್ಮ ಆಪ್ತರ ಮೂಲಕ ಆರ್ಥಿಕ ಸಹಾಯ ನೀಡಿದ್ದಾರೆ ಎಂದು ವಿವರಿಸಿದರು.
ಶಾಸಕರಾಗಿ ಬೇಳೂರು ವರ್ಷ ಕಳೆದಿದ್ದರೂ ಅದರಲ್ಲಿ ಮೂರ್ನಾಲ್ಕು ತಿಂಗಳು ಲೋಕಸಭಾ ಚುನಾವಣೆಯಿಂದಾಗಿ ಅಧಿಕಾರ ಚಲಾವಣೆಗೆ ಹಿನ್ನಡೆಯಾಗಿದೆ. ಶಾಸಕರು ಈಗಾಗಲೇ ಹತ್ತು ಹಲವು ಹೊಸ ಕಾಮಗಾರಿಗಳ ಜೊತೆಗೆ ಸರ್ಕಾರದಿಂದ ರಸ್ತೆ, ಸೇತುವೆ ಶಾಲಾ-ಕಾಲೇಜುಗಳ ದುರಸ್ತಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಹತ್ತಾರು ಕೋಟಿ ಅನುದಾನ ತಂದಿದ್ದು, ಮಳೆಗಾಲದ ಬಳಿಕ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ. ಹಿಂದಿನ ಬಿಜೆಪಿ ಶಾಸಕರ ಕೆಲವು ಕಾಮಗಾರಿಗಳು ಸಹ ಇದೇ ವೇಳೆ ಲೋಕಾರ್ಪಣೆ ಗೊಳ್ಳಲಿದೆ. ಇದಕ್ಕೆ ರಾಜಕೀಯದ ಬಣ್ಣ ಬಳಿಯುವ ಅಗತ್ಯವಿಲ್ಲ ಎಂದು ಹೇಳಿದರು.
ವಿದೇಶದಲ್ಲಿ ಇರುವ ತಮ್ಮ ಮಗಳ ಮನೆಗೆ ಶಾಸಕ ಬೇಳೂರು ಇದೇ ಮೊದಲ ಬಾರಿಗೆ ಕುಟುಂಬ ಸಹಿತ ಪ್ರವಾಸ ಕೈಗೊಂಡಿದ್ದು, ವಿರೋಧಿಗಳು ಶಾಸಕರ ಕುಟುಂಬದ ಸ್ವಂತ ವಿಚಾರಗಳಿಗೆ ವಿಶೇಷ ಬಣ್ಣ ಕೊಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗದಂತೆ ಅವರು ಕಿವಿಮಾತು ಹೇಳಿದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಸದಾಶಿವ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಂಬರ, ಟೌನ್ ಘಟಕದ ಅಧ್ಯಕ್ಷ ಕೆ.ಎಸ್.ಗುರುರಾಜ್, ಪ್ರಮುಖರಾದ ಉಬೇದ್, ಏರಗಿ ಉಮೇಶ್, ನೋರಾ ಮೆಟಲ್ಡಾ ಸಿಕ್ವೇರಾ, ಮಂಜುಳ, ಪ್ರಭಾಕರ್, ಶ್ರೀನಿವಾಸ ಕಾಮತ್, ಸಣ್ಣಕ್ಕಿ ಮಂಜು ಮೊದಲಾದವರು ಇದ್ದರು.
ಕಾಮೆಂಟ್‌ಗಳಿಲ್ಲ