VIDEO REPORT - ವಿದೇಶದಿಂದಲೇ ಹೊಸನಗರ ತಾಲ್ಲೂಕಿನ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಜನರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು
ಹೊಸನಗರ : ತಾಲ್ಲೂಕಿನೆಲ್ಲೆಡೆ ವಿಪರೀತ ಮಳೆಯಿಂದ ಅನಾಹುತಗಳು ಸಂಭವಿಸುತ್ತಿರುವಾಗ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ವಿದೇಶ ಪ್ರವಾಸದಲ್ಲಿರುವ ಬಗ್ಗೆ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಇಂದು ತಮ್ಮ ಕ್ಷೇತ್ರ ವ್ಯಾಪ್ತಿಯ ಹೊಸನಗರ ತಾಲ್ಲೂಕಿನ ಅಧಿಕಾರಿಗಳೊಂದಿಗೆ ವಿದೇಶದಿಂದಲೇ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ವಿಡಿಯೋ ಸಂವಾದ ನಡೆಸಿದರು. ಇಂದು ಮಧ್ಯಾಹ್ನ ಎರಡೂವರೆ ಸುಮಾರಿಗೆ ಸಾಗರ ಮತ್ತು ಹೊಸನಗರ ತಾಲ್ಲೂಕಿನ ಸರ್ಕಾರಿ ಅಧಿಕಾರಿಗಳೊಂದಿಗೆ ಕ್ಷೇತ್ರದ ಸ್ಥಿತಿಗತಿಗಳ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಿಸಿದ ಶಾಸಕರು, ಅತಿವೃಷ್ಟಿಯಿಂದ ತೊಂದರೆಗೊಳಗಾದವರಿಗೆ ಸೂಕ್ತ ನೆರವು ನೀಡುವಂತೆ ಸೂಚಿಸಿದರು. ಹಾಗೂ ಜನರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಲ್ಲಿ ಎಲ್ಲಾ ಇಲಾಖೆಗಳೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ತಹಶೀಲ್ದಾರ್ ರಶ್ಮಿ ಹೆಚ್.ಜೆ ಅವರು ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಸೇರಲ್ಪಡುವ ಹೊಸನಗರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಮನೆ ಹಾಗೂ ಕೊಟ್ಟಿಗೆಗಳಿಗೆ ಆಗಿರುವ ಹಾನಿ ಮತ್ತು ಅದಕ್ಕೆ ನೀಡಬಹುದಾದ ಸೂಕ್ತ ಪರಿಹಾರದ ಬಗ್ಗೆ ಶಾಸಕರಿಗೆ ವಿವರಿಸಿದರು. ಟಿಹೆಚ್ಓ ಸುರೇಶ್ ಅವರು ಡೆಂಗ್ಯೂ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು. ಫಾಗಿಂಗ್ ವಾರಕ್ಕೊಮ್ಮೆ ಮಾಡುತ್ತಿದ್ದು, ಫಾಂಗಿಂಗ್ ಯಂತ್ರವನ್ನು ಖರೀದಿಸಿದ್ದೇವೆ ಎಂದು ವಿವರಿಸಿದ ತಾಲ್ಲೂಕು ಪಂಚಾಯ್ತಿ ಇಓ ನರೇಂದ್ರಕುಮಾರ್ ಅವರು, ತಾಲ್ಲೂಕಿನಲ್ಲಿ ಮಳೆಯಿಂದ ಆಗಿರುವ ರಸ್ತೆ ಹಾನಿ ಬಗ್ಗೆ ಶಾಸಕರಿಗೆ ಅಂಕಿ ಅಂಶಗಳನ್ನು ನೀಡಿದರು. ವಲಯ ಅರಣ್ಯ ಅಧಿಕಾರಿ ರಾಘವೇಂದ್ರ ಅವರು, ರಸ್ತೆಗೆ ಬಿದ್ದ ಮರಗಳನ್ನು ಕೂಡಲೇ ತೆರವು ಮಾಡಿದ್ದರ ಬಗ್ಗೆ ವಿವರಿಸಿ, ಅಪಾಯಕಾರಿ ಅನ್ನಿಸಿದ ಮರಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ತೆರವುಗೊಳಿಸಿದ್ದಾಗಿ ಹೇಳಿದರು. ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಅವರು ತಾಲ್ಲೂಕಿನಲ್ಲಿ ಮಳೆ ಸಂತ್ರಸ್ತರಿಗೆ ಮಾಡಿದ ನೆರವಿನ ಬಗ್ಗೆ ಶಾಸಕರಿಗೆ ವಿವರಿಸಿದರು.
ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಂಡು, ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲಾ ಅಧಿಕಾರಿಗಳೂ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಹೇಳಿದರು.
ವಿಡಿಯೋ ಕಾನ್ಫರೆನ್ಸಿನಲ್ಲಿ ತಹಶೀಲ್ದಾರ್ ರಶ್ಮಿ ಹೆಚ್.ಜೆ, ತಾಲ್ಲೂಕು ಪಂಚಾಯ್ತಿ ಇಓ ನರೇಂದ್ರ ಕುಮಾರ್, ಟಿಹೆಚ್ಓ ಸುರೇಶ್, ಮೆಸ್ಕಾಂ ಎಇಇ ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ವಲಯ ಅರಣ್ಯ ಅಧಿಕಾರಿ ರಾಘವೇಂದ್ರ, ಶಾಸಕರ ಆಪ್ತ ಸಹಾಯಕ ಸಣ್ಣಕ್ಕಿ ಮಂಜು ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.
ಕಾಮೆಂಟ್‌ಗಳಿಲ್ಲ