Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ - ಮನುಷ್ಯನ ದುರಾಸೆಯಿಂದ ಅರಣ್ಯ ಸಂಪತ್ತು ನಾಶ - ನ್ಯಾಯಾಧೀಶ ಫಾರೂಕ್ ಝರೆ

ಹೊಸನಗರ : ಹಿಂದೆ ಮಳೆ ಬೆಳೆ ಚೆನ್ನಾಗಿತ್ತು. ಪರಿಸರ ಸಮೃದ್ಧವಾಗಿತ್ತು. ಆದರೆ ಮನುಷ್ಯ ತನ್ನ ದುರಾಸೆ ಮತ್ತು ವೈಯಕ್ತಿಕ ಲಾಭಕ್ಕಾಗಿ ದೈವದತ್ತವಾಗಿ ಬಂದ ಅರಣ್ಯ ಸಂಪತ್ತನ್ನು ನಾಶ ಮಾಡಲಾರಂಭಿಸಿದ. ಇದರಿಂದಾಗಿ ಈಗ ಪರಿಸರದ ಹಾನಿಯ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದೇವೆ. ಈ ಮೂಲಕ ನಮ್ಮ ಕಷ್ಟವನ್ನು ನಾವೇ ಬರಮಾಡಿಕೊಂಡಿದ್ದು, ಮೊದಲಿನ ಹಾಗೆ ಮಳೆಗಾಲದಲ್ಲಿ ಮಳೆಯಾಗುವುದಿಲ್ಲ. ಯಾವ ಕಾಲದಲ್ಲಿ ಏನು ಬೇಕಾದರೂ ಆಗುತ್ತಿದೆ. ಪರಿಸರ ಅಸಮತೋಲನಗೊಂಡಿದೆ ಎಂದು ಹೊಸನಗರ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ವ್ಯವಹಾರ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಫಾರೂಕ್  ಝುರೆ ಅವರು ಕಳವಳ ವ್ಯಕ್ತಪಡಿಸಿದರು.

ಇಂದು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹೊಸನಗರ, ವಕೀಲರ ಸಂಘ ಹೊಸನಗರ ಮತ್ತು ಅಭಿಯೋಜನಾ ಇಲಾಖೆ ಹೊಸನಗರ ಇವರು ಅರಣ್ಯ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡಗಳನ್ನು ನೆಟ್ಟು ನೀರೆರೆಯುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ವಿಶ್ವ ಪರಿಸರ ದಿನದಂದು ಸಸಿ ನೆಡುವುದರಿಂದ ಆಗುವ ಉಪಯೋಗ, ಅರಣ್ಯ ಸಂರಕ್ಷಣೆಯ ಅಗತ್ಯತೆಯನ್ನು ಜನರಿಗೆ ಮನವರಿಕೆ ಮಾಡಿಕೊಡಲು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ ಎಂದ ಫಾರೂಕ್  ಝುರೆ ಅವರು, ರಾಜ್ಯ ಉಚ್ಚ ನ್ಯಾಯಾಲಯ, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ವಿವಿಧ ಬಗೆಯ ಹತ್ತು ಸಾವಿರ ಸಸಿಗಳನ್ನು ನೆಡುವ ಯೋಜನೆ ನಮ್ಮದಾಗಿದ್ದು, ಇದಕ್ಕಾಗಿ ನಾವು ಸಂಬಂಧಿಸಿದ ಇಲಾಖೆಯೊಂದಿಗೆ ಈಗಾಗಲೇ ಪೂರ್ವಭಾವಿ ಸಭೆ ನಡೆಸಿದ್ದು, ಅದಕ್ಕೆ ಇಂದು ಚಾಲನೆ ನೀಡಲಾಗಿದೆ. ನಾಗರೀಕರೆಲ್ಲರೂ ಅರಣ್ಯ ಉಳಿಸುವ ನಿಟ್ಟಿನಲ್ಲಿ ಮುಂದಾಗಬೇಕಾಗಿದೆ ಎಂದು ಕರೆ ನೀಡಿದರು.

ಹೊಸನಗರ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಹೆಚ್. ಚಂದ್ರಪ್ಪ ಮಾತನಾಡಿ, ನಮ್ಮ ಬದುಕಿಗೆ ಅಗತ್ಯವಾದ ಆಮ್ಲಜನಕ ಬರುವುದೇ ಗಿಡ ಮರಗಳಿಂದ. ಆದರೆ ಇಂತಹ ಗಿಡ ಮರಗಳನ್ನೇ ನಾವು ನಾಶ ಮಾಡುತ್ತಿದ್ದು, ಕೋವಿಡ್ ಸಮಯದಲ್ಲಿ ನಾವು ಆಕ್ಸಿಜನ್ನಿಗಾಗಿ ಪರದಾಡಿದ್ದೇವೆ. ಇನ್ನಾದರೂ ನಾವು ಎಚ್ಚೆತ್ತುಕೊಂಡು ಅರಣ್ಯ ನಾಶವನ್ನು ತಡೆಗಟ್ಟಬೇಕಾಗಿದೆ ಹಾಗೂ ನಾವೆಲ್ಲರೂ ಗಿಡ ನೆಡುವ ಮೂಲಕ ಪರಿಸರ ಸಮೃದ್ಧಿಗೆ ಕಾರಣವಾಗಬೇಕಿದೆ ಎಂದು ಹೇಳಿದರು.

ಹೊಸನಗರ ವಲಯ ಅರಣ್ಯ ಅಧಿಕಾರಿ ಎಂ. ರಾಘವೇಂದ್ರ ಅವರು ಮಾತನಾಡಿ, ವಿಶ್ವ ಪರಿಸರ ದಿನವನ್ನು ನಾವು ಈ ಒಂದು ದಿನಕ್ಕೆ ಸೀಮಿತವಾಗಿಟ್ಟಿಲ್ಲ. ತಾಲ್ಲೂಕಿನಲ್ಲಿ ನಾಳೆಯಿಂದ ಗ್ರಾಮೀಣ ಭಾಗದ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರೊಂದಿಗೆ ವನ ಮಹೋತ್ಸವವನ್ನು ಹಮ್ಮಿಕೊಂಡಿದ್ದೇವೆ. ಜನರು ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳಲು ಇಲಾಖೆ ನಿರಂತರವಾಗಿ ಕೆಲಸ ಮಾಡುತ್ತಿದ್ದು, ಎಲ್ಲರೂ ಸೇರಿ ನೆಟ್ಟ ಗಿಡಗಳನ್ನು ಉಳಿಸಿಕೊಳ್ಳೋಣ, ಗಿಡ ನೆಡುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರಲ್ಲದೇ, ಹೊಸನಗರ ನ್ಯಾಯಾಲಯದ ಆವರಣದಲ್ಲಿ ಈ ಹಿಂದೆ ವಿಶ್ವ ಪರಿಸರ ದಿನದಂದು ನೆಟ್ಟ ಗಿಡಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅವುಗಳ ಕಾಳಜಿ ಮಾಡುತ್ತಿದ್ದು, ಗಿಡಗಳನ್ನು ಕಾಪಾಡುವ ನಿಟ್ಟಿನಲ್ಲಿ ನಮ್ಮ ಕಾಳಜಿ ಹೀಗೇ ಮುಂದುವರಿಯಲಿದೆ ಎಂದರು.

ಈ ಸಂದರ್ಭದಲ್ಲಿ ಜೆಎಂಎಫ್‌‌ಸಿ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕರಾದ ಕೆ. ರವಿ ಪೂವಯ್ಯ, ಉಪವಲಯ ಅರಣ್ಯಾಧಿಕಾರಿ ಯುವರಾಜ್, ಗಸ್ತು ಅರಣ್ಯ ಪಾಲಕ ವಿ. ಸುರೇಶ್, ದಿವಾಕರ, ರಮೇಶ, ರಾಮಪ್ಪ ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ