ಹೊಸನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ
ಹೊಸನಗರ : ಮಕ್ಕಳು ಕಲಿಕೆಯ ಅವಧಿಯಲ್ಲಿ ಸದ್ಗುಣ ಬೆಳೆಸಿಕೊಂಡು, ಉತ್ತಮ ಅಭ್ಯಾಸವನ್ನು ರೂಢಿಸಿಕೊಂಡು ಮಾದಕ ವಸ್ತುಗಳಿಂದ ದೂರ ಇರುವ ಮೂಲಕ ವಿದ್ಯಾರ್ಥಿ ಜೀವನವನ್ನು ಭವಿಷ್ಯದ ಭದ್ರ ಮೆಟ್ಟಿಲುಗಳನ್ನಾಗಿಸಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಹೊಸನಗರ ಕುವೆಂಪು ವಸತಿ ವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯರು ಹಾಗೂ ಆಡಳಿತಾಧಿಕಾರಿಗಳಾದ ಶ್ರೀನಿವಾಸ್ ಸೊನಲೆ ಇವರು ಕಿವಿಮಾತು ಹೇಳಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮೋಜಿಗಾಗಿ ಪ್ರಾರಂಭಿಸಿದ ಅಭ್ಯಾಸ ಚಟವಾಗಿ ರೂಪುಗೊಳ್ಳುವುದು ಬೇಡ. ಪೋಷಕರಲ್ಲಿ ದುರ್ಗುಣವಿದ್ದರೂ ಕೂಡಾ ಮಕ್ಕಳು ಅದರಿಂದ ಪ್ರಭಾವಿತರಾಗಿ ಅವರನ್ನು ಅನುಸರಿಸದೆ ದುಶ್ಚಟ, ದುರಾಭ್ಯಾಸ ಅಳವಡಿಸಿಕೊಳ್ಳದೆ ಆದರ್ಶ ವ್ಯಕಿಗಳಾಗಿ ಸಮಾಜಕ್ಕೆ ಒಳ್ಳೆಯ ಕೊಡುಗೆ ಕೊಡಿ ಎಂದು ಹೇಳಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ದೇವಾನಂದ ಆರ್. ಅವರು ಮಾತನಾಡಿ, ತಂದೆ ತಾಯಿಗಳ ಶ್ರಮ ವ್ಯರ್ಥ ಮಾಡದಂತೆ ಮಕ್ಕಳು ಓದಿನಲ್ಲಿ ಹೆಚ್ಚು ಆಸಕ್ತಿ ವಹಿಸಿ, ಉತ್ತಮ ಜ್ಞಾನ ಸಂಪಾದಿಸಿ ಉನ್ನತ ಹುದ್ದೆ ಕೂಡ ಅಲಂಕರಿಸಿದ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ. ಇದನ್ನೇ ನೀವು ಆದರ್ಶವಾಗಿರಿಸಿಕೊಂಡು ಸದಾಚಾರ ಬೆಳೆಸಿಕೊಳ್ಳುತ್ತಾ ಸದೃಢ ರಾಷ್ಟ್ರ ನಿರ್ಮಾಣದ ಸಂಕಲ್ಪ ತೊಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಸ್ವಾಮಿರಾವ್ ಅವರು ಮಾತನಾಡಿ, ಪೂಜ್ಯ ವೀರೇಂದ್ರ ಹೆಗ್ಗಡೆಯವರು ಕೈಗೊಂಡ ಸಮಾಜಮುಖಿ ಕಾರ್ಯಕ್ರಮಗಳು ಶಾಲಾ ಕಾಲೇಜಿನ ಮಕ್ಕಳಿಗೆ ಮಾದಕ ವಸ್ತು ನಿರ್ಮೂಲನೆಗೆ ದಾರಿದೀಪದಂತಿವೆ. ಕಾಲೇಜಿನ ಎಲ್ಲಾ ವಿಭಾಗಕ್ಕೂ ಇಂತಹ ಮಾಹಿತಿ ಅಗತ್ಯವಿದ್ದು, ಎಲ್ಲಾ ಮಕ್ಕಳಿಗೂ ಈ ಕುರಿತು ಮಾಹಿತಿ ಕೊಡಿಸುವ ಮೂಲಕ ಮಾದಕ ವಸ್ತು ನಿರ್ಮೂಲನೆಗೆ ಪಣ ತೊಡೋಣ ಎಂದು ಹೇಳಿದರು.
ಈ ಕಾರ್ಯಕ್ರಮದ ಮೂಲಕ 98 ಮಕ್ಕಳಿಗೆ ಮಾಹಿತಿ ನೀಡಲಾಯಿತು..ಹೊಸನಗರ ವಲಯದ ಮೇಲ್ವಿಚಾರಕರಾದ ಸುಭಾಷ್ ಪ್ರಾಸ್ತಾವಿಕ ಮಾತನಾಡಿದರು. ಸೇವಾಪ್ರತಿನಿಧಿ ಸುಮತಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಸೀಮಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಮಹಾಂತೇಶ್ ಮತ್ತು ಸಂತೋಷ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ