Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಪಕ್ಷದ ಕಾರ್ಯಕರ್ತರು ಸೋಲುಗಳಿಂದ ಧೃತಿಗೆಡದಂತೆ ಧೈರ್ಯ ತುಂಬಲು ಹೊಸನಗರಕ್ಕೆ ಆಗಮಿಸಿದ ಕಿಮ್ಮನೆ ರತ್ನಾಕರ್‌ - 100 ಕೋಟಿ ಹಂಚಿದರೆ ಒಂದು ಕ್ಷೇತ್ರದ ಚುನಾವಣಾ ಫಲಿತಾಂಶವೇ ಬದಲಾಗುವ ಸಾಧ್ಯತೆ ಇದೆ : ಕಿಮ್ಮನೆ ರತ್ನಾಕರ್‌

ಹೊಸನಗರ : ತಮ್ಮ ಪಕ್ಷದ ಕಾರ್ಯಕರ್ತರು ಸೋಲುಗಳಿಂದ ಧೃತಿಗೆಡದಂತೆ ಧೈರ್ಯ ತುಂಬಲು ಇಂದು ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್‌ ಅವರು ಹೊಸನಗರಕ್ಕೆ ಆಗಮಿಸಿ, ಕಾಂಗ್ರೆಸ್ ಕಚೇರಿ ಗಾಂಧಿ ಮಂದಿರದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಿಮ್ಮನೆ ರತ್ನಾಕರ್ ಅವರು, ಇದೊಂದು ಕೋಮುವಾದ, ಹಣದ ಹಂಚಿಕೆಯ ಚುನಾವಣೆಯಾಗಿದ್ದು, 6ನೇ ತಾರೀಖು ಒಂದೇ ದಿನ ಹಂಚಿದ ಹಣವೇ ಚುನಾವಣಾ ಫಲಿತಾಂಶ ಬದಲಾಗಲು ಕಾರಣವಾಯಿತು. ಆದ್ದರಿಂದ ನೂರು ಕೋಟಿ ಹಂಚಿದರೆ ಒಂದು ಕ್ಷೇತ್ರದ ಚುನಾವಣಾ ಫಲಿತಾಂಶವೇ ಬದಲಾಗುವ ಪರಿಸ್ಥಿತಿ ಬರುತ್ತದೆ ಎಂದರು.

ಈ ಸಂದರ್ಭ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಫಲಿತಾಂಶದ ಮೇಲೆ ಅಧಿಕಾರದಲ್ಲಿದ್ದ ಸರ್ಕಾರ ಪ್ರಭಾವ ಬೀರಲು ಸಾಧ್ಯವಿದೆ. ಮೋದಿ ಕ್ಷೇತ್ರದ ಚುನಾವಣೆಯನ್ನು ಕೊನೆಯಲ್ಲಿ ನಿಗದಿಗೊಳಿಸಿದ್ದೇ ಇದಕ್ಕೊಂದು ಉದಾಹರಣೆ. ಚುನಾವಣಾ ಆಯೋಗ ಮತ್ತು ಕಮೀಷನರ್ ಮೇಲೆ ನಂಬಿಕೆಯಿದೆಯೇ ಎಂದು ಮಾಧ್ಯಮದವರಿಗೇ ಪ್ರಶ್ನಿಸಿದರು.

ಅಧೀರರಾಗುವುದು, ಸೋತು ಬಿಟ್ಟೆವು ಎಂದು ಯೋಚನೆ ಮಾಡಬೇಕಾದ ಅಗತ್ಯವಿಲ್ಲ ಎಂದು ಹೇಳಿದ ಕಿಮ್ಮನೆ ರತ್ನಾಕರ್ ಅವರು, ಸೋಲುಗಳನ್ನು ನಾವು ತಾತ್ಕಾಲಿಕವಾಗಿ ತೆಗೆದುಕೊಳ್ಳಬೇಕು. ಇವತ್ತು ಅಧಿಕಾರ ಮತ್ತು ಹಣಕ್ಕಾಗಿ ಯೋಚನೆ ಮಾಡುವವರಿಗೆ ಇಂತಹ ಸೋಲುಗಳಿಂದ ಭ್ರಮನಿರಸನ ಆಗುತ್ತದೆಯೇ ಹೊರತು, ಸೈದ್ಧಾಂತಿಕವಾಗಿ ಹೋರಾಟ ಮಾಡುವ ನಮಗೆ ಫಲಿತಾಂಶ ಧೃತಿಗೆಡಿಸುವುದಿಲ್ಲ. ಹಿಂದಕ್ಕೆ ಸರಿಸುವುದೂ ಇಲ್ಲ. ಹಿಂದಕ್ಕೆ ಸರಿಸುವುದಾಗಿದ್ದರೆ ನಾನು ಯಾವತ್ತೋ ಗೂಡು ಸೇರಿಕೊಳ್ಳಬೇಕಾಗಿತ್ತು ಎಂದು ತಮ್ಮ ಸೋಲನ್ನು ಉದಾಹರಣೆಯಾಗಿ ನೀಡಿದರು.

ಸೈದ್ಧಾಂತಿಕವಾಗಿ ನಾವು ಹೋರಾಟ ಮಾಡಬೇಕು. ರಾಷ್ಟ್ರೀಯ ಮಟ್ಟದಲ್ಲಿ ರಾಹುಲ್ ಗಾಂಧಿಯವರು ತೆಗೆದುಕೊಂಡ ನಿಲುವು ಮೋದಿಯವರ ಅಹಂಕಾರ ಮುರಿದಿದೆ. ಈಗ ಮೋದಿಯವರ ಪರಿಸ್ಥಿತಿ ಹೇಗಾಗಿದೆ ಎಂದರೆ ಪ್ರಧಾನಿ ಕುರ್ಚಿ ಮಾತ್ರ ಅವರ ಬಳಿಯಿದ್ದು, ಅದರ ಕಾಲುಗಳೆಲ್ಲ ಬೇರೆಯವರ ಕೈಯಲ್ಲಿದೆ ಎಂದು ಹೇಳಿದ ಅವರು, ಅಲ್ಲಿ ಸೊಂಟ ಮುರಿದಿರುವುದರಿಂದಲೇ ಇಲ್ಲಿ ರಾಘವೇಂದ್ರ ಗೆಲುವನ್ನು ಕಾರ್ಯಕರ್ತರು ಪೂರ್ಣ ಪ್ರಮಾಣದಲ್ಲಿ ಆಚರಿಸಲಿಲ್ಲ. ಎಲ್ಲರೂ ಹೊಡೆದರು ಎಂದು ಒಂದು ಪಟಾಕಿ ಹೊಡೆದು ಸುಮ್ಮನಾದರು ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಬಿ. ಆರ್. ಪ್ರಭಾಕರ್, ಬಿ.ಜಿ. ನಾಗರಾಜ್, ಕರುಣಾಕರ ಶೆಟ್ಟಿ, ಉದಯ್ ಗೌಡ, ಟಾಕಪ್ಪ, ಇಕ್ಬಾಲ್, ಶಂಕ್ರಪ್ಪ, ಉಬೇದ್, ಜಯನಗರ ಗುರು ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ