SPECIAL CRIME STORY - ಹೊಂಬುಜದ ಮುತ್ತಿನಕೆರೆಯಲ್ಲಿ ತೇಲಿದ ಹೆಣ ಬಾಯಿ ಬಿಟ್ಟ ಭೀಕರ ಸತ್ಯಗಳು!!
ಮಯೂರ ಭಟ್ಟ ಕೋಡೂರು ಗ್ರಾಮದ ಕೀಳಂಬಿ ಎನ್ನುವ ಸಣ್ಣ ಹಳ್ಳಿಯ ಹುಡುಗ. ಓದು ಮುಗಿದ ನಂತರ ಅಲ್ಲಿ ಇಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದವನು, ತನ್ನ ಕಾಂಟ್ಯಾಕ್ಟು ಚೆನ್ನಾಗಿದೆ ಎಂದು ತೋರಿಸಿಕೊಳ್ಳಲು ಎಲ್ಲಾ ಫೀಲ್ಡಿನ ಜನರೊಂದಿಗೂ ಆತ್ಮೀಯವಾಗಿರಲು ಪ್ರಯತ್ನಿಸುತ್ತಿದ್ದ. ಆಧುನಿಕ ಟೆಕ್ನಾಲಜಿ ಗೊತ್ತಿಲ್ಲದ ಹಳ್ಳಿ ಜನರಿಗೆ ಸಹಾಯ ಮಾಡುವ ನೆಪದಲ್ಲಿಯೂ ಹತ್ತಿರವಾಗುತ್ತಿದ್ದ. ಹೀಗೆ ಹತ್ತಿರವಾದವನು ಸಣ್ಣ ಪ್ರಮಾಣದ ಹಣವನ್ನೂ ವಂಚಿಸುತ್ತಿದ್ದ. ಆದರೆ ಅದು ಸಾಲುತ್ತಿರಲಿಲ್ಲವೇನೋ, ಅದಕ್ಕೇ ನಿಧಾನವಾಗಿ ಕಳ್ಳತನಕ್ಕೂ ಇಳಿದ. ಇದರಿಂದಾಗಿಯೇ ಕೋಡೂರು ಗ್ರಾಮದಲ್ಲಿ ಈತನನ್ನು ಹೆಚ್ಚಿನವರು ಅನುಮಾನದಿಂದ ನೋಡಲಾರಂಭಿಸಿದ್ದರು. ಹಾಗೆಂದು ಪೊಲೀಸ್ ಕೇಸ್ ಆಗುವಂತಹ ಕಳ್ಳತನಕ್ಕೆ ಇಳಿದಿರಲಿಲ್ಲ ಅಥವಾ ಈತ ಮಾಡುತ್ತಿದ್ದ ಕಳ್ಳತನದ ಹೆಜ್ಜೆಗುರುತು ಪತ್ತೆ ಹಚ್ಚಲು ಪೊಲೀಸರು ಸೋತಿದ್ದರು. ಆದರೆ ಒಂದಲ್ಲ ಒಂದು ದಿನ ಕಳ್ಳ ಸಿಕ್ಕಿಬಿದ್ದೇ ಬೀಳುತ್ತಾನೆ, ಸಣ್ಣದಾದರೂ ಸರಿ ಕಳ್ಳತನದ ಗುರುತೊಂದನ್ನು ಬಿಟ್ಟು ಹೋಗಿರುತ್ತಾನೆ ಎನ್ನುವಂತೆ ಮಯೂರ ಭಟ್ಟ ಕೂಡಾ ಪೊಲೀಸರು ಸದ್ದಿಲ್ಲದೇ ಬೀಸಿದ್ದ ಬಲೆಗೆ ಹತ್ತಿರವಾಗುತ್ತಿದ್ದ. ಕೆಲವು ತಿಂಗಳುಗಳ ಹಿಂದೆ ಹೊಸನಗರ ತಾಲ್ಲೂಕಿನ ಕೆಲವು ಭಾಗದಲ್ಲಿ ಮೊಬೈಲ್ ಟವರ‌್ರುಗಳ ಬ್ಯಾಟರಿ ಕಳ್ಳತನ ಹೆಚ್ಚಾಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ಕೂಡಾ ಬಂದಿತ್ತು. ಬ್ಯಾಟರಿ ಕಳ್ಳರು ಯಾರು ಎಂದು ತನಿಖೆಗೆ ಹೊರಟ ಪೊಲೀಸರು ಸೀದಾ ಬಂದು ತಲುಪಿದ್ದು ಕೋಡೂರು ಕೀಳಂಬಿಯ ಮಯೂರ ಭಟ್ಟನ ಮನೆಗೆ!
ಹೀಗೆ ಕಳ್ಳತನ ಪ್ರಕರಣದಲ್ಲಿ ಮೊದಲ ಕೇಸ್ ಜಡಿಸಿಕೊಂಡಿದ್ದ ಮಯೂರ ಭಟ್ಟ.
ಕೆಲವು ದಿನ ಜೈಲು ಕಂಡು ಬಂದವನು ಇದರ ಸಹವಾಸವಲ್ಲ ಎಂದು ಬದಲಾಗಬಹುದಿತ್ತು. ಆದರೆ ಯಾಕೋ ಈತ ಬದಲಾಗಲಿಲ್ಲ. ವಂಚನೆ ಮತ್ತು ಕಳ್ಳತನದಿಂದಲೇ ಹೊಟ್ಟೆ ತುಂಬಿಸಿಕೊಳ್ಳಬೇಕು ಎಂದು ನಿರ್ಧರಿಸಿದ್ದ ಮಯೂರ ಭಟ್ಟ ಈಗ ಶಿವಮೊಗ್ಗದ ಹೊಳಲೂರಿನ ಅಮಾಯಕ ಮಹಿಳೆಯೊಬ್ಬರ ಭೀಕರ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದಾನೆ. ಜೊತೆಗೆ ಅಪ್ರಾಪ್ತನೊಬ್ಬನನ್ನೂ ಈ ಕೊಲೆ ಪ್ರಕರಣದಲ್ಲಿ ಜೊತೆ ಮಾಡಿಕೊಂಡು ಆತನ ಬದುಕನ್ನೂ ಹಾಳು ಮಾಡಿದ್ದಾನೆ. ಈ ಕೊಲೆ ಪ್ರಕರಣದಲ್ಲಿ ಕೋಡೂರಿನಂತಹ ಪುಟ್ಟ ಹಳ್ಳಿಯಿಂದ ಬಂದ ಇನ್ನೂ ಸಣ್ಣ ವಯಸ್ಸಿನ ಹುಡುಗನೊಬ್ಬ ಮಾಡಿಕೊಂಡಿದ್ದ ಸಿದ್ಧತೆ, ಪೊಲೀಸರ ದಿಕ್ಕು ತಪ್ಪಿಸಲು ಮಾಡಿದ ಕೆಲಸಗಳನ್ನೆಲ್ಲ ನೋಡಿದರೆ ಯಾವುದೋ ಕ್ರೈಂ ಸಿರೀಸ್‌ವೊಂದರ ಎಪಿಸೋಡ್ ನೋಡಿದಂತೆ ಭಾಸವಾಗುತ್ತದೆ. ಕೊಟ್ಟ ದುಡ್ಡು ವಾಪಾಸ್ಸು ಕೇಳಿದ್ದಕ್ಕೇ ಮಯೂರ ಭಟ್ಟ ಒಬ್ಬ ಮಹಿಳೆಯನ್ನು ಹತ್ಯೆಗೈಯುವ ಮಟ್ಟಕ್ಕೆ ಇಳಿಯುತ್ತಾನೆಂದರೆ, ಇವನು ಮುಂದೆ ಇಡಬಹುದಾದ ಪಾತಕದ ಹೆಜ್ಜೆಗುರುತುಗಳ ರಕ್ತದೋಕುಳಿ ಹೇಗಿರಬಹುದು ಎನ್ನುವ ಊಹೆಯೇ ಭಯ ಹುಟ್ಟಿಸಿಬಿಡುತ್ತದೆ!
ಮೊಬೈಲ್ ಟವರ‌್ರುಗಳ ಬ್ಯಾಟರಿ ಕಳ್ಳತನ ಪ್ರಕರಣದ ನಂತರ ಒಂದಿಷ್ಟು ದಿನ ಸುಮ್ಮನಿದ್ದ ಮಯೂರ ಭಟ್ಟ, ಆನಂತರ ಸಂಬಂಧಿಕರ ಮನೆಗೆಲ್ಲ ಓಡಾಡಲಾರಂಭಿಸಿದ್ದ. ಹೀಗೆ ಓಡಾಡುತ್ತಿದ್ದವನು ಶಿವಮೊಗ್ಗದ ಹೊಳಲೂರಿನ ತನ್ನ ಅತ್ತೆಯ ಮನೆಗೂ ಆಗಾಗ ಹೋಗಿ ಬರಲಾರಂಭಿಸಿದ್ದ. ಈತನ ಅತ್ತೆ ಹೊಳಲೂರಿನ ಆಶ್ರಮವೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈ ಸೀತಮ್ಮನಿಗೆ ಪರಿಚಯವಿದ್ದಾಕೆ 64 ವರ್ಷದ ಜಯಮ್ಮ. ಜಯಮ್ಮನಿಗೆ ಮೂರು ಹೊತ್ತು ಊಟ ಬೇಕೆಂದರೆ ಬೆಳಗಿನಿಂದ ಸಂಜೆಯವರೆಗೂ ದುಡಿಯಬೇಕಿತ್ತು. ಈ ಜಯಮ್ಮನ ಬದುಕಿನ ಕಷ್ಟಗಳೂ ಒಂದೆರಡಲ್ಲ. ಹೊಳಲೂರಿನ ಆಶ್ರಮ, ಆಸ್ಪತ್ರೆ, ಅಂಗಡಿಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು, ಅದರಿಂದ ಬರುತ್ತಿದ್ದ ದುಡಿಮೆಯಿಂದಲೇ ಬದುಕು ನಡೆಸುತ್ತಿದ್ದ ಈಕೆಗಿದ್ದ ಒಬ್ಬ ಮಗಳೂ ಕೆಲವು ತಿಂಗಳುಗಳ ಹಿಂದೆ ಹುಷಾರಿಲ್ಲದೆ ಮೃತಪಟ್ಟಿದ್ದಳು. ಕೊನೆಗೆ ಜಯಮ್ಮನ ಬದುಕಿಗೆ ಜೊತೆಯಾಗಿದ್ದದ್ದು ಮಗಳ ಮಕ್ಕಳು ಮಾತ್ರ. ಮೊಮ್ಮಕ್ಕಳ ಭವಿಷ್ಯವಾದರೂ ಚೆನ್ನಾಗಿರಲಿ ಎಂದು ದುಡಿಯುತ್ತಿದ್ದ ಜಯಮ್ಮ, ಸೀತಮ್ಮನ ಜೊತೆ ತನ್ನ ಬದುಕಿನ ಕಷ್ಟ ಸುಖಗಳನ್ನೆಲ್ಲ ಹಂಚಿಕೊಳ್ಳುತ್ತಿದ್ದಳು. ಹೀಗಿರುವಾಗಲೇ ಅತ್ತೆಯನ್ನು ಭೇಟಿಯಾಗಲು ಹೋಗುತ್ತಿದ್ದ ಮಯೂರ ಭಟ್ಟನಿಗೂ ಕೂಡಾ ಅತ್ತೆಯ ಮುಖಾಂತರ ಜಯಮ್ಮನ ಪರಿಚಯ ವಾಗಿತ್ತು. ಪರಿಚಯವಾದ ಕೆಲವೇ ದಿನಗಳಲ್ಲಿ ಮಯೂರ ಭಟ್ಟ ಅದೇನು ಪೋಸ್ ಕೊಟ್ಟಿದ್ದನೋ ಏನೋ, ಆ ವ್ಯವಹಾರ, ಈ ವ್ಯವಹಾರ ಎಂದು ಜಯಮ್ಮನೊಂದಿಗೆ ಮಾತನಾಡಿದ್ದಾನೆ. ಮೊಮ್ಮಕ್ಕಳ ಭವಿಷ್ಯ ಚೆನ್ನಾಗಿರಬೇಕು ಎನ್ನುವ ಕಾರಣಕ್ಕೆ ಒಂದೆರಡು ಕಾಸು ಹೆಚ್ಚು ಬಂದರೆ ಸಾಕು ಎಂದುಕೊಳ್ಳುತ್ತಿದ್ದ ಜಯಮ್ಮ ಮಯೂರ ಭಟ್ಟನ ಮಾತಿಗೆ ಮರುಳಾಗಿದ್ದಾಳೆ. ಇವನು ಅದೇನು ಹೇಳಿ ಹಣ ಕಿತ್ತಿದ್ದನೋ, ಆಗಿಷ್ಟು ಈಗಿಷ್ಟು ಎಂದು ಜಯಮ್ಮನ ಬಳಿ ಕಾಸು ಕೇಳಿದ್ದಾನೆ. ಆಕೆಯೂ ಕೂಡಾ ಕೊಡುತ್ತಾ ಬಂದಿದ್ದಾಳೆ. ಕೊನೆಗೆ ಹೀಗೆ ಆಗಾಗ ಕಿತ್ತ ಮೊತ್ತವೆಲ್ಲ ಸೇರಿ ಬರೋಬ್ಬರಿ 85 ಸಾವಿರದ ಹತ್ತತ್ತಿರ ಆಗಿದೆ.
ಆದರೆ ಪ್ರತಿಯಾಗಿ ಜಯಮ್ಮನಿಗೆ ಏನೂ ಸಿಕ್ಕಿಲ್ಲ. ಕೊಟ್ಟ ಹಣವೂ ವಾಪಾಸ್ಸು ಬರುತ್ತಿಲ್ಲ, ಅದರ ಜೊತೆ ಲಾಭ ಎಂದು ಬರುತ್ತದೆ ಎಂದುಕೊಂಡಿದ್ದ ಹಣವೂ ಬರಲಿಲ್ಲ ಎಂದು ಜಯಮ್ಮನಿಗೆ ಅದ್ಯಾವಾಗ ಅನ್ನಿಸಲಾರಂಭಿಸಿತೋ, ಮೆಲ್ಲಗೆ ಸೀತಮ್ಮನ ಬಳಿ ನಿಮ್ಮ ಅಳಿಯ ಪಡೆದುಕೊಂಡ ಹಣವನ್ನು ವಾಪಾಸ್ಸು ಕೊಡಿಸುವಂತೆ ಕೇಳಿದ್ದಾಳೆ. ಆಕೆ ನೀನೇ ನೇರವಾಗಿ ಅವನ ಬಳಿ ಕೇಳಿಕೋ ಎಂದು ಹೇಳಿದ್ದಾಳೆ. ಅದರಂತೆ ಜಯಮ್ಮ ಮಯೂರ ಭಟ್ಟನಿಗೆ ಆಗಾಗ ಹಣವನ್ನು ವಾಪಾಸ್ಸು ಕೊಡುವಂತೆ ಕಾಲ್ ಮಾಡುತ್ತಿದ್ದಳು. ಹೊಳಲೂರಿಗೆ ಈತ ಹೋದಾಗಲೂ ಕೇಳುತ್ತಿದ್ದಳು. ಆಗ ಕೊಡುತ್ತೇನೆ, ಈಗ ಕೊಡುತ್ತೇನೆ ಎಂದು ಒಂದೊಂದೇ ದಿನ ಮುಂದೂಡುತ್ತಿದ್ದ ಮಯೂರ ಭಟ್ಟನನ್ನು ಹೀಗೇ ಬಿಟ್ಟರೆ ತನ್ನ ಹಣ ವಾಪಾಸ್ಸು ದಕ್ಕುವುದಿಲ್ಲ ಎನ್ನುವುದು ತಿಳಿಯುತ್ತಿದ್ದಂತೆ, ಇಂತಹ ದಿನದೊಳಗೆ ನನ್ನ ಹಣ ನನಗೆ ವಾಪಾಸ್ಸು ಕೊಡು ಎಂದು ಜಯಮ್ಮ ಹಠಕ್ಕೆ ಬಿದ್ದಿದ್ದಾಳೆ. ಆಗ ಮಯೂರ ಭಟ್ಟನಿಗೂ ಜಯಮ್ಮನಿಗೆ ಹಣ ವಾಪಾಸ್ಸು ಕೊಡದೆ ಬೇರೆ ದಾರಿಯೇ ಇಲ್ಲ ಎನ್ನುವುದು ಖಚಿತವಾಗುತ್ತಿದ್ದಂತೆ, ಈತನ ಹಂತಕ ಮನಸ್ಸು ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಆಕೆಗೊಂದು ದಾರಿ ತೋರಿಸಬೇಕು ಎಂದು ನಿರ್ಧರಿಸಿಬಿಟ್ಟಿದೆ.
![]() |
ಕೊಲೆಯಾದ ಜಯಮ್ಮ |
ಹೀಗೆ ಕೊಲೆಗೆ ಮುಹೂರ್ತ ಫಿಕ್ಸ್ ಆದದ್ದು ಮಾರ್ಚ್ 16ರಂದು. ಹೊಳಲೂರಿನಲ್ಲಿರುವಾಗ ಜಯಮ್ಮ ಚಿನ್ನದ ಆಭರಣಗಳನ್ನು ಧರಿಸಿಕೊಂಡು ಓಡಾಡುತ್ತಿದ್ದಳು. ಅದರ ಮೇಲೂ ಮಯೂರ ಭಟ್ಟನ ಕಣ್ಣಿತ್ತು. ರಿಪ್ಪನ್‌ಪೇಟೆಗೆ ಬರುವ ಜಯಮ್ಮನನ್ನು ಮುಗಿಸಿಬಿಟ್ಟರೆ ಆಕೆಗೆ ಕೊಡಬೇಕಿರುವ 85 ಸಾವಿರ ರೂಪಾಯಿ ಹಣ ಕೊಡುವುದೂ ತಪ್ಪುತ್ತದೆ, ಜೊತೆಗೆ ಆಕೆಯ ಮೈಮೇಲಿರುವ ಚಿನ್ನವೂ ತನ್ನದಾಗುತ್ತದೆ ಎಂದು ಮಯೂರ ಭಟ್ಟ ಲೆಕ್ಕಾಚಾರ ಹಾಕಿಟ್ಟುಕೊಂಡಿದ್ದ. ಇವರು ಕರೆದಂತೆ ಮಾರ್ಚ್ 16ನೇ ತಾರೀಖು ಜಯಮ್ಮ ರಿಪ್ಪನ್‌ಪೇಟೆಗೆ ಬಂದಿಳಿದಿದ್ದಾಳೆ. ಆಕೆಯನ್ನು ನೋಡುತ್ತಿದ್ದಂತೆ ಮಯೂರ ಭಟ್ಟನಿಗೆ ನಿರಾಶೆಯಾಗಿದೆ. ಯಾಕೆಂದರೆ, ಸೈಟು ನೋಡಲು ಬಂದ ಜಯಮ್ಮ ಚಿನ್ನದ ಆಭರಣಗಳನ್ನು ಹಾಕಿಕೊಂಡು ಬಂದಿರಲಿಲ್ಲ. ಎಲ್ಲವನ್ನೂ ಮನೆಯಲ್ಲೇ ಇಟ್ಟು ಬಂದಿದ್ದ ಆಕೆ, ಕಿವಿಯೋಲೆಯಂತಹ ಚಿಕ್ಕ ಪುಟ್ಟ ಆಭರಣಗಳನ್ನಷ್ಟೇ ಧರಿಸಿಕೊಂಡು ಬಂದಿದ್ದಳು. ರಿಪ್ಪನ್‌ಪೇಟೆಯಲ್ಲಿ ಇಳಿದ ಜಯಮ್ಮನನ್ನು ವಿನಾಯಕ ಸರ್ಕಲ್ಲಿನಲ್ಲಿ ವ್ಯಾಗನರ್ ಕಾರಿನಲ್ಲಿ ಹತ್ತಿಸಿಕೊಂಡ ಮಯೂರ ಭಟ್ಟ ಮತ್ತು ಆತನ ಸಹಚರ, ರಿಪ್ಪನ್‌ಪೇಟೆಯ ಸುತ್ತಮುತ್ತ ಕೆಲಸಮಯ ಓಡಾಡಿ ಆನಂತರ ಬಾಳೂರು ತಲುಪಿಕೊಂಡಿದ್ದಾರೆ. ಮತ್ತು ಬಾಳೂರಿನ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ ಕಾರಿನೊಳಗೆ ತನಗೆ ಏನಾಗುತ್ತಿದೆ ಎಂದು ಹಿಂದಿನ ಸೀಟಿನಲ್ಲಿ ಕುಳಿತುಕೊಂಡಿದ್ದ ಜಯಮ್ಮನಿಗೆ ಅರಿವಾಗುವಷ್ಟರಲ್ಲಿ ಮಯೂರ ಭಟ್ಟ ಮೊದಲೇ ತಂದಿಟ್ಟುಕೊಂಡಿದ್ದ ಹಗ್ಗದಿಂದ ಕುತ್ತಿಗೆ ಬಿಗಿದು ಉಸಿರು ನಿಲ್ಲಿಸಿಬಿಟ್ಟಿದ್ದಾನೆ!
ಅಷ್ಟು ಹೊತ್ತಿಗಾಗಲೇ ಸಂಜೆ ಕಪ್ಪಾಗುವ ಸಮಯ. ಹೆಣವನ್ನೇನು ಮಾಡುವುದು? ಅದನ್ನೂ ಮೊದಲೇ ಪ್ಲ್ಯಾನ್ ಮಾಡಿಕೊಂಡಿದ್ದ ಮಯೂರ ಭಟ್ಟ ಜೊತೆಗೆ ಕರೆದುಕೊಂಡು ಬಂದಿದ್ದ ಅಪ್ರಾಪ್ತನೊಂದಿಗೆ ಹುಂಚದ ಕಡೆ ಕಾರು ತಿರುಗಿಸಿದ್ದಾನೆ. ಹುಂಚದ ಮುತ್ತಿನ ಕೆರೆ ಬಳಿ ಬಂದು ಕಾರು ನಿಲ್ಲಿಸಿಕೊಂಡ ಹಂತಕರು, ರಾತ್ರಿಯಾಗುವವರೆಗೂ ಹೆಣದೊಂದಿಗೆ ಕಾರಿನಲ್ಲೇ ಕುಳಿತುಕೊಂಡು ಕಾದಿದ್ದಾರೆ. ಅಂದಾಜು ಹತ್ತು ಗಂಟೆಯಾಗುವ ಹೊತ್ತಿಗೆ ಮೊದಲೇ ತಂದಿಟ್ಟುಕೊಂಡಿದ್ದ ಬೇಲಿ ಕಂಬವನ್ನು ಹಗ್ಗದಿಂದ ಹೆಣಕ್ಕೆ ಕಟ್ಟಿದ್ದಾರೆ. ಹೀಗೆ ಹೆಣಕ್ಕೆ ಕಲ್ಲು ಕಟ್ಟಿ ಕೆರೆಗೆ ಎಸೆದರೆ ಹೆಣ ತೇಲುವುದಿಲ್ಲ, ತಾನು ಸಿಕ್ಕಿಬೀಳುವುದಿಲ್ಲ ಎನ್ನುವುದನ್ನು ಮೊದಲೇ ಯೋಚಿಸಿ, ಈ ಕೆಲಸ ಮಾಡಿದ್ದ ಮಯೂರ ಭಟ್ ರಾತ್ರಿ ಹತ್ತೂವರೆಯಿಂದ ಹನ್ನೊಂದು ಗಂಟೆಯೊಳಗೆ ಹೆಣದೊಂದಿಗೇ ಮಧ್ಯ ಕೆರೆಯ ತನಕ ಈಜಿಕೊಂಡು ಹೋಗಿದ್ದಾನೆ. ಮಧ್ಯ ಕೆರೆಯಲ್ಲಿ ಹೆಣ ಹಾಕಿದರೆ ಅದು ಮೇಲೆದ್ದು ಬರುವುದು ಸಾಧ್ಯವೇ ಇಲ್ಲ, ಜಯಮ್ಮ ಸತ್ತಿದ್ದೂ ಯಾರಿಗೂ ಗೊತ್ತಾಗುವುದಿಲ್ಲ ಎಂದು ಪಕ್ಕಾ ಪ್ಲ್ಯಾನ್ ಮಾಡಿಯೇ ಹೆಣವನ್ನು ಮಧ್ಯ ಕೆರೆಯಲ್ಲಿ ಮುಳುಗಿಸಿ ಬಂದಿದ್ದ ಹಂತಕ!
ಆದರೆ ಹಂತಕರ ಲೆಕ್ಕಾಚಾರ ತಪ್ಪಾಗಿಬಿಟ್ಟಿತ್ತು.
ಎರಡೇ ದಿನಕ್ಕೇ ಹುಂಚದ ಮುತ್ತಿನಕೆರೆಯಲ್ಲಿ ಜಯಮ್ಮಳ ಹೆಣ ತೇಲಲಾರಂಭಿಸಿತ್ತು! ಹೌದು, ಕಲ್ಲು ಕಟ್ಟಿದ್ದರೂ ಕೂಡಾ ಹೆಣ ಕೆರೆಯಲ್ಲಿ ತೇಲುತ್ತಿದ್ದದ್ದನ್ನು ಗಮನಿಸಿದ ಜನರು ರಿಪ್ಪನ್‌ಪೇಟೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಮೊದಲಿಗೆ ಯಾರೋ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಹೆಣವನ್ನು ನೀರಿನಿಂದ ಹೊರತೆಗೆದ ತಕ್ಷಣ ಅದಕ್ಕೆ ಕಟ್ಟಿದ್ದ ಕಲ್ಲು ಮತ್ತು ಕುತ್ತಿಗೆಯಲ್ಲಾದ ಗಾಯದ ಕಲೆ ನೋಡುತ್ತಿದ್ದಂತೆ ಇದು ಕೊಲೆ ಎಂದು ಪೊಲೀಸರಿಗೆ ಗೊತ್ತಾಗಿತ್ತು.
ಆದರೆ ಕೊಂದಿದ್ದು ಯಾರು? ಕೊಲೆಯಾದ ಮಹಿಳೆ ಯಾರು? ಇದ್ಯಾವುದೂ ಪೊಲೀಸರಿಗೆ ಅಂದಾಜಿರಲಿಲ್ಲ. ಆದ್ದರಿಂದಲೇ ಅನಾಮಧೇಯ ಮಹಿಳೆಯ ಮೃತ ದೇಹ ಕೆರೆಯಲ್ಲಿ ಪತ್ತೆಯಾಗಿದ್ದು, ವಾರಸುದಾರರು ಯಾರಾದರೂ ಇದ್ದಲ್ಲಿ ಸಂಪರ್ಕಿಸುವಂತೆ ರಿಪ್ಪನ್‌ಪೇಟೆ ಪೊಲೀಸರು ಪ್ರಕಟಣೆ ಹೊರಡಿಸಿದ್ದರು. ಕೊನೆಗೂ ಎರಡು ಮೂರು ದಿನದ ನಂತರ ಇದೇ ಗುರುತನ್ನು ಹೋಲುವ ಹೊಳಲೂರಿನ ಜಯಮ್ಮ ಎರಡು ದಿನದಿಂದ ನಾಪತ್ತೆಯಾಗಿದ್ದಾರೆ ಎನ್ನುವ ಕರೆಯೊಂದು ಹೊಳಲೂರಿನಿಂದ ಬಂದಿದೆ. ಸಂಬಂಧಿಕರು ಬಂದು ನೋಡಿದಾಗ ಜಯಮ್ಮ ಧರಿಸಿದ್ದ ಸಣ್ಣಪುಟ್ಟ ಆಭರಣಗಳು ಮತ್ತು ಆಕೆ ಧರಿಸಿದ್ದ ಬಟ್ಟೆಯ ಆಧಾರದಲ್ಲಿ ಕೊಲೆಯಾಗಿರುವುದು ಜಯಮ್ಮನೇ ಎನ್ನುವುದು ದೃಢವಾಗುವ ಮೂಲಕ ಕೊಲೆಯಾದ ಮಹಿಳೆಯ ಗುರುತು ಪತ್ತೆಯಾಗಿದೆ.
ಹಾಗಿದ್ದರೆ ಹಂತಕರು ಯಾರು? ರಿಪ್ಪನ್‌ಪೇಟೆಯ ಪಿಎಸ್‌ಐ ನಿಂಗರಾಜ್ ಮತ್ತು ಅವರ ಟೀಮ್‌ನ್ನು ಈ ಪ್ರಶ್ನೆ ಕಾಡಲಾರಂಭಿಸುತ್ತದೆ. ಹೊಳಲೂರಿನ ಜಯಮ್ಮನನ್ನು ಹುಂಚಾದ ಬಳಿ ಕೊಂದು, ಮುತ್ತಿನಕೆರೆಗೆ ಕಲ್ಲು ಕಟ್ಟಿ ಬಿಸಾಕಿ ಹೋಗುತ್ತಾರೆ ಎಂದರೆ ಯಾರೋ ಸುತ್ತಮುತ್ತಲಿನ ಪರಿಸರ ಚೆನ್ನಾಗಿ ಬಲ್ಲವರೇ ಈ ಕೃತ್ಯ ಮಾಡಿದ್ದಾರೆ ಎನ್ನುವುದು ಪೊಲೀಸರಿಗೆ ಸ್ಪಷ್ಟವಾಗಿ ತಿಳಿದಿತ್ತು. ಇದನ್ನೇ ಮುಂದಿಟ್ಟುಕೊಂಡು ಜಯಮ್ಮನಿಗೆ ರಿಪ್ಪನ್‌ಪೇಟೆ - ಹೊಸನಗರ ಆಸುಪಾಸಿನ ಯಾರಾದರೂ ಪರಿಚಯವಿದ್ದಾರಾ ಎಂದು ಹುಡುಕುತ್ತಾ ಹೋದಾಗ ಮಯೂರ ಭಟ್ಟನ ಅತ್ತೆ ಸೀತಮ್ಮನ ಲಿಂಕ್ ಸಿಗುತ್ತದೆ. ಇದರ ಆಧಾರದಲ್ಲಿ ಇನ್ನಷ್ಟು ವಿಚಾರಣೆ ನಡೆಸಿದಾಗ ಕೀಳಂಬಿಯ ಮಯೂರ ಭಟ್ಟ ಹೊಳಲೂರಿಗೆ ಬಂದು ಹೋಗುತ್ತಿದ್ದದ್ದು, ಜಯಮ್ಮ ರಿಪ್ಪನ್‌ಪೇಟೆಗೆ ಸೈಟು ನೋಡಲು ಹೋಗುತ್ತೇನೆ ಎಂದು ಹೊಳಲೂರಿನಲ್ಲಿ ಕೆಲವರಿಗೆ ಹೇಳಿದ್ದ ಸಂಗತಿಗಳ ಆಧಾರದಲ್ಲಿ ಇನ್ನಷ್ಟು ತನಿಖೆ ನಡೆಯುತ್ತದೆ. ಕೊನೆಗೆ ಮೊಬೈಲ್ ಕರೆ ಮತ್ತು ಮೊಬೈಲ್ ಟವರ‌್ರಿನ ಆಧಾರದಲ್ಲಿ ಇನ್ನಷ್ಟು ಕೆದಕಿದ ಪೊಲೀಸರಿಗೆ ಮಯೂರ ಭಟ್ಟನ ಮೇಲೆ ಅನುಮಾನ ಬರುತ್ತದೆ. ಈ ಅನುಮಾನದಲ್ಲೇ ವಿಚಾರಣೆ ನಡೆಸಿದಾಗ ಜಯಮ್ಮ ಮತ್ತು ಮಯೂರ ಭಟ್ಟನ ನಡುವೆ ದುಡ್ಡಿನ ವ್ಯವಹಾರ ನಡೆದಿದ್ದು, ಅದನ್ನು ಜಯಮ್ಮ ವಾಪಾಸ್ಸು ಕೇಳುತ್ತಿದ್ದ ವಿಷಯಗಳೂ ತಿಳಿದು, ಈ ಬಗ್ಗೆ ಪ್ರಶ್ನಿಸಿದಾಗ ಹಂತಕ ತನ್ನ ತಪ್ಪನ್ನು ಒಪ್ಪಿಕೊಂಡು ಈಗ ಜೈಲು ಸೇರಿದ್ದಾನೆ.
ಮಯೂರ ಭಟ್ಟ ಎನ್ನುವ 24 ವರ್ಷದ ಹುಡುಗ ಕೊಲೆಗೆ ಸಂಚು ರೂಪಿಸಿದ ರೀತಿ, ಅದಕ್ಕಾಗಿ ಇನ್ನೊಬ್ಬನನ್ನು ಜೊತೆಗೂಡಿಸಿ ಕೊಂಡಿದ್ದು, ಸಂಜೆ ಕೊಂದ ಜಯಮ್ಮಳ ಹೆಣವನ್ನು ರಾತ್ರಿಯವರೆಗೂ ಕಾರಿನಲ್ಲೇ ಇಟ್ಟುಕೊಂಡು ಊರು ಸುತ್ತಿದ್ದು, ಆನಂತರ ಹೆಣದೊಂದಿಗೆ ಆತ ನಡುಕೆರೆಯವರೆಗೂ ಈಜಿ ಹೋಗಿದ್ದು... ಈ ಎಲ್ಲವನ್ನೂ ಕೇಳುತ್ತಿದ್ದರೆ ಈತನ ಕ್ರಿಮಿನಲ್ ಮೈಂಡ್ ಅಷ್ಟು ಸುಲಭಕ್ಕೆ ಎಣಿಕೆಗೆ ಸಿಕ್ಕುವಂತಹದ್ದು ಅಂತ ಅನ್ನಿಸುವುದೇ ಇಲ್ಲ! ಹೌದು, ಜಯಮ್ಮ ಕಷ್ಟ ಪಟ್ಟು ದುಡಿದು ಲಾಭದಾಸೆಯಿಂದ ಕೊಟ್ಟಿದ್ದ ಹಣವನ್ನು ವಾಪಾಸ್ಸು ಕೇಳಿದ್ದೇ ತಪ್ಪಾ? ಅದಕ್ಕಾಗಿ ಮೊಮ್ಮಕ್ಕಳ ಬದುಕಿನ ಕನಸನ್ನೇ ಕಂಗಳಲ್ಲಿ ಇಟ್ಟುಕೊಂಡು ಬದುಕುತ್ತಿದ್ದ ಜಯಮ್ಮ ಎನ್ನುವ ಅಮಾಯಕ ಹೆಂಗಸಿನ ಕೊಲೆಯಾಗಬೇಕಾ? ಇವನು ಹಣ ತೆಗೆದುಕೊಂಡಿದ್ದ, ಅದರಿಂದ ಮಜ ಮಾಡಿದ್ದ, ಆದರೆ ಇವನೊಂದಿಗೆ ಈ ಕೃತ್ಯದಲ್ಲಿ ಜೊತೆಯಾದ ಅಪ್ರಾಪ್ತನಿಗೆ ಇದರಲ್ಲಿ ಸಿಕ್ಕಿದ್ದೇನು? ಇನ್ನೂ ಇಪ್ಪತ್ತ್ನಾಲ್ಕು ವರ್ಷದ ಮಯೂರ ಭಟ್ಟ ಈಗಲೇ ಹೀಗೆ ಮುಂದೆ ಹೇಗೋ? ಎನ್ನುವ ಪ್ರಶ್ನೆಗಳು ಈಗ ಎಲ್ಲರನ್ನೂ ಕಾಡುತ್ತಿವೆ. ಮುಖ್ಯವಾಗಿ, ಈತನೊಂದಿಗೆ ಹತ್ತಿರದ ಒಡನಾಟ ಇಟ್ಟುಕೊಂಡು ತಮ್ಮೆಲ್ಲ ಕೆಲಸಗಳನ್ನೂ ಈತನಿಂದ ಮಾಡಿಸುತ್ತಿದ್ದ ಕೋಡೂರು - ಕೀಳಂಬಿ ಭಾಗದ ಹಿರಿಯರು ನಮ್ಮೊಂದಿಗೆ ಇಷ್ಟು ದಿನ ಒಡನಾಡಿದ್ದು ಇಂತಹ ಹೀನ ಮನಸ್ಥಿತಿಯ ಹಂತಕನಾ? ಎನ್ನುವ ಪ್ರಶ್ನೆಯೊಂದಿಗೆ ‘ಸಧ್ಯ ನಮ್ಮ ಜೀವ ಉಳಿಯತಲ್ಲ’ ಎನ್ನುವ ಸಮಾಧಾನ ಹಾಗೂ ಆತಂಕದಿಂದ ಇತರರನ್ನೂ ನಂಬದಂತಹ ಸ್ಥಿತಿಗೆ ತಲುಪಿದ್ದಾರೆ.
ಕಾಮೆಂಟ್‌ಗಳಿಲ್ಲ