ಹೊಸನಗರ ತಾಲ್ಲೂಕು ಮಟ್ಟದ ವಿಜ್ಞಾನ ಶಿಕ್ಷಕರಿಗಾಗಿ ಮಾರಕ ಡೆಂಗ್ಯೂ ನಿಯಂತ್ರಣ ಕಾರ್ಯಾಗಾರ | ಉಲ್ಬಣಗೊಳ್ಳುತ್ತಿರುವ ಮಾರಕ ಡೆಂಗ್ಯೂ ಜ್ವರದ ಬಗ್ಗೆ ನಿರ್ಲಕ್ಷ್ಯ ಸಲ್ಲ, ನಿಯಂತ್ರಣ ಎಲ್ಲರ ಜವಾಬ್ದಾರಿ - ಡಾ. ಗುರುಮೂರ್ತಿ
ಹೊಸನಗರ : ಈಗ ಮಳೆಗಾಲ ಪ್ರಾರಂಭವಾಗಿದ್ದು, ನಿರುಪಯೋಗಿ ಸಿಮೆಂಟ್ ತೊಟ್ಟಿ, ಡ್ರಮ್-ಬ್ಯಾರೆಲ್, ಟೈರ್‌ಗಳು ಮಣ್ಣಿನ ಮಡಿಕೆ, ಕುಡಿದು ಬಿಸಾಕಿದ ಎಳನೀರಿನ ಭಾಗಗಳು ಮುಂತಾದ ಕಡೆ ಶೇಖರವಾದ ನೀರಿನಲ್ಲಿ ಸೊಳ್ಳೆಗಳ ಉತ್ಪತ್ತಿ ಆಗುತ್ತಿದ್ದು, ಇವುಗಳ ನಿಯಂತ್ರಣದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕೆಂದು ಹೊಸನಗರ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ. ಗುರುಮೂರ್ತಿ ತಾಲ್ಲೂಕಿನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಿಜ್ಞಾನ ಶಿಕ್ಷಕರಿಗೆ ಸೂಚಿಸಿದರು.
ಅವರು ಇಂದು ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ವಿಜ್ಞಾನ ಶಿಕ್ಷಕರಿಗಾಗಿ ಮಾರಕ ಡೆಂಗ್ಯೂ ನಿಯಂತ್ರಣದ ಬಗ್ಗೆ ಏರ್ಪಡಿಸಿದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿಜ್ಞಾನ ಶಿಕ್ಷಕರು ಈ ಮಾಹಿತಿಗಳನ್ನು ಶಾಲೆಯ ಇತರೆ ಶಿಕ್ಷಕರು ಹಾಗೂ ಮಕ್ಕಳಿಗೆ ಮನವರಿಕೆ ಮಾಡುವಂತೆ ತಿಳಿಸಿದ ಅವರು, ಈಗ ಉಲ್ಬಣಿಸುತ್ತಿರುವ ಡೆಂಗ್ಯೂ ಜ್ವರ ವೈರಸ್ಸಿನಿಂದ ಉಂಟಾಗುವ ಕಾಯಿಲೆ. ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತವೆ ಹಾಗೂ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ. ಇದರಿಂದ ಇದ್ದಕ್ಕಿದ್ದ ಹಾಗೇ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಈ ರೋಗದ ಲಕ್ಷಣಗಳು ಹಾಗೂ ಬಾಯಿ, ಮೂಗು, ವಸಡುಗಳಿಂದ ರಕ್ತಸ್ರಾವ ಮತ್ತು ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತದೆ ಎಂದು ಕಾಯಿಲೆಯ ಲಕ್ಷಣಗಳನ್ನು ವಿವರಿಸಿದರು.
ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಈಗ ಶಿಕ್ಷಕರು ಮಾರಕ ರೋಗಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವ ಮೂಲಕ ಸಮುದಾಯದೊಂದಿಗೆ ಕೈಜೋಡಿಸಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಾರಣೀಭೂತರಾಗಬೇಕೆಂದು ಅವರು ಕರೆ ನೀಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಕರಿಬಸಮ್ಮ ಪ್ರಾಸ್ತಾವಿಕವಾಗಿ ಮಾತನಾಡಿ, ಡೆಂಗ್ಯೂ ಜೊತೆಗೆ ಮಲೇರಿಯಾ ಸಹ ಜನರ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುತ್ತಿದ್ದು ಈ ನಿಟ್ಟಿನಲ್ಲಿ ಇಲಾಖೆಯವರೊಂದಿಗೆ ಸಮುದಾಯದವರು ಕೈ ಜೋಡಿಸುವಂತೆ ಕರೆ ನೀಡಿದರು.
ಮಧುಸೂದನ ಸ್ವಾಗತಿಸಿದರು. ಶ್ರೀನಿವಾಸ್ ವಂದಿಸಿದರು.
ಕಾಮೆಂಟ್‌ಗಳಿಲ್ಲ