ರಿಪ್ಪನ್‌ಪೇಟೆಯಲ್ಲಿ ಕ್ಯಾಂಪ್ಕೋ ಸಾವಯವ ಗೊಬ್ಬರ ಮಳಿಗೆ ಉದ್ಘಾಟನೆ
ರಿಪ್ಪನ್‌ಪೇಟೆ : ಅಡಿಕೆ ಬೆಳೆಗಾರರ ಹಿತ ಕಾಪಾಡುವಲ್ಲಿ ಕ್ಯಾಂಪ್ಕೋ ಸಂಸ್ಥೆ ಕಳೆದ 50 ವರ್ಷಗಳಿಂದಲೂ ಶ್ರಮಿಸುತ್ತಿದೆ. ರೈತರು ನಮ್ಮ ಸಂಸ್ಥೆಯಲ್ಲಿ ಹೆಚ್ಚು ಹೆಚ್ಚು ವ್ಯಾಪಾರ ವಹಿವಾಟು ನಡೆಸಿದರೆ ಸಂಸ್ಥೆಯ ಅಭಿವೃದ್ಧಿಗೆ ಸಹಾಯವಾಗುತ್ತದೆ. ಸಹಕಾರಿ ಸಂಸ್ಥೆಗಳು ಆರ್ಥಿಕ ವಹಿವಾಟಿನಲ್ಲಿ ಹಿಂದುಳಿದರೆ ಖಾಸಗಿ ಸಂಸ್ಥೆಗಳು ಏಕಸ್ವಾಮ್ಯ ಸಾಧಿಸುವ ಅಪಾಯ ಯಾವಾಗಲೂ ಇರುತ್ತದೆ. ಆದ್ದರಿಂದ ಎಲ್ಲರೂ ಸಹಕಾರಿ ಸಂಸ್ಥೆಗಳಲ್ಲಿಯೇ ವ್ಯಾಪಾರ ಮಾಡುವುದು ಒಳ್ಳೆಯದು ಎಂದು ಕ್ಯಾಂಪ್ಕೋ ಅಧ್ಯಕ್ಷರಾದ ಕಿಶೋರ್‌ಕುಮಾರ್ ಕೊಡ್ಗಿ ಅವರು ಹೇಳಿದರು.
ರಿಪ್ಪನ್‌ಪೇಟೆಯಲ್ಲಿ ನಿನ್ನೆ ಕ್ಯಾಂಪ್ಕೋ ಸಾವಯವ ಗೊಬ್ಬರ ಮತ್ತು ಲಘು ಪೋಷಕಾಂಶಗಳ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ದೇಶದಲ್ಲಿ ನಡೆಯುತ್ತಿರುವ ಅಡಿಕೆಯ ಕಾನೂನುಬಾಹಿರವಾದ ಆಮದನ್ನು ತಡೆಗಟ್ಟಬೇಕು. ಇದರಿಂದ ರೈತರು ಬೆಳೆದ ಅಡಿಕೆಗೆ ಉತ್ತಮ ಬೆಲೆ ಯಾವಾಗಲೂ ದೊರೆಯಲು ಸಾಧ್ಯವಾಗುತ್ತದೆ ಎಂದ ಅವರು, ಕ್ಯಾಂಪ್ಕೋ ಮತ್ತು ಇತರ ಸಹಕಾರ ಸಂಘಗಳ ಹೋರಾಟದಿಂದಾಗಿ ವಿದೇಶಗಳಿಂದ ಭಾರತಕ್ಕೆ ಆಮದಾಗುತ್ತಿರುವ ಅಡಿಕೆಗೆ ಮುನ್ನೂರೈವತ್ತು ರೂಪಾಯಿ ಸುಂಕವನ್ನು ವಿಧಿಸಿರುವುದರಿಂದಾಗಿ ನಮ್ಮ ದೇಶದ ಅಡಿಕೆ ಬೆಳೆಗಾರರಿಗೆ ಪ್ರಸ್ತುತ ಸಾಲಿನಲ್ಲಿ ಉತ್ತಮ ದರ ದೊರಕುತ್ತಿದೆ. ಈಗ ಮತ್ತೊಮ್ಮೆ ಸಹಕಾರಿ ಮುಖಂಡರುಗಳು ದೆಹಲಿಗೆ ಹೋಗಿ ಮುಂದಿನ ವರ್ಷಗಳಲ್ಲಿ ಈಗ ಇರುವ ಸುಂಕವನ್ನೇ ಮುಂದುವರಿಸಲು, ಈ ಮೂಲಕ ಇಲ್ಲಿನ ಅಡಿಕೆ ಬೆಳೆಗಾರರ ಹಿತ ಕಾಯಲು ಸಚಿವರಿಗೆ ಒತ್ತಡ ತರುತ್ತೇವೆ ಎಂದು ಅವರು ಹೇಳಿದರು.
ಈಗ ಅಡಿಕೆಗೆ ಉತ್ತಮ ದರವಿದ್ದು ಇದು ನಿರಂತರವಾಗಿ ಮುಂದುವರಿದರೆ ಅಡಿಕೆ ಬೆಳೆಗಾರರ ಕುಟುಂಬಗಳಿಗೆ ಆಧಾರವಾಗುತ್ತದೆ. ಅಡಿಕೆ ಬೆಳೆಗೆ ಬೇಕಾಗುವ ಸಾವಯವ ಗೊಬ್ಬರ ಮತ್ತು ಲಘು ಪೋಷಕಾಂಶಗಳನ್ನು ಕ್ಯಾಂಪ್ಕೋ ಸಂಸ್ಥೆಯಿಂದಲೇ ತಯಾರು ಮಾಡುತ್ತಿದ್ದು, ರೈತರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಈಗ ಕ್ಯಾಂಪ್ಕೋ ಸಂಸ್ಥೆಯ ಉತ್ಪನ್ನಗಳು ರಿಪ್ಪನ್‌ಪೇಟೆಯ ಜೆಕೆ ಟ್ರೇಡರ್ಸ್‌ನಲ್ಲಿಯೂ ದೊರೆಯುತ್ತಿವೆ. ಸ್ಥಳೀಯ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಎಂ.ಪರಮೇಶ, ಸಹಕಾರಿ ಧುರೀಣರಾದ ರವಿ, ಚಂದ್ರೇಗೌಡ, ಶಂಕರನಾರಾಯಣ ಭಟ್, ಅವುಕ ರಾಘವೇಂದ್ರ, ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ, ಮಾರಾಟ ಮಳಿಗೆಯ ಸುಧಾಕರ ಮೊದಲಾದವರು ಇದ್ದರು.
ಕಾಮೆಂಟ್‌ಗಳಿಲ್ಲ