ಶಿಕ್ಷಣ ಪ್ರತಿಯೊಬ್ಬರ ಹಕ್ಕು, ಎಲ್ಲರೂ ಸಾಕ್ಷರರಾದರೆ ಬಾಲಕಾರ್ಮಿಕ ಹಾಗೂ ಇತರ ಅನಿಷ್ಟ ವ್ಯವಸ್ಥೆಗಳನ್ನು ಮಟ್ಟ ಹಾಕಬಹುದು - ನ್ಯಾಯಾಧೀಶ ಮಾರುತಿ ಶಿಂಧೆ
ಹೊಸನಗರ : ಶಿಕ್ಷಣ ಪ್ರತಿಯೊಬ್ಬರ ಹಕ್ಕು. ಎಲ್ಲರೂ ಕಡ್ಡಾಯ ಶಿಕ್ಷಣ ಪಡೆದರೆ ಬಾಲಕಾರ್ಮಿಕ ಪದ್ಧತಿ ಸೇರಿದಂತೆ ಸಮಾಜದ ಇನ್ನಿತರ ಅನಿಷ್ಟ ಪದ್ಧತಿಗಳನ್ನು ನಾವು ಮಟ್ಟ ಹಾಕಲು ಸಾಧ್ಯ ಎಂದು ಹೊಸನಗರ ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ವ್ಯವಹಾರ ನ್ಯಾಯಾಧೀಶ ಮಾರುತಿ ಶಿಂಧೆ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಸರ್ಕಾರಿ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬಾಲಕಾರ್ಮಿಕರನ್ನು ಯಾವುದೇ ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಪೋಷಕರು ತಮ್ಮ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಬೇಕೆಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್. ಆರ್. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಕೆ. ರವಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ರೇಣುಕೇಶ್, ವಕೀಲರ ಸಂಘದ ಅಧ್ಯಕ್ಷ ಹೆಚ್. ಚಂದ್ರಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಬಡತನ, ಶಿಕ್ಷಣ ಸೌಲಭ್ಯದ ಕೊರತೆ, ಕುಟುಂಬದ ದುರ್ಬಲ ಆರ್ಥಿಕ ಪರಿಸ್ಥಿತಿ, ಪೋಷಕರ ಅಜ್ಞಾನ ಮುಂತಾದ ಕಾರಣಗಳಿಂದ ಮಕ್ಕಳನ್ನು ಬಾಲ್ಯಾವಸ್ಥೆಯಲ್ಲಿ ದುಡಿಮೆಗೆ ಹಚ್ಚಲಾಗುತ್ತಿದ್ದು, ಈ ವ್ಯವಸ್ಥೆಗಳಿಂದ ಮಕ್ಕಳನ್ನು ದೂರವಿರಿಸಲು ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಸಮಾಜದ ದುರ್ಬಲರು, ಹಿಂದುಳಿದ ವರ್ಗದವರು, ಮುಗ್ಧರು ಶೋಷಣೆಗೆ ಒಳಗಾಗುವ ಸಾಧ್ಯತೆ ಹೆಚ್ಚಿದ್ದು, ಇವುಗಳ ನಿರ್ಮೂಲನೆಗಾಗಿ ಎಲ್ಲರೂ ಸಾಕ್ಷರರಾಗಬೇಕೆಂದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ಶಾಹಿನಾ ಬೇಗಂ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಕೆ. ಬಾಲಚಂದ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೌಢಶಾಲೆ ಮುಖ್ಯ ಶಿಕ್ಷಕ ರೇಣುಕೇಶ್ ಸ್ವಾಗತಿಸಿದರು. ಡಾ. ಕೆ. ಎನ್. ಅಂಜಲಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾಮೆಂಟ್‌ಗಳಿಲ್ಲ