Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ಕೃತಜ್ಞತಾ ಸಭೆ - ರಾಘವೇಂದ್ರ, ಹಾಲಪ್ಪನ ಮುಖ ನೋಡಿ ಜನರು ಬಿಜೆಪಿಗೆ ಮತ ಹಾಕಿಲ್ಲ... ಶಾಸಕ ಗೋಪಾಲಕೃಷ್ಣ ಬೇಳೂರು

ಹೊಸನಗರ : ಈ ಸೋಲನ್ನು ಅವರಿವರ ಮೇಲೆ ಹಾಕೋ ಪ್ರಶ್ನೆ ಇಲ್ಲ. ಇದು ಸೋಲೇ. ಜನರು ಮನಸ್ಸಿನೊಳಗೆ ಬಿಜೆಪಿಯನ್ನು ಇಟ್ಟುಕೊಂಡು ಮತ ಹಾಕಿದ್ದಾರೆ. ರಾಮನನ್ನು ನೋಡಿದ್ರೋ, ಮೋದಿಯನ್ನು ನೋಡಿದ್ರೋ... ಏನೋ ಗೊತ್ತಿಲ್ಲ. ಆದ್ರೆ ಈ ರಾಘವೇಂದ್ರ ಮತ್ತು ಹಾಲಪ್ಪನ ಮುಖವನ್ನಂತೂ ನೋಡಿ ಮತ ಹಾಕಿಲ್ಲ ಎಂದು ಸಾಗರ ಕ್ಷೇತ್ರದ ಶಾಸಕರು, ಅರಣ್ಯ ಹಾಗೂ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣರವರು ಹೇಳಿದರು.

ಇಂದು ಹೊಸನಗರದ ಈಡಿಗರ ಸಭಾ ಭವನದಲ್ಲಿ ಕಾಂಗ್ರೆಸ್ ಪಕ್ಷದ ಚಿಂತನ ಮಂಥನ ಹಾಗೂ ಕೃತಜ್ಞತಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಈ ಚುನಾವಣೆಯಲ್ಲಿ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಅದ್ಭುತವಾದ ಕೆಲಸವನ್ನು ಮಾಡಿದ್ದೀರಿ, ನಿಮ್ಮೆಲ್ಲರ ಶ್ರಮಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸುವುದರ ಜೊತೆಗೆ, ಮುಂಬರುವ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು. 

ಪಕ್ಷದ ಅಭ್ಯರ್ಥಿ ಬಗ್ಗೆ ಮೊದಲು ಸರಿ ಬರಲಿಲ್ಲ ಎಂದು ನೀವೆಲ್ಲರೂ ಹೇಳಿದ್ದೀರಿ. ಆನಂತರ ಎಲ್ಲರೂ ಒಂದಾಗಿ ಗೆಲುವಿಗಾಗಿ ಶ್ರಮಿಸಿದ್ದೀರಿ. ಕಾರ್ಯಕರ್ತರ ಮತ್ತು ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಹಾಕಿದಾಗಲೇ ಗೆಲ್ಲೋದಕ್ಕೂ ಹೋರಾಟ ಮಾಡಲು ಸಾಧ್ಯ. ಹೀಗಿದ್ದೂ ಕೊನೆಗೆ ಅಪಸ್ವರವಿಲ್ಲದೆ ಹೋರಾಟ ಮಾಡಿದ್ರಿ ಎಂದು ಕಾರ್ಯಕರ್ತರ ಪಕ್ಷ ನಿಷ್ಠೆಯನ್ನು ಮೆಚ್ಚಿಕೊಂಡರು

ರಾಷ್ಟ್ರೀಯ ಮತ್ತು ರಾಜ್ಯ ಚುನಾವಣೆ ಬೇರೆ, ಸ್ಥಳೀಯ ಚುನಾವಣೆಯೇ ಬೇರೆ. ಆದ್ದರಿಂದ ಈ ಸೋಲಿನ ಬಗ್ಗೆ ನೀವ್ಯಾರೂ ಹೆದರಬೇಕಾಗಿಲ್ಲ. ಪಕ್ಷ ಏನೂ ಅಲ್ಲದೇ ಹೋಗಿದ್ದರೆ ಗೀತಾ ಶಿವರಾಜ್‌ಕುಮಾರ್‌ ಐದು ಲಕ್ಷ ಮತ ಹೇಗೆ ಪಡೆದುಕೊಂಡರು? ಎನ್ನುವುದನ್ನು ನಾವು ಯೋಚಿಸಬೇಕಾಗಿದೆ. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಬಗ್ಗೆ ನಾವು ಗಮನ ಹರಿಸೋಣ. ನಾಲ್ಕು ವರ್ಷಗಳ ಕಾಲ ನಮ್ಮ ಸರ್ಕಾರವೇ ಇರುತ್ತದೆ. ಜನಪರವಾದ ಕೆಲಸದೊಂದಿಗೆ ಜನರನ್ನು ಸಮೀಪಿಸೋಣ. ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನ ಹರಿಸೋಣ ಎಂದು ಹೇಳಿದ ಗೋಪಾಲಕೃಷ್ಣ ಬೇಳೂರು ಅವರು, ಪಕ್ಷವನ್ನು ಸಂಘಟಿಸೋಣ. ಅದಕ್ಕಾಗಿ ನಾವೆಲ್ಲರೂ ಶ್ರಮಿಸೋಣ. ನಾವು ನಿಮ್ಮೊಂದಿಗಿರುತ್ತೇವೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಆರ್ ಎಂ ಮಂಜುನಾಥಗೌಡ  ಅವರು, ಕಾಂಗ್ರೆಸ್ಸಿಗೆ ಒಳ್ಳೆಯ ಪ್ರತಿಕ್ರಿಯೆ ಇತ್ತು. ಕಡೆಯ ಎರಡು ದಿನದಲ್ಲಿ ಏನಾಯಿತು ಗೊತ್ತಿಲ್ಲ. ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರು ಉತ್ತಮ ರೀತಿಯಲ್ಲಿ ಕೆಲಸ ಮಾಡಿದರೂ ಜನರ‍್ಯಾಕೋ ಕೈ ಹಿಡಿಯಲಿಲ್ಲ. ಅದನ್ನು ಮರೆತು ಮುಂದಿನ ಚುನಾವಣೆಗಳ ಕಡೆ ಗಮನ ಕೊಟ್ಟು ಪಕ್ಷವನ್ನು ಸಂಘಟಿಸುವುದು ಸಧ್ಯ ನಮ್ಮ ಮುಂದಿರುವ ಕೆಲಸ ಎಂದು ಹೇಳಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಮುಖಂಡರಾದ ಅನಿತಾ ಕುಮಾರಿ ಅವರು ಮಾತನಾಡಿ, ನನ್ನ ಬೂತ್ ನನ್ನ ಜವಾಬ್ದಾರಿ ಎನ್ನುವಲ್ಲಿಂದ ಆರಂಭವಾದ ನಮ್ಮ ಕೆಲಸ ಸರಿಯಾದ ದಾರಿಯಲ್ಲೇ ಸಾಗಿತ್ತು. ಸೋಲು ಮುಂದಿನ ಗೆಲುವಿಗೆ ದಾರಿಯಾಗಬೇಕೇ ಹೊರತು ಅದಕ್ಕಾಗಿ ನೋವು ಪಡಬೇಕಾಗಿಲ್ಲ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ ಮಾತನಾಡಿ, ಕಾಂಗ್ರೆಸ್ಸಿನಿಂದ ಸಭೆ ಸೇರಿದಾಗ ಐವತ್ತು ಜನ ಕಾರ್ಯಕರ್ತರು ಬರುತ್ತಾರೆ, ಬಿಜೆಪಿಯವರು ಸಭೆ ಕರೆದಾಗ ನಾಲ್ಕೇ ಜನ ಬರುತ್ತಾರೆ. ಆದರೆ ಜನರನ್ನು ತಲುಪಬೇಕಾದಾಗ ನಮ್ಮ ಪಕ್ಷದ ಕಾರ್ಯಕರ್ತರು ಎಲ್ಲಿ ಹೋಗುತ್ತಾರೋ ತಿಳಿಯುವುದಿಲ್ಲ. ಆದರೆ ಬಿಜೆಪಿಯ ನಾಲ್ಕೇ ಜನ ಜನರ ಮನವೊಲಿಸುವ ಕೆಲಸ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ನಾವು ಬದಲಾವಣೆಯಾಗಬೇಕಾಗಿದೆ. ಮುಂದಿನ ಚುನಾವಣೆಯಲ್ಲಿ ಈ ಬಗ್ಗೆ ಗಮನ ಕೊಡಬೇಕಾಗಿದೆ ಎಂದು ಹೇಳಿದರು. 

ಸಭೆಯಲ್ಲಿ ಕೆಪಿಸಿಸಿ ವಕ್ತಾರ ಕಲಗೋಡು ರತ್ನಾಕರ, ಜಿಪಂ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಈಶ್ವರಪ್ಪ, ಎಂಎಂ ಪರಮೇಶ್, ಹೆಚ್ ಟಿ ಜಯಶೀಲಪ್ಪ, ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅಧ್ಯಕ್ಷ ಚಿದಂಬರ, ನೇತ್ರಾವತಿ, ಪಟ್ಟಣ ಪಂಚಾಯತಿ ಸದಸ್ಯರುಗಳು ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಡಿ.ಎಂ. ಸದಾಶಿವ ಶೆಟ್ಟಿ ಸ್ವಾಗತಿಸಿದರು.

ಕಾಮೆಂಟ್‌ಗಳಿಲ್ಲ