ಮಳೆಗಾಲದಲ್ಲಿ ಯಾವುದೇ ಅಧಿಕಾರಿಗಳು ಕೇಂದ್ರ ಸ್ಥಾನ ಬಿಡುವಂತಿಲ್ಲ - ಶಾಸಕ ಬೇಳೂರು ಗೋಪಾಲಕೃಷ್ಣ ಸೂಚನೆ - ದೊಂಬೇಕೊಪ್ಪ ಮನೆ ಹಾನಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕರಿಂದ ವೈಯಕ್ತಿಕ ಧನಸಹಾಯ
ಹೊಸನಗರ: ಮುಂಗಾರು ಮಳೆ ಉತ್ತಮವಾಗಿ ಆರಂಭಗೊಳ್ಳುವ ನಿರೀಕ್ಷೆಯಿದ್ದು, ಮಳೆಯಿಂದ ಆಗಬಹುದಾದ ತೊಂದರೆಗಳ ಬಗ್ಗೆ ಸ್ಥಳೀಯ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನ ಹರತಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಂಬೇಕೊಪ್ಪ ಗ್ರಾಮದಲ್ಲಿ ನಿನ್ನೆಯ ಭಾರೀ ಮಳೆಗೆ ಮನೆ ಕಳೆದುಕೊಂಡ ಮಣಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳುವುದರೊಂದಿಗೆ, ವೈಯಕ್ತಿಕ ಧನ ಸಹಾಯ ಮಾಡಿದ ಶಾಸಕರು, ಮಳೆಗಾಲ ಮುಗಿಯುವವರೆಗೂ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲೇ ಇರುವಂತೆ ಸೂಚಿಸಿದರು.
ಸಧ್ಯಕ್ಕೆ ಉತ್ತಮ ಮಳೆ ಆಗುವ ವಾತಾವರಣ ಕಂಡು ಬರುತ್ತಿದ್ದು, ರೈತಾಪಿ ಕೆಲಸಗಳು ಆರಂಭಗೊಂಡಿವೆ . ಸರ್ಕಾರ ಕೂಡಾ ರೈತರಿಗೆ ಉತ್ತಮ ಬೀಜ, ಗೊಬ್ಬರ ಸಿಗುವಂತೆ ಈಗಾಗಲೇ ಕ್ರಮ ಕೈಗೊಂಡಿದೆ. ಆದರೆ ಈ ವಿಷಯದಲ್ಲಿ ಎಲ್ಲಿಯೂ ವ್ಯತ್ಯಾಸ ಆಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದರು.
ನಿನ್ನೆಯ ಮಳೆಗೆ ದೊಂಬೇಕೊಪ್ಪ ಗ್ರಾಮದ ಮಣಿ ಎಂಬುವವರ ಮನೆ ಮೇಲೆ ಮರ ಉರುಳಿ ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು. ನಿನ್ನೆಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕರ ಆಪ್ತ ಕಾರ್ಯದರ್ಶಿ ಮಂಜುನಾಥ ಸಣ್ಣಕ್ಕಿ ಅವರು, ಶಾಸಕರ ಭೇಟಿ ಮತ್ತು ಸಹಕಾರದ ಭರವಸೆಯನ್ನು ಕುಟುಂಬಕ್ಕೆ ನೀಡಿ ಬಂದಿದ್ದರು. ಅದರಂತೆ ಬೇಳೂರು ಗೋಪಾಲಕೃಷ್ಣ ಅವರು ಇಂದು ಭೇಟಿ ನೀಡಿ ಮನೆ ಕಳೆದುಕೊಂಡ ಕುಟುಂಬಕ್ಕೆ ವೈಯಕ್ತಿಕವಾಗಿ ಹತ್ತು ಸಾವಿರ ರೂಪಾಯಿ ಧನ ಸಹಾಯ ನೀಡಿ, ಸರ್ಕಾರದಿಂದ ಬರುವ ಸಹಾಯ ಮತ್ತು ನೆರವನ್ನು ಒದಗಿಸಿಕೊಡುವ ಭರವಸೆ ನೀಡಿದರು.
ಜೊತೆಗೆ ಮಣಿ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆ ಆಗದಂತೆ ಸ್ಥಳೀಯ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಹರಿದ್ರಾವತಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಆರ್. ಮಂಜುನಾಥ, ಮುಖಂಡರುಗಳಾದ ಮಂಡಗಳಲೆ ಗಣಪತಿ, ಶೇಖರಪ್ಪ ಗೌಡ, ಸಾಕಮ್ಮ ಮನೋಹರ್, ಗುಡ್ಲೇಕೇವಿ ಹಿರಿಯಪ್ಪ, ಇಕ್ಬಾಲ್, ಏರ್‌ಟೆಲ್ ಚಂದ್ರು, ಸಾಧಿಕ್ ಅಲಿ, ಶಿವಮೂರ್ತಿ ಹರತಾಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಬಟ್ಟೆಮಲ್ಲಪ್ಪ ಸರ್ಕಲ್ ಅವೈಜ್ಞಾನಿಕ ಕಾಮಗಾರಿಗೆ ಸ್ಥಳೀಯರ ಆಕ್ರೋಶ - ಸ್ಥಳಕ್ಕೆ ಭೇಟಿ ನೀಡಿ ಸರಿ ಪಡಿಸಲು ಅಧಿಕಾರಿಗಳಿಗೆ ಸೂಚಿಸಿದ ಶಾಸಕರು
ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಬಟ್ಟೆಮಲ್ಲಪ್ಪ ಸರ್ಕಲ್ಲಿನ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದರು. ಸ್ಥಳಕ್ಕೆ ಆಗಮಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ ಅವರನ್ನು ಭೇಟಿ ಮಾಡಿದ ಸ್ಥಳೀಯರು, ಸರ್ಕಲ್ ಕಾಮಗಾರಿಗೆ ಮುಗಿಯುವ ಮುಂಚೆಯೇ ಅಪಘಾತಗಳು ನಡೆಯುತ್ತಿವೆ. ಹೀಗಾಗಿ ತಕ್ಷಣವೇ ಈ ಅವೈಜ್ಞಾನಿಕ ಕಾಮಗಾರಿಯನ್ನು ಸರಿಪಡಿಸುವಂತೆ ಆಗ್ರಹಿಸಿದರು.
ಇದಕ್ಕೆ ಸ್ಪಂದಿಸಿದ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ತಕ್ಷಣವೇ ಸರಿ ಪಡಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರುಗಳಾದ ಶೇಖರಪ್ಪ ಗೌಡ, ಇಕ್ಬಾಲ್ ಅಹ್ಮದ್, ಚಂದ್ರು, ಹಿರಿಯಪ್ಪ ಮೊದಲಾದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ