ಜಯನಗರ ಪಂಚಾಯ್ತಿ ವ್ಯಾಪ್ತಿಯ ಟೆಂಕಬೈಲಿನ ಕಾಂಗ್ರೆಸ್ ನಾಯಕನ ಕ್ರಷರ್ ಘಟಕದಲ್ಲಿ ಸಾಲು ಸಾಲು ಅಕ್ರಮ - ಸಂಕಷ್ಟದಲ್ಲಿ ಸ್ಥಳೀಯರು - ಅಕ್ರಮ ಕಂಡರೂ ಆಮೆ ಏರಿ ಕುಳಿತರೇ ಅಧಿಕಾರಿಗಳು?!
ಹೊಸನಗರ : ತಾಲ್ಲೂಕಿನ ಜಯನಗರ ಗ್ರಾಮ ಪಂಚಾಯತಿ ವ್ಯಾಪ್ತಿಯ ಟೆಂಕಬೈಲಿನಲ್ಲಿ ಹಾಲಗದ್ದೆ ಉಮೇಶ್ ಎನ್ನುವವರಿಗೆ ಸೇರಿದ ಕ್ರಷರ್ ಘಟಕದಲ್ಲಿ ನಿಯಮಬಾಹಿರವಾಗಿ ಕಲ್ಲು ಕ್ರಷರ್ ಚಟುವಟಿಕೆಗಳನ್ನು ನಡೆಸಲಾಗುತ್ತಿದ್ದು, ಇದರಿಂದಾಗಿ ನಾವು ಊರು ಬಿಡುವಂತಹ ಪರಿಸ್ಥಿತಿ ಬಂದಿದೆ ಎಂದು ಟೆಂಕಬೈಲಿನ ಗ್ರಾಮಸ್ಥರು ಆರೋಪಿಸಿದರು.
ಇತ್ತೀಚೆಗೆ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಗ್ರಾಮಸ್ಥರು, ಗಣಿ ಇಲಾಖೆ ರೂಪಿಸಿರುವ ನಿಯಮಗಳನ್ನು ಕ್ರಷರ್ ಘಟಕದಲ್ಲಿ ಯಾವುದೇ ರೀತಿಯಲ್ಲೂ ಪಾಲಿಸುತ್ತಿಲ್ಲ. ಇಲ್ಲಿ ನಡೆಯುವ ಬ್ಲಾಸ್ಟಿಂಗ್‌ನಿಂದಾಗಿ ಸಮೀಪದ ಜನವಸತಿ ಪ್ರದೇಶಗಳಿಗೆ ಹಾನಿಯಾಗಿದೆ. ಇಲ್ಲಿನ ಮಾಲಿನ್ಯದಿಂದ ತೋಟ, ಮನೆ, ಗದ್ದೆಗಳು ಹಾಳಾಗುತ್ತಿವೆ. ವಯೋವೃದ್ಧರು, ಮಕ್ಕಳು ನೆಮ್ಮದಿಯಿಂದ ಜೀವನ ಮಾಡಲು ಸಾದ್ಯವಾಗದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಗಣಿ ಇಲಾಖೆ, ಪೊಲೀಸ್ ಇಲಾಖೆಗೆ ದೂರು ನೀಡಲಾಗಿದೆ. ಇತ್ತೀಚೆಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಅಕ್ರಮವಾಗಿ ಕಲ್ಲು ಗಣಿ ಚಟುವಟಿಕೆ ನಡೆದಿರುವುದು ಕಂಡು ಬಂದಿದೆ. ಲೀಸ್‌ನಲ್ಲಿ ಪಡೆದ ಜಾಗವಲ್ಲದೇ ಸುಮಾರು 5 ಎಕರೆ ಕಂದಾಯ ಭೂಮಿಯನ್ನು ಅತಿಕ್ರಮಣ ಮಾಡಿ, ಅಲ್ಲಿಯೂ ಅಕ್ರಮವಾಗಿ ಕಲ್ಲು ತೆಗೆಯಲಾಗಿದೆ. ತ್ಯಾಜ್ಯಗಳನ್ನು ಸುರಿಯಲಾಗಿದೆ. ರಾಜಧನ ಕಟ್ಟದೇ ಕೋಟ್ಯಾಂತರ ರೂ. ಮೊತ್ತದ ಕಲ್ಲನ್ನು ತೆಗೆದು ಅಕ್ರಮವಾಗಿ ಸಾಗಿಸಲಾಗಿದೆ. ಒತ್ತುವರಿ ಆಗಿರುವ ಜಾಗಕ್ಕೆ ಸಂಬಂಧಿಸಿದಂತೆ 36 ಲಕ್ಷ ರೂ. ದಂಡ ಪಾವತಿಸುವಂತೆ ಜಿಲ್ಲಾಧಿಕಾರಿಗಳು ಈಗಾಗಲೇ ಆದೇಶ ಮಾಡಿದ್ದಾರೆ. ರಾಜಧನ ವಂಚಿಸಿದ ಕಲ್ಲಿನ ಮೌಲ್ಯ ಸುಮಾರು 8 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ.ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಭೇಟಿ ನೀಡಿ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ಪ್ರಕರಣದ ತನಿಖೆಯ ಮತ್ತು ಕೈಗೊಳ್ಳಬೇಕಾದ ಕ್ರಮಗಳು ನಿರೀಕ್ಷೆಯಂತೆ ಇಲ್ಲ. ಅಧಿಕಾರಿ ವರ್ಗ ತುರ್ತಾಗಿ ಕ್ರಮ ವಹಿಸುವ ಹಾಗೆ ಕಾಣುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ವಿದ್ಯುತ್ ಸಂಪರ್ಕ ಕಡಿತಗೊಳಿಸಿ : ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎನ್ನುವುದನ್ನು ಮೇಲಾಧಿಕಾರಿಗಳು ಈಗಾಗಲೇ ದೃಢ ಪಡಿಸಿದ್ದು, ತಕ್ಷಣವೇ ಈ ಕ್ರಷರ್‌ಗೆ ನೀಡಿರುವ ವಿದ್ಯುತ್ ಸಂಪರ್ಕವನ್ನು ನಿಲ್ಲಿಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಸುಮಾರು 15 ಕುಟುಂಬಗಳು ಈ ಭಾಗದಲ್ಲಿ ವಾಸ ಮಾಡುತ್ತಿವೆ. ಪರಿಶಿಷ್ಟ ವರ್ಗವೂ ಸೇರಿದಂತೆ ರೈತರು, ಕೂಲಿಕಾರ್ಮಿಕರು ಇಲ್ಲಿನ ಕ್ರಷರ್ ಘಟಕದ ಅಕ್ರಮ ಚಟುವಟಿಕೆಗಳಿಂದ ಹೈರಾಣಾಗಿದ್ದಾರೆ. ಕ್ರಷರ್ ಪ್ರಭಾವಿ ವ್ಯಕ್ತಿಗೆ ಸೇರಿರುವ ಕಾರಣದಿಂದ ಹಲವರು ದೂರು ನೀಡಲೂ ಮುಂದಾಗುತ್ತಿಲ್ಲ ಎಂದು ದೂರಿದರು.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇಲ್ಲಿನ ಕ್ರಷರ್ ಘಟಕವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ನಿಯಮಬಾಹಿರವಾಗಿ ನಡೆದಿರುವ ಸಂಬಂಧ ಗುತ್ತಿಗೆದಾರರಿಗೆ ದಂಡ ವಿಧಿಸಬೇಕು. ಸ್ಥಳೀಯರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಉಗ್ರ ಹೋರಾಟದ ಎಚ್ಚರಿಕೆ : ಸರ್ಕಾರಿ ಅಧಿಕಾರಿಗಳು ಸರ್ವೆ ನಂಬರ್ 9ರಲ್ಲಿ ಕ್ರಷರ್ ಜೋನ್ ಘಟಕದ ಪರವಾನಿಗೆ ರದ್ದು ಪಡಿಸದಿದ್ದರೇ ತೆಂಕಬೈಲ್ ಗ್ರಾಮಸ್ಥರು ಹೊಸನಗರ ತಾಲ್ಲೂಕು ಕಛೇರಿಯ ಮುಂಭಾಗ ಧರಣಿ ನಡೆಸುವುದಾಗಿ ಅಧಿಕಾರಿಗಳಿಗೆ ಈ ಮೂಲಕ ಎಚ್ಚರಿಕೆ ನೀಡಿದ್ದಾರೆ. ಗೋಷ್ಠಿಯಲ್ಲಿ ವಿನಾಯಕ, ಟಿ.ಪಿ.ಕೊಲ್ಲಪ್ಪ, ಕವನ, ಜಯಲಕ್ಷ್ಮಿ, ಗಗನ್, ದೂರುದಾರ ಸುಪ್ರದೀಪ್ ನವೀನ್ ಮತ್ತಿತರರು ಇದ್ದರು.
ಕಾಮೆಂಟ್‌ಗಳಿಲ್ಲ