ಏಸು ಪ್ರಕಾಶ್ ನೆನಪಿನೊಂದಿಗೆ ಸಾರ ಸಂಸ್ಥೆಯಲ್ಲಿ ನಲಿ ಕಲಿ ಬೇಸಿಗೆ ಶಿಬಿರ ಆರಂಭ
ಹೊಸನಗರ : ಬಟ್ಟೆಮಲ್ಲಪ್ಪದ ಸಾರ ಸಂಸ್ಥೆ ಹಾಗೂ ಕೆ. ವಿ. ಸುಬ್ಬಣ್ಣ ರಂಗ ಸಮೂಹದ ಸಹಯೋಗದಲ್ಲಿ ದಿವಂಗತ ಏಸು ಪ್ರಕಾಶ್‌ರವರ ನೆನಪಿನೊಂದಿಗೆ ಸಾರ ಸಂಸ್ಥೆಯಲ್ಲಿ ಇಂದು 'ನಲಿ ಕಲಿ' ಬೇಸಿಗೆ ಶಿಬಿರವನ್ನು ಆರಂಭಿಸಲಾಯಿತು.
ಶಿಬಿರವನ್ನು ಉದ್ಘಾಟಿಸಿದ ಹರಿದ್ರಾವತಿ ಗ್ರಾಮ ಪಂಚಾಯ್ತಿ ಸದಸ್ಯರಾದ ವಾಟಗೋಡು ಸುರೇಶ ಅವರು ಮಾತನಾಡಿ, ಪಟ್ಟಣಗಳಿಗೆ ಮಾತ್ರ ಸೀಮಿತವಾಗಿದ್ದ ಬೇಸಿಗೆ ಶಿಬಿರಗಳು, ನಮ್ಮ ಗ್ರಾಮಗಳಲ್ಲಿ ನಡೆಯುತ್ತಿರುವುದು, ಈ ಮೂಲಕ ನಮ್ಮ ಹಳ್ಳಿಯ ಮಕ್ಕಳಿಗೂ ಇಂತಹ ಶಿಬಿರದ ಭಾಗವಾಗುವ ಅವಕಾಶ ದೊರೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಶಿಬಿರವನ್ನು ಆಯೋಜಿಸಿದ್ದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಏಸು ಪ್ರಕಾಶ್‌ರವರ ಸಾರ್ವಜನಿಕ ಸೇವೆ ಮತ್ತು ಅವರ ಕೆರೆಗಳ ಕಾಯಕ ನಮ್ಮ ತಾಲ್ಲೂಕಿಗೆ ತುಂಬಾ ಉಪಕಾರಿಯಾಗಿತ್ತು ಎಂದ ವಾಟಗೋಡು ಸುರೇಶ್ ಅವರು, ಏಸು ಪ್ರಕಾಶ್ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು.
ಮಕ್ಕಳು ಈ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಮಕ್ಕಳು ಹವ್ಯಾಸವಾಗಿ ಏನನ್ನಾದರೂ ಕಲಿಯಲು ಪೋಷಕರು ಸಹಕರಿಸದಿದ್ದರೆ ಮೊಬೈಲ್ ಬಳಕೆಯಲ್ಲೇ ಮಕ್ಕಳು ಕಳೆದು ಹೋಗುತ್ತಾರೆಂದು ಎಚ್ಚರಿಸಿದ ರಂಗಕರ್ಮಿಗಳಾದ ಗುರುಮೂರ್ತಿ ವರದಾಮೂಲ ಅವರು, ಮಕ್ಕಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ ಎಂದು ತಿಳಿಸಿದರು.
ಸಾರ ಸಂಸ್ಥೆಯೊಂದಿಗೆ ಕೆ. ವಿ. ಸುಬ್ಬಣ್ಣ ರಂಗ ಸಮೂಹ ಹಲವಾರು ವರ್ಷಗಳಿಂದ ಪರಿಸರ ಮೂಲಕ ರಂಗಭೂಮಿ ಚಟುವಟಿಕೆ ನಡೆಸುವ ಬಗ್ಗೆ ಶ್ರೀ ಪಾದ ಭಾಗವತ್ ವಿವರಗಳನ್ನು ಹಂಚಿಕೊಂಡರು. ಈ ಬೇಸಿಗೆ ಶಿಬಿರವು ಈ ತಿಂಗಳ 18ನೇ ತಾರೀಖಿನವರೆಗೂ ನಡೆಯಲಿದೆ.
ಪ್ರಸನ್ನ ಹುಣಸೆಕೊಪ್ಪ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾರ ಸಂಸ್ಥೆಯ ಅಧ್ಯಕ್ಷರಾದ ಗುರುಪಾದಪ್ಪ ಗೌಡ್ರು, ಕೃಷ್ಣಕುಮಾರ್ ಖಂಡಿಕಾ, ಸಾರ ಸಂಸ್ಥೆಯ ಧನುಷ್ ಕುಮಾರ್, ಕುಮಾರ್, ಶಿವಕುಮಾರ್ ಮತ್ತು ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳು, ಅವರ ಪೋಷಕರು ಇದ್ದರು.
ಕಾಮೆಂಟ್‌ಗಳಿಲ್ಲ