ರಾಮಚಂದ್ರಾಪುರಮಠದ ರಾಮೋತ್ಸವಕ್ಕೆ ಮಂಗಲ - ರಾಮಾಯಣ ಎಂದರೆ ಒಳಿತುಗಳ ಅನಂತ ಸಮುದ್ರ: ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ
ಹೊಸನಗರ : ರಾಮಾಯಣ ಎಂದರೆ ಅದು ಶುಭಗಳ ಶುಭ, ಒಳಿತುಗಳ ಅನಂತ ಸಮುದ್ರ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಹೊಸನಗರ ಸಮೀಪದ ರಾಮಚಂದ್ರಾಪುರಮಠದಲ್ಲಿ ಏರ್ಪಟ್ಟಿದ್ದ ಕ್ರೋಧಿ ನಾಮ ಸಂವತ್ಸರ ರಾಮೋತ್ಸವದ ಸಮಾರೋಪದ ಧರ್ಮಸಭೆಯಲ್ಲಿ ಪುಸ್ತಕ ಲೋಕಾರ್ಪಣೆ ಮಾಡಿ ಅವರು ಆಶೀರ್ವಚನ ನೀಡಿದರು.
ನಮ್ಮ ಜೀವನದಲ್ಲಿ ನಾವು ಸುಖವನ್ನು ಬಯಸುತ್ತೇವೆ. ಅಂತಹ ಸುಖಗಳ ಮೂಲ ರಾಮ, ರಾಮಾಯಣ ಎಂದ ಅವರು ನಮ್ಮ ಪ್ರತಿಯೊಂದು ಕ್ರಿಯೆಯೂ ನಿಸರ್ಗದ ಮೇಲೆ ಮತ್ತು ಸಮಾಜದ ಮೇಲೆ ಪರಿಣಾಮ ಬೀರಲಿದೆ. ಅದು ಒಳಿತು ಮತ್ತು ಕೆಡಕು ಎಂಬ ಪರಿಣಾಮ. ಹಿಂದೆ ರಾಮನ ಪ್ರತಿಯೊಂದೂ ಕ್ರಿಯೆಯೂ ಸೃಷ್ಟಿಗೆ ಒಳಿತು ಮಾಡುವಂತಿತ್ತು. ಅದೇ ರಾವಣನ ಕ್ರಿಯೆ ಕೆಡುಕು ಮಾಡುತ್ತಿತ್ತು. ಇದರರ್ಥ ಈ ಜಗತ್ತಿನಲ್ಲಿ ನನ್ನಿಷ್ಟದಂತೆ ನಾನು ನಡೆದರೇನು ಎಂದು ಯಾರೂ ಭಾವಿಸಬಾರದು. ನನ್ನಿಷ್ಟ ಎನ್ನುವುದು ಸುತ್ತಲ ವಾತಾವರಣದ ಮೇಲೆ ಪರಿಣಾಮ ಬೀರಲಿದೆ. ಅದು ಒಳಿತಾಗಿರಬೇಕು ಎಂದಾದರೆ ರಾಮನ ಕ್ರಿಯೆಯನ್ನು ಅನುಸರಿಸಬೇಕು. ಇಲ್ಲಿ ಮಾಡುವ ರಾಮೋತ್ಸವದಿಂದಾಗಲಿ, ಸೀತಾಕಲ್ಯಾಣೋತ್ಸವದಂತಹ ಕಾರ್ಯಕ್ರಮಗಳಿಂದ ಪ್ರಯೋಜನವೇನು ಎಂದು ಪಶ್ನಿಸುವವರು ಇರಬಹುದು. ಆದರೆ ರಾಮರಾಜ್ಯದ ಬರೀ ಕನಸು ಕಂಡರೆ ಸಾಲದು. ಅದು ಸಾಕಾರಗೊಳ್ಳಲು ನಾವೂ ಕೂಡ ಸಂಸ್ಕಾರಯುತರಾಗಿರಬೇಕು. ಅಂತಹ ಸಂಸ್ಕಾರ ಸಿಗಬೇಕಾದರೆ ಇಂತಹ ಕಾರ್ಯಗಳು ಜರುಗಬೇಕು. ಇಲ್ಲಿ ದಶರಥ, ಜನಕರಾಜರ ಮನಸ್ಥಿತಿ ಹೃದಯದೊಳಗೆ ಬಂದರೆ ಮನೆಯಲ್ಲಿ ನಮ್ಮ ಮಕ್ಕಳು ರಾಮಲಕ್ಷ್ಮಣರಾಗುತ್ತಾರೆ, ನಾವೇ ಸಿದ್ಧರಾಗದಿದ್ದರೆ ಮುಂದಿನ ಪೀಳಿಗೆಯಲ್ಲಿ ಸಂಸ್ಕಾರ, ಸದ್ಗುಣ, ಸಂಪನ್ನತೆಯನ್ನು ಹೇಗೆ ನಿರೀಕ್ಷಿಸಲು ಸಾಧ್ಯ, ಅದು ಸಾಧ್ಯವಾಗಿಸಲು ಹಿರಿಯರಾದ ನಾವು ಶುದ್ಧ ಮನಸ್ಸಿನಿಂದ ಇಂತಹ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದರು.
ಇದೇ ವೇಳೆ ಭಾರತೀ ಪ್ರಕಾಶನ ಹೊರ ತಂದಿರುವ ಕೆ.ಎಸ್. ಕಣ್ಣನ್ ಬರೆದಿರುವ ’ರಾಮನೇನು ದೇವನೇ..?’ ಹಾಗೂ ವಿಶ್ವೇಶ್ವರ ಭಟ್ ಉಂಡೇಮನೆ ಬರೆದಿರುವ ’ರಾಮಾಯಣ ಹಕ್ಕಿ ನೋಟ’ ಪುಸ್ತಕವನ್ನು ಶ್ರೀಗಳವರು ಲೋಕಾರ್ಪಣೆಗೊಳಿಸಿದರು.
ಲೇಖಕ ಕೆ.ಎಸ್. ಕಣ್ಣನ್, ವಿಷ್ಣುಭಟ್ ಪಾದೇಕಲ್ಲು ಮಾತನಾಡಿದರು. ಲೇಖಕ ವಿಶ್ವೇಶ್ವರ ಭಟ್ ಉಂಡೇಮನೆ, ಆಚಾರ ವಿಚಾರ ಗಜಾನನ ಭಟ್, ನಿರ್ವಹಣಾ ಸಮಿತಿ ಅಧ್ಯಕ್ಷ ಸೀತಾರಾಮ, ಕಾರ್ಯದರ್ಶಿ ಪ್ರಸನ್ನ ಉಡುಚೆ, ಪ್ರಧಾನಮಠದ ವ್ಯವಸ್ಥಾಪಕ ರಾಘವೇಂದ್ರ ಮಧ್ಯಸ್ಥ, ಸುಧನ್ವ ಶಾಸ್ತ್ರಿ ಮತ್ತಿತರರು ಇದ್ದರು.
ಇದಕ್ಕೂ ಮುನ್ನ ಶ್ರೀರಾಮಪಟ್ಟಾಭಿಷೇಕ ಧಾರ್ಮಿಕ ಕಾರ್ಯಕ್ರಮ ರುಕ್ಷಾವತಿ ರಾಮಚಂದ್ರ ಸೇವಾಭಾಗಿತ್ವದಲ್ಲಿ ಜರುಗಿತು. ಕಳೆದ ನಾಲ್ಕು ದಿನಗಳಿಂದ ಅಹೋರಾತ್ರಿ ನಡೆದ ಅಖಂಡ ಭಜನೆಯ ಸಮಾಪ್ತಿಯಲ್ಲಿ ವಿದುಷಿ ವಸುಧಾ ಶರ್ಮ ತಂಡದ ಗಾಯನ ನಡೆಯಿತು.
ಕಾಮೆಂಟ್‌ಗಳಿಲ್ಲ