ಕುಂಭತ್ತಿ ಗಣಿಗಾರಿಕೆ ತಡೆಗೆ ಗ್ರಾಮಸ್ಥರ ಆಗ್ರಹ - ತಪ್ಪಿದಲ್ಲಿ ಈ ಬಾರಿಯ ಲೋಕಸಭಾ ಚುನಾವಣಾ ಮತದಾನ ಬಹಿಷ್ಕರಿಸುವ ಎಚ್ಚರಿಕೆ
ಹೊಸನಗರ : ತಾಲ್ಲೂಕಿನ ನಗರ ಹೋಬಳಿ ಕುಂಭತ್ತಿ ಗ್ರಾಮದ ಸ.ನಂ.5ರಲ್ಲಿ ಶ್ರೀಷಾ ಉಡುಪ ಬಿನ್ ಶ್ರೀನಿವಾಸ ಉಡುಪ, ಎಸ್.ಜಿ.ನಾರಾಯಣ ರಾವ್ ಎಂಬುವವರು ಜಂಟಿಯಾಗಿ ನಡೆಸುತ್ತಿರುವ ಕಲ್ಲು ಗಣಿಗಾರಿಕೆಯಿಂದ ಗ್ರಾಮಸ್ಥರಿಗೆ ಪ್ರತೀದಿನವೂ ಒಂದಲ್ಲ ಒಂದು ಸಮಸ್ಯೆಯಾಗುತ್ತಿದ್ದು, ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವಂತಹ ಸ್ಥಿತಿ ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳಿಗೆ ದೂರು ಕೊಟ್ಟರೂ ಈವರೆಗೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನದಿಂದ ದೂರವೇ ಉಳಿದು ಚುನಾವಣೆ ಬಹಿಷ್ಕರಿಸುವುದಾಗಿ ನಿರ್ಧರಿಸಿರುವ ಕುಂಭತ್ತಿ ಗ್ರಾಮಸ್ಥರು ತಹಶೀಲ್ದಾರ್ ಮೂಲಕ ಇಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.
ಕಾರಣಗಿರಿಯ ಬಸ್ ನಿಲ್ದಾಣದಲ್ಲಿ ಶುಕ್ರವಾರ ಗಣಿಗಾರಿಕೆಯನ್ನು ವಿರೋಧಿಸಿ ಸಾಮೂಹಿಕ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಗಣಿಗಾರಿಕೆ ವಿರೋಧಿ ಭಿತ್ತಿಪತ್ರಗಳನ್ನು ಹಿಡಿದು ಗಣಿಗಾರಿಕೆಯ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೇ, ತಮಗೆ ನ್ಯಾಯ ದೊರೆಯುವವರೆಗೂ ಹೋರಾಟವನ್ನು ಮುಂದುವರಿಸುವುದಾಗಿ ಘೋಷಿಸಿದರು.
ಇಲ್ಲಿ ಗಣಿಗಾರಿಕೆಯನ್ನು ನಡೆಸುತ್ತಿರುವವರು ಇಲಾಖೆ ವಿಧಿಸಿರುವ ಎಲ್ಲಾ ನಿಬಂಧನೆಗಳನ್ನು ಗಾಳಿಗೆ ತೂರಿ ಮಟ ಮಟ ಮಧ್ಯಾಹ್ನವೇ ಭಾರೀ ಬ್ಲಾಸ್ಟಿಂಗ್ ಮಾಡುತ್ತಿದ್ದು, ಇದರಿಂದ ಗ್ರಾಮಸ್ಥರು ಬೆಳೆದ ಬೆಳೆಗಳಿಗೆ ಹಾನಿಯಾಗುತ್ತಿದೆ, ಮನೆಗಳಿಗೂ ಹಾನಿಯಾಗುತ್ತಿದೆ. ಶಬ್ದ ಮಾಲಿನ್ಯವಾಗುತ್ತಿದ್ದು ವೃದ್ಧರು, ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಗಣಿಗಾರಿಕೆಯಿಂದ ಕಾಡು ನಾಶವಾಗುತ್ತಿರುವುದರಿಂದ ಕಾಡುಕೋಣ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ ಎಂದು ಹೇಳಿ, ಈ ಬಗ್ಗೆ ಪ್ರಶ್ನಿಸಲು ಹೋದವರಿಗೆ ಗಣಿಗಾರಿಕೆಗೆ ಸಂಬಂಧಿಸಿದವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಉಳಿದವರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ವಿನಾಕಾರಣ ಕೋರ್ಟಿಗೆ ಅಲೆಯುವಂತೆ ಮಾಡಿದ್ದಾರೆ ಎಂದು ತಮಗಾಗುತ್ತಿರುವ ಸಮಸ್ಯೆಯನ್ನು ವಿವರಿಸಿದರು.
ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳು, ರಾಜ್ಯಪಾಲರು, ಪ್ರಧಾನಿ ನರೇಂದ್ರಮೋದಿಯವರಿಗೂ ದೂರು ಸಲ್ಲಿಸಿದರೂ ಕೂಡಾ ಯಾವುದೇ ಕ್ರಮವಾಗಿಲ್ಲ ಎಂದು ಹೇಳಿದ ಪ್ರತಿಭಟನಾಕಾರರು, ಗಣಿಗಾರಿಕೆ ಹಾಗೂ ಇದರ ಮಾಲೀಕರಿಂದ ಗ್ರಾಮಸ್ಥರಿಗೆ ಸೂಕ್ತ ಪರಿಹಾರ-ರಕ್ಷಣೆ ಇಲ್ಲವಾಗಿದೆ. ಆದ್ದರಿಂದ ಈ ಹಿನ್ನೆಲೆಯಲ್ಲಿ 2024ರ ಲೋಕಸಭಾ ಚುನಾವಣೆಯನ್ನು ಸಾಮೂಹಿಕವಾಗಿ ಬಹಿಷ್ಕರಿಸಲು ಗ್ರಾಮಸ್ಥರು ಒಮ್ಮತದ ಅಭಿಪ್ರಾಯಕ್ಕೆ ಬಂದಿದ್ದಾರೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕುಂಭತ್ತಿ ಕೃಷ್ಣಮೂರ್ತಿ ಬಿನ್ ಢಂಗನಾಯ್ಕ ಮಾಧ್ಯಮದವರಿಗೆ ತಿಳಿಸಿದರು.
ಪ್ರತಿಭಟನಾಕಾರರು ತಹಶೀಲ್ದಾರ್ ರಶ್ಮಿ ಅವರನ್ನು ಭೇಟಿಯಾಗಿ ತಮಗಾಗುತ್ತಿರುವ ತೊಂದರೆ ಮತ್ತು ಇದಕ್ಕೆ ಕಲ್ಪಿಸಬೇಕಾದ ಸೂಕ್ತ ಪರಿಹಾರದ ವಿವರಗಳನ್ನೊಳಗೊಂಡ ಮನವಿ ಪತ್ರವನ್ನು ಅವರೆದುರು ಓದಿ, ಅವರಿಗೆ ತಲುಪಿಸಿ ಕೂಡಲೇ ನಮಗೆ ನ್ಯಾಯ ಒದಗಿಸದೇ ಹೋದರೆ ಈ ಬಾರಿಯ ಲೋಕಸಭಾ ಚುನಾವಣೆಯ ಮತದಾನವನ್ನು ಬಹಿಷ್ಕರಿಸುವುದಾಗಿ ಹೇಳಿದರು.
ಈ ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಅನುಪಮ, ಶಶಾಂಕ್, ಸತ್ಯನಾರಾಯಣ, ಆನಂದ, ಲತಾ, ಮಂಜಪ್ಪ, ಸಂಜೀವ, ಆಟೋ ರಾಘು, ಗಿರಿಯಪೂಜಾರಿ, ಸುಮತಿ, ಮಹೇಶ, ಶಾಂತ, ಯಶೋಧ, ಪದ್ಮಾವತಿ ಸೇರಿದಂತೆ ಅನೇಕರು ಇದ್ದರು.
ಕಾಮೆಂಟ್‌ಗಳಿಲ್ಲ