ಮೂಲೆಗದ್ದೆ ಮಠದಲ್ಲಿ ವಿಶ್ವ ಪುಸ್ತಕ ದಿನದಂದು ಲೋಕಾರ್ಪಣೆಗೊಂಡ ಮಾಜಿ ಶಾಸಕ ಬಿ. ಸ್ವಾಮಿರಾವ್ ಅವರ ಬದುಕು-ಸಾಧನೆ ಕುರಿತು ಪತ್ರಕರ್ತ ಶ್ರೀಕಂಠ ಹೆಚ್.ಆರ್. ಬರೆದಿರುವ ಕೃತಿ ’ನಾನು ಹೇಳುವುದೆಲ್ಲಾ ಸತ್ಯ’
ಹೊಸನಗರ : ಹಲವು ದಶಕಗಳ ಹಿಂದೆಯೇ ಹಲವಾರು ಪ್ರಾಥಮಿಕ, ಪ್ರೌಢ ಹಾಗೂ ಪದವಿ ಶಾಲಾ-ಕಾಲೇಜುಗಳನ್ನು ಆರಂಭಿಸುವ ಮಹತ್ವದ ಕಾರ್ಯಕ್ಕೆ ನಾಂದಿ ಹಾಡುವ ಮೂಲಕ ಮಾಜಿ ಶಾಸಕ ಬಿ. ಸ್ವಾಮಿರಾವ್ ತಾಲ್ಲೂಕಿನಲ್ಲಿ ಶೈಕ್ಷಣಿಕ ಕ್ರಾಂತಿಗೆ ಕಾರಣೀಭೂತರಾಗಿದ್ದಾರೆ ಎಂದು ಮೂಲೆಗದ್ದೆ ಮಠದ ಶೀ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ತಿಳಿಸಿದರು.
ಅವರು ಮಾಜಿ ಶಾಸಕ ಬಿ. ಸ್ವಾಮಿರಾವ್ ಅವರ 94ನೇ ಜನ್ಮದಿನದಂದು ಇಲ್ಲಿನ ಮೂಲೆಗದ್ದೆ ಮಠದಲ್ಲಿ ಸ್ವಾಮಿರಾವ್ ಅವರ ಜೀವನ ವೃತ್ತಾಂತದ ಕುರಿತು ಪತ್ರಕರ್ತ ಶ್ರೀಕಂಠ ಹೆಚ್.ಆರ್. ಬರೆದಿರುವ ’ನಾನು ಹೇಳುವುದೆಲ್ಲಾ ಸತ್ಯ’ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.
ಸ್ವಾಮಿರಾವ್ ಅವರದು ಹೋರಾಟದ ಬದುಕು. ಕನ್ನಡಪರ ಹೋರಾಟ, ರೈತ ಹೋರಾಟ, ಶರಾವತಿ ಹೋರಾಟ, ಬಗರ್ ಹುಕುಂ ಹೋರಾಟ ಸೇರಿದಂತೆ ಗೇಣಿದಾರರ ಪರ ಅನೇಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತು ನೊಂದವರಿಗೆ ಸೂಕ್ತ ನ್ಯಾಯ ಕೊಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸಮಾಜವಾದಿ ಸಿದ್ಧಾಂತವನ್ನು ಮೈಗೂಡಿಸಿಕೊಂಡು ರಾಜಕೀಯ ಬದುಕು ಆರಂಭಿಸಿದ ಇವರು ಅನೇಕ ಏಳುಬೀಳುಗಳನ್ನು ಸವಾಲಾಗಿ ಸ್ವೀಕರಿಸಿ ಜಯಿಸಿದ್ದಾರೆ. ಸಮಾಜದ ಒಳಿತಿಗಾಗಿ ಹಲವು ಬಾರಿ ದೃಢ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಅನೇಕರ ವಿರೋಧ ಕಟ್ಟಿಕೊಳ್ಳುವ ಪ್ರಸಂಗ ಬಂದರೂ, ಧೃತಿಗೆಡದೆ ತಮ್ಮ ನಿರ್ಧಾರಕ್ಕೆ ಸದಾ ಬದ್ಧರಾಗಿದ್ದವರು. ಚುನಾವಣೆಗಳಲ್ಲಿ ಹಲವು ಬಾರಿ ಸತತ ಸೋಲುಂಡ ಬಳಿಕ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಮಲೆನಾಡಿನ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಈ ಎಲ್ಲಾ ವಿಷಯವನ್ನು ಪುಸ್ತಕದ ಲೇಖಕರು ಮೂಲ ವಿಷಯಕ್ಕೆ ಧಕ್ಕೆ ಬಾರದಂತೆ ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವೊಂದು ಪುಸ್ತಕವನ್ನು ಓದಿ ಕೈ ತೊಳೆದುಕೊಳ್ಳಬೇಕು. ಆದರೆ ಇದು ಕೈ ತೊಳೆದು ಓದುವ ಪುಸ್ತಕ ಎಂಬುದರಲ್ಲಿ ಎರಡು ಮಾತಿಲ್ಲ. ವಿಶ್ವ ಪುಸ್ತಕ ದಿನಾಚರಣೆ ದಿನದಂದು ಈ ಕೃತಿ ಲೋಕಾರ್ಪಣೆಗೊಳ್ಳುತ್ತಿರುವುದು ವಿಶೇಷ ಎಂದರು.
ಮಾಜಿ ಶಾಸಕ ಬಿ.ಸ್ವಾಮಿರಾವ್ ಮಾತನಾಡಿ, ತಮ್ಮ ಬದುಕು-ಸಾಧನೆಗಳನ್ನು ದಾಖಲಿಸಬೇಕು ಎಂಬ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಸಲಹೆಯಂತೆ ಈ ಕೃತಿ ರಚಿತಗೊಂಡಿದೆ. ಪತ್ರಕರ್ತ-ಲೇಖಕ ಶ್ರೀಕಂಠ ಇದಕ್ಕಾಗಿ ಹಲವು ತಿಂಗಳು ತಪಸ್ಸು ಮಾಡಿದ ಪರಿಣಾಮ ಕೃತಿ ಇಂದು ಬಿಡುಗಡೆಗೊಂಡಿದೆ. ನನ್ನ ಬದುಕಿನ ಎಳೆಎಳೆಯನ್ನೂ ಸಾಧ್ಯವಾದಷ್ಟು ವಿವರವಾಗಿ ಪುಸ್ತಕದ ಶಿರೋನಾಮೆಗೆ ಧಕ್ಕೆ ಬಾರದಂತೆ ದಾಖಲಿಸುವ ಕಾರ್ಯದಲ್ಲಿ ಲೇಖಕರ ಪಾತ್ರ ಗಣನೀಯವಾಗಿದೆ ಎಂದು ಹೇಳಿ, ತಮ್ಮ ಬದುಕಿನ ಸರಿ ತಪ್ಪುಗಳನ್ನು ಗುರುಗಳ ಸನ್ನಿದಾನದಲ್ಲಿ ಹೇಳಿಕೊಂಡು ಹಗುರವಾಗುವ ಉದ್ದೇಶದಿಂದಲೇ ಮೂಲೆಗದ್ದೆ ಮಠದಲ್ಲಿ ಶ್ರೀಗಳ ಕೈಯಿಂದಲೇ ಪುಸ್ತಕ ಬಿಡುಗಡೆ ಮಾಡಿಸುವ ನಿರ್ಧಾರಕ್ಕೆ ನಾನು ಮತ್ತು ಲೇಖಕರು ಬಂದೆವು ಎಂದು ಹೇಳಿದರು.
ಕೊಡಚಾದ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಡಾ. ಮಾರ್ಷಲ್ ಶರಾಂ ಕೃತಿ ಪರಿಚಯಿಸಿ, ಸ್ವಾಮಿರಾವ್ ಬದುಕಿನ ಹಲವು ವಿಶೇಷ ಸಂಗತಿಗಳನ್ನು ಇದು ಒಳಗೊಂಡಿದ್ದು, ಅವರ ಮಾತುಗಳಲ್ಲೇ ಈ ಪುಸ್ತಕವನ್ನು ಓದಿಕೊಳ್ಳುವುದು ಬಹಳ ಮುಖ್ಯ. ಸ್ವಾಮಿರಾವ್ ಅವರು ಜನರಿಗಾಗಿ ನಡೆಸಿದ ಹೋರಾಟಗಳು ಕನ್ನಡದ ಸಿನಿಮಾವೊಂದರ ಹೀರೋ ನಡೆಸಿದ ಹೋರಾಟಕ್ಕಿಂತ ಕಡಿಮೆಯದ್ದೇನಲ್ಲ ಎಂದು ಹೇಳಿದರು.
ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಎಪಿಎಂಸಿ ಮಾಜಿ ನಿರ್ದೇಶಕ ಕಲ್ಯಾಣಪ್ಪಗೌಡ, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಆಲುವಳ್ಳಿ ವೀರೇಶ್, ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಎ.ವಿ.ಮಲ್ಲಿಕಾರ್ಜುನ, ಪ್ರಮುಖರಾದ ಜಿ.ವಿ. ವೇಣುಗೋಪಾಲ್, ಉಸ್ಮಾನ್ ಸಾಬ್, ದೇವಾನಂದ್, ಮತ್ತಿಮನೆ ಸುಬ್ರಹ್ಮಣ್ಯ, ಸುರೇಶ್ ಸ್ವಾಮಿರಾವ್, ಬೆಳಗೋಡು ಗಣಪತಿ, ಹಾಲಗದೆ ಉಮೇಶ್, ಚಂದ್ರಾಚಾರ್, ಭಾಷಾಸಾಬ್, ಜಯನಗರ ಪ್ರಹ್ಲಾದ್, ವಸವೆ ರಮೇಶ್, ಮಿಂಚು ಮನುಕುಮಾರ್, ಗ್ರಾ.ಪಂ. ಸದಸ್ಯ ಗಣೇಶ್ ಸಂಪಳ್ಳಿ, ಮಂಡಾನಿ ಮೋಹನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪುಸ್ತಕದ ಲೇಖಕರಾದ ಶ್ರೀಕಂಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ್ ದೇವರಸಲಕಿ ಸ್ವಾಗತಿಸಿ-ವಂದಿಸಿದರು.
ಕಾಮೆಂಟ್‌ಗಳಿಲ್ಲ