ಕೆರೆಗಳ ಪುನರುಜ್ಜೀವನದಿಂದ ಹೊಸನಗರ ತಾಲ್ಲೂಕಿನೆಲ್ಲೆಡೆ ಜನಪ್ರೀತಿ ಗಳಿಸಿದ್ದ ಏಸು ಪ್ರಕಾಶ್ ಇನ್ನಿಲ್ಲ
ಹೊಸನಗರ : ಬಹುಮುಖ ಪ್ರತಿಭೆ, ಚಿತ್ರನಟ, ಸಂಘಟಕ, ಪರಿಸರ ಪ್ರೇಮಿ, ನೂರಾರು ಕೆರೆಗಳ ನಿರ್ಮಾಣ, ಪುನರ್ ನಿರ್ಮಾಣ ಕಾಮಗಾರಿ ನೇತೃತ್ವ ವಹಿಸಿದ್ದ, ಹೊಸನಗರ ತಾಲ್ಲೂಕು ಬಟ್ಟೆಮಲ್ಲಪ್ಪ ಸಮೀಪದ 'ಸಾರಾ’ ಸಂಸ್ಥೆಯ ಸದಸ್ಯ, ಗ್ರಾಮೀಣ ಭಾಗದಲ್ಲಿ ’ನಾಡಚಾವಡಿ’ ಸಂಸ್ಥೆ ಮೂಲಕ ಅನೇಕ ಸಾಮಾಜಿಕ ಕಾರ್ಯ ಮಾಡುತ್ತಿದ್ದ 58 ವರ್ಷ ವಯಸ್ಸಿನ ಹೆಗ್ಗೋಡು ಸಮೀಪದ ನಿವಾಸಿ ಏಸು ಪ್ರಕಾಶ್ (ಪ್ರಕಾಶ್ ಹೆಗ್ಗೋಡು)ರವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ರಾಕಿಂಗ್ ಸ್ಟಾರ್ ಯಶ್ ನಟನೆಯ ’ಕಿರಾತಕ’, ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್, ದರ್ಶನ್, ಉಪೇಂದ್ರ ಸೇರಿದಂತೆ ಕನ್ನಡದ ಖ್ಯಾತ ನಟರ 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪ್ರಕಾಶ್ ಹೆಗ್ಗೋಡು ಅಭಿನಯಿಸಿದ್ದರು. ಹೆಗ್ಗೋಡಿನ ನೀನಾಸಂ ವಿದ್ಯಾರ್ಥಿಯಾಗಿದ್ದ ಏಸು ಪ್ರಕಾಶ್ ಅವರು ಸಾಮಾಜಿಕ ಜಾಗೃತಿಗಾಗಿ ಬೀದಿ ನಾಟಕ ಸೇರಿದಂತೆ ಹತ್ತು ಹಲವು ಬಗೆಯ ರಂಗಭೂಮಿ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು.
ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಪತ್ನಿಯನ್ನು ನಟ ಪ್ರಕಾಶ್ ಹೆಗ್ಗೋಡು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ಹೆಗ್ಗೋಡು ಸಮೀಪ ಪುರಪ್ಪೇಮನೆ ಕಲ್ಲುಕೊಪ್ಪದ ಅವರ ನಿವಾಸದ ಬಳಿ ನಡೆಯಲಿದೆ ಎಂದು ಅವರ ಆತ್ಮೀಯ ಬಳಗ ತಿಳಿಸಿದೆ.
ಕಾಮೆಂಟ್‌ಗಳಿಲ್ಲ