Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಬಿ.ವೈ.ಆರ್‌ಗೆ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ - ಹೊಸನಗರದಲ್ಲಿ ಆಲುವಳ್ಳಿ ವೀರೇಶ್

ಹೊಸನಗರ: ಜಿಲ್ಲೆಗೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅಭಿವೃದ್ಧಿ ಮಂತ್ರ ಪಠಿಸುತ್ತಿರುವ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಜಿಲ್ಲೆಯ ಜನತೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ ನೀಡುವ ಮೂಲಕ ವಿಜಯಶಾಲಿಯಾಗಿ ಮಾಡಿ, ಮತ್ತೊಮ್ಮೆ ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ಹಿಡಿಯಲು ಸಹಕರಿಸಬೇಕು ಎಂದು ಪಕ್ಷದ ಮಹಾಶಕ್ತಿ ಕೇಂದ್ರದ ಅಧ್ಯಕ್ಷ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಆಲುವಳ್ಳಿ ವೀರೇಶ್ ಮತದಾರರಲ್ಲಿ ವಿನಂತಿಸಿದರು.

ಪಟ್ಟಣದ ಬಸ್ ಸ್ಯಾಂಡ್ ಮುಂಭಾಗದ ಬಿಜೆಪಿ ಕಚೇರಿಯಲ್ಲಿ ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಸಂಸದರಾದ ಬಳಿಕ ಬಿ.ವೈ. ರಾಘವೇಂದ್ರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಜಿಲ್ಲೆಯ ಪ್ರತಿ ಗ್ರಾಮಕ್ಕೂ ಮೂಲಭೂತ ಸೌಕರ್ಯ ಸೇರಿದಂತೆ ಅಗತ್ಯ ಜನಪರ ಸೇವೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. 2013ರಲ್ಲಿ ರಾಜ್ಯದ ಕಾಂಗ್ರೆಸ್ ಪಕ್ಷ ಆಡಳಿತ ಸಂದರ್ಭದಲ್ಲಿ ಮೂಲೆಗುಂಪಾಗಿದ್ದ ಜಿಲ್ಲೆಯ ವಿಮಾನ ನಿಲ್ದಾಣ ಕಾಮಗಾರಿ, 2018ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ಬಳಿಕ ಮತ್ತೊಮ್ಮೆ ಚಾಲನೆ ದೊರೆತು, ಪ್ರಧಾನಿ ಮೋದಿ ಅವರಿಂದಲೇ ಉದ್ಘಾಟನಾ ಭಾಗ್ಯ ಸಹ ಕಂಡಿದೆ. ಕಳೆದ ಕೆಲವು ದಶಕಗಳ ಹಿಂದೆ ಬೆಂಗಳೂರಿಗೆ ಜಿಲ್ಲೆಯಿಂದ ಪ್ರತಿದಿನ ಓಡುತ್ತಿದ್ದದ್ದು ಕೇವಲ ಎರಡು ರೈಲುಗಳ ಸಂಚಾರ ಇಂದು ಹದಿನಾರು ಸಂಖ್ಯೆಗೆ ಏರಿಕೆ ಕಂಡಿದೆ. ಅರಸಾಳು, ಕುಂಸಿ ಗ್ರಾಮಗಳಲ್ಲಿ ರೈಲು ನಿಲುಗಡೆ, ಎಫ್.ಎಂ ರೇಡಿಯೋಗೆ ಚಾಲನೆ ಸೇರಿದಂತೆ ಜಿಲ್ಲೆಯಲ್ಲಿ ಹತ್ತಾರು ಬಿಎಸ್‌ಎನ್‌ಎಲ್ ಟವರ‍್ರುಗಳ ನಿರ್ಮಾಣ, ಹಲವು ಫ್ಲೈ ಓವರ್ ನಿರ್ಮಾಣ, ಸಿಗಂದೂರು ಸೇತುವೆ, ಬೆಕ್ಕೋಡಿ ಸೇತುವೆ, ಬಿಲ್ ಸಾಗರ ಸೇತುವೆಗಳು ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರ ಕೊಡುಗೆ ಆಗಿವೆ ಎಂದರು.

2013ರ ರಾಜ್ಯ ಸರ್ಕಾರದ ಜಾತಿ ಸಮೀಕ್ಷೆ ಮೀರಿ ಈ ಬಾರಿ ಜನತೆ ರಾಜ್ಯದಲ್ಲಿ ಅಭಿವೃದ್ಧಿ ಪರ ಮತ ಚಲಾಯಿಸಲಿದ್ದಾರೆ. ಜೆಡಿಎಸ್, ಬಿಜೆಪಿ ಮೈತ್ರಿಯಿಂದ ಒಟ್ಟಾರೆ 28 ಲೋಕಸಭಾ ಸ್ಥಾನಗಳಲ್ಲಿ ಜಯಗಳಿಸಲಿದೆ. ಜಿಲ್ಲೆಯಲ್ಲಿ ಈ ಬಾರಿ ಭದ್ರಾವತಿ, ತೀರ್ಥಹಳ್ಳಿ, ಶಿವಮೊಗ್ಗ ಗ್ರಾಮಾಂತರದ ಜೆಡಿಎಸ್ ಮತದಾರರು ಬಿಜೆಪಿ ಬೆಂಬಲಿಸುವ ಕಾರಣ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಭಾರೀ ಅಂತರದ ಗೆಲುವು ಸಾಧಿಸಲಿದ್ದಾರೆ.             -ಸುರೇಶ್ ಸ್ವಾಮಿರಾವ್.ಜಿ.ಪಂ. ಮಾಜಿ ಸದಸ್ಯ 

ಆದರೆ, ರಾಜ್ಯದ ಇಂದಿನ ಕಾಂಗ್ರೆಸ್ ಪಕ್ಷದ ಕೊಡುಗೆ ಶೂನ್ಯವಾಗಿದೆ. ಅಧಿಕಾರದ ಗದ್ದೆಗೆ ಏರಿ ಹತ್ತು ತಿಂಗಳೇ ಕಳೆದರೂ ಯಾವುದೇ ಅಭಿವೃದ್ದಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡದೆ, ಕೇವಲ ಗ್ಯಾರಂಟಿಗಳ ಮೊರೆ ಹೋಗುತ್ತಿರುವುದು ಜನಸಾಮಾನ್ಯರಿಗೆ ಭವಿಷ್ಯದಲ್ಲಿ ಸಂಕಷ್ಟ ತಂದೊಡ್ಡಲಿದೆ ಎಂಬ ಎಚ್ಚರಿಕೆ ನೀಡಿದ ಅವರು, ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಯಾಗಿ ವರನಟ ಡಾ. ರಾಜಕುಮಾರ್ ಅವರ ಪ್ರತಿಷ್ಠಿತ ಕುಟುಂಬದ ಸೊಸೆ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗಳು ಗೀತಾ ಶಿವರಾಜಕುಮಾರ್ ಕಣಕ್ಕೆ ಇಳಿಸಿದ್ದು, ದಶಕಗಳ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಸೋಲುಂಡ ಬಳಿಕ ಕ್ಷೇತ್ರದತ್ತ ಮುಖ ಮಾಡದ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಕೊಡುಗೆ ಕ್ಷೇತ್ರದ ಜನತೆಗೆ ಏನಿದೆ? ಎಂದು ಪ್ರಶ್ನಿಸಿದರು. ಸುಮಾರು ಎರಡೂವರೆ ಲಕ್ಷ ಮತ ನೀಡಿದ್ದ ಮತದಾರರ ಯಾವುದಾರರೂ ಸಂಕಷ್ಟಗಳಿಗೆ ನೀವು ಸ್ಪಂದಿಸಿದ್ದೀರಾ? ಕೇವಲ ಖ್ಯಾತ ನಟನ ಪತ್ನಿ, ರಾಜಕೀಯ ಕುಟುಂಬದಲ್ಲಿ ಹುಟ್ಟಿದ ಮಾತ್ರಕ್ಕೆ ನಿಮಗೆ ಮತದಾರ ಮತನೀಡಬೇಕೇ? ಎಂದು ಪ್ರಶ್ನಿಸಿದ ಅವರು,  ಸಂಸದ ಬಿ.ವೈ ರಾಘವೇಂದ್ರ ಅವರ ಅಭಿವೃದ್ದಿ ಕಾರ್ಯ ಕುರಿತಂತೆ ಪ್ರತಿ ಮನೆಮನೆಗೂ ಮಾಹಿತಿ ತಲುಪಿಸುವ ಕಾರ್ಯ ಪಕ್ಷದ ಕಾರ್ಯಕರ್ತರಿಂದ ಆಗಬೇಕಿದೆ ಎಂದರು.

ಶತಮಾನಗಳ ಇತಿಹಾಸ ಇರುವ ಕಾಂಗ್ರೆಸ್ ಪಕ್ಷವು ಗ್ಯಾರಂಟಿಗಳ ಮೇಲೆ ಮತಯಾಚನೆಗೆ ಮುಂದಾಗಿರುವುದು ದುರಂತವೇ ಸರಿ. ಸಾಧನೆಗಳ ಮೂಲಕ ಮತಬೇಟೆಗೆ ಮುಂದಾಗಬೇಕಿದ್ದ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಪ್ರಧಾನಿ ಮೋದಿ ಅವರ ಅಭಿವೃದ್ದಿ ಕಾರ್ಯಗಳೆದುರು ಮಂಡಿ ಊರುವುದರಲ್ಲಿ ಸಂಶಯಬೇಡ. - ಎನ್.ಆರ್. ದೇವಾನಂದ್. ಜಿಲ್ಲಾ ಬಿಜೆಪಿ ಪ್ರಮುಖ್

ಗೋಷ್ಠಿಯಲ್ಲಿ ಪ್ರಮುಖರಾದ ಮೋಹನ್ ಮಂಡಾನಿ, ಶಿವಕುಮಾರ್ ಕೋಣೆಮನೆ, ಪ್ರಹ್ಲಾದ್ ಜಯನಗರ, ಓಮಕೇಶ್ ಗೌಡ, ಸುಬ್ರಹ್ಮಣ್ಯ ಕಣಿವೆಬಾಗಿಲು, ರಾಮಪ್ಪಗೌಡ, ರಾಜೇಂದ್ರ ಗಂಟೆ ಮೊದಲಾದವರು ಉಪಸ್ಥಿತರಿದ್ದರು. 

ಕಾಮೆಂಟ್‌ಗಳಿಲ್ಲ