ಹೊಸನಗರ ಕರಿನಗೊಳ್ಳಿ ಬಳಿ ಭೀಕರ ಅಪಘಾತ - ಟಿಪ್ಪರ್ ಹಾಗೂ ಓಮಿನಿ ಮುಖಾಮುಖಿ ಡಿಕ್ಕಿಯಾಗಿ ಕೋಡೂರು ಗ್ರಾಮದ 11 ಜನ ಆಸ್ಪತ್ರೆಗೆ ದಾಖಲು
ಹೊಸನಗರ : ಹೊಸನಗರ ಹೊರವಲಯದ ಕರಿನಗೊಳ್ಳಿ ಸಮೀಪ ಎಂ. ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ಕಚೇರಿ ಎದುರು ಶಿವಮೊಗ್ಗ ಕಡೆಯಿಂದ ಬರುತ್ತಿದ್ದ ಟಿಪ್ಪರ್ ಹಾಗೂ ಗೋಳಿ ಗರಡಿ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಕೋಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾರಕ್ಕಿ ಬುಲ್ಡೋಜರ್ ಗುಡ್ಡದ ಕುಟುಂಬದ ಸದಸ್ಯರಿದ್ದ ಓಮಿನಿ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ, ಓಮಿನಿಯಲ್ಲಿದ್ದ ಆರು ಮಕ್ಕಳು ಸೇರಿದಂತೆ ಒಟ್ಟು 12 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊಸನಗರ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಹಾಗೂ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರಕ್ಕಿ ಬುಲ್ಡೋಜರ್ ಗುಡ್ಡದ ಸತ್ಯಪ್ಪ, ಶರಾವತಿ, ಜಾನಕಮ್ಮ, ಲೀಲಾವತಿ, ಪ್ರಶಾಂತ ಹಾಗೂ 11 ವರ್ಷದೊಳಗಿನ ಮಕ್ಕಳಾದ ಶ್ರವಣ್, ಶ್ರೇಯಾನ್, ಶ್ರೀಮತಿ, ಶ್ರೀಶ, ಶ್ರಾವಣಿ, ಶ್ರಾವ್ಯ ಗಾಯಗೊಂಡವರಾಗಿದ್ದು, ಭೀಕರ ಅಪಘಾತಕ್ಕೆ ನಜ್ಜುಗುಜ್ಜಾದ ಓಮಿನಿಯಿಂದ ಚಾಲಕನನ್ನು ಹೊರೆತೆಗೆಯಲು ಹರಸಾಹಸ ಪಡಬೇಕಾಯಿತು.
ಹೊಸನಗರ ಆರಕ್ಷಕ ಠಾಣೆಯ ಸಬ್ ಇನ್‌ಸ್ಪೆಕ್ಟರ್ ರಾಜು ರೆಡ್ಡಿ ಮತ್ತು ಸಿಬ್ಬಂದಿಗಳು ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ, ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಹೊಸನಗರ ತಾಲ್ಲೂಕಿನಾದ್ಯಂತ ಯಮಸ್ವರೂಪಿ ಮರಳು ಟಿಪ್ಪರ್‌ಗಳು ಅತಿ ವೇಗದಲ್ಲಿ ಹೋಗುವ ಕಾರಣ ಕಾರಣ ಪದೆಪದೇ ಅಪಘಾತಗಳು ಸಂಭವಿಸುತ್ತಿದ್ದು, ಮರಳು ದಂಧೆಕೋರರಿಗೆ ಕಡಿವಾಣ ಹಾಕದೇ ಹೋದರೆ ಇಂತಹ ಅಪಘಾತಗಳಿಗೆ ಜನರು ಬಲಿಯಾಗುವುದು ತಪ್ಪುವುದಿಲ್ಲ. ಆದ್ದರಿಂದ ಇವುಗಳ ವೇಗಕ್ಕೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಾಮೆಂಟ್‌ಗಳಿಲ್ಲ