Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಗೇರುಪುರ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಅಗ್ನಿ ಅವಘಡಗಳ ಅರಿವು ಮತ್ತು ಅಗ್ನಿ ಅನಾಹುತ ತಡೆಗಟ್ಟುವ ದಿನಾಚರಣೆ

ಹೊಸನಗರ : ಗೇರುಪುರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಇಂದು ಹೊಸನಗರ ಅಗ್ನಿಶಾಮಕ ಠಾಣೆ ಇವರಿಂದ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಕಾರ್ಯಕ್ರಮದಡಿ ’ಅಗ್ನಿ ಅವಘಡಗಳ ಅರಿವು’ ಮತ್ತು ’ಅಗ್ನಿ ಅನಾಹುತ ತಡೆಗಟ್ಟುವ ದಿನ’ವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ 2010ರಲ್ಲಿ ಬೆಂಗಳೂರಿನ ಕಾರ್ಲ್‌ಟನ್‌ ಟವರ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತ ಪಟ್ಟ ಒಂಭತ್ತು ಜನ ಹಾಗೂ ರಾಜ್ಯದಲ್ಲಿ ಈವರೆಗೂ ಸಂಭವಿಸಿದ ಅಗ್ನಿ ಅವಘಡಗಳಲ್ಲಿ ಮೃತ ಪಟ್ಟವರ ಸ್ಮರಣಾರ್ಥ 2 ನಿಮಿಷಗಳ ಕಾಲ ಮೌನ ಆಚರಿಸಲಾಯಿತು. ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಕೆ.ಟಿ. ರಾಜಪ್ಪ ಅವರು ಈ ಸಂದರ್ಭದಲ್ಲಿ ಮಕ್ಕಳನ್ನುದ್ದೇಶಿಸಿ ಮಾತನಾಡಿ, ನಾವು ದಿನನಿತ್ಯ ಉಪಯೋಗಿಸುವಂತಹ ವಿವಿಧ ರೀತಿಯ ವಸ್ತುಗಳಲ್ಲಿ ಬೆಂಕಿ ಅವಘಡ ಸಂಭವಿಸಿದರೆ ಮೊದಲು ಅಗ್ನಿಶಾಮಕ ದಳದವರನ್ನು ಸಂಪರ್ಕಿಸಬೇಕು ಮತ್ತು ಯಾವ ರೀತಿಯಾಗಿ ಬೆಂಕಿ ಅವಘಡವಾಗಿದೆ ಎನ್ನುವುದನ್ನು ವಿವರಿಸಿ ಪರಿಹಾರ ಪಡೆಯಬೇಕು ಎಂದು ಅಗ್ನಿ ಅನಾಹುತದಿಂದ ಪಾರಾಗುವ ಬಗೆಯನ್ನು ವಿವರಿಸಿದರು.

ಪ್ರಮುಖ ಅಗ್ನಿಶಾಮಕ ಅಧಿಕಾರಿ ಜೆ. ರವಿ ಮತ್ತು ಇತರೆ ಸಿಬ್ಬಂದಿಗಳು ಅಗ್ನಿ ಅವಘಡಗಳಾದಾಗ ಬೆಂಕಿ ಯಾವ ಪ್ರಮಾಣದಲ್ಲಿರುತ್ತದೆ, ಯಾವುದರಿಂದ ಅಗ್ನಿ ಅವಘಡವಾಗಿದೆ ಎಂಬ ವಿಷಯಗಳನ್ನು ತಿಳಿದು ಅದಕ್ಕೆ ಸಂಬಂಧಿಸಿದಂತೆ ಅಗ್ನಿ ಆರಿಸುವ ಉಪಕರಣಗಳನ್ನು ರವಾನಿಸಲಾಗುತ್ತದೆ ಎಂದು ತಿಳಿಸಿ, ಉಪಕರಣಗಳನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸಿದರು. ನಂತರ ಬೆಂಕಿ ಆರಿಸುವ ಯಂತ್ರದ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೂ ಸುಮಾರು ಒಂದು ಗಂಟೆಯ ಕಾಲ ಅಣಕು ಪ್ರಾತ್ಯಕ್ಷಿಕೆಯನ್ನು ನೀಡಿ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಪ್ರಾಂಶುಪಾಲರಾದ ಚಂದ್ರಶೇಖರ್ ಎಂ.ಪಿ. ಇವರು ಮಾತನಾಡಿ, ಅಗ್ನಿ ಅನಾಹುತ ಸಂಭವಿಸಿದಾಗ ಅಗ್ನಿಶಾಮಕ ದಳಕ್ಕೆ ನಾವು ಕರೆ ಮಾಡಿ ವಿಷಯವನ್ನು ತಿಳಿಸಿದರೆ, ಈ ಮೂಲಕ ಮುಂದೆ ಸಂಭವಿಸಬಹುದಾದ ಇನ್ನಷ್ಟು ಅನಾಹುತವನ್ನು ತಪ್ಪಿಸಿದಂತಾಗುತ್ತದೆ, ಈ ಮೂಲಕ ನಾವು ಬದುಕುತ್ತಿರುವ ಸಮಾಜಕ್ಕೆ  ಕೊಡುಗೆಯನ್ನು ಕೊಟ್ಟಂತಾಗುತ್ತದೆ ಎಂದು ತಿಳಿಸಿ, ಮಕ್ಕಳಲ್ಲಿ ಅಗ್ನಿ ಅವಘಡ ಹಾಗೂ ಅದರ ಪರಿಹಾರದ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದ ಅಗ್ನಿಶಾಮಕ ದಳದವರಿಗೆ ವಂದನೆ ಸಲ್ಲಿಸಿದರು.

ಕಾಮೆಂಟ್‌ಗಳಿಲ್ಲ