ಪೋಷಕರು, ಗ್ರಾಮಸ್ಥರ ಗಮನ ಸೆಳೆದ ಕೋಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ’ಮಕ್ಕಳ ಸಂತೆ’
ಕೋಡೂರು: ಶತಮಾನ ಕಂಡ ಹೊಸನಗರ ತಾಲ್ಲೂಕು ಕೋಡೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಇಂದು ಸಂತೆಯ ಮೈದಾನವಾಗಿ ಬದಲಾಗಿತ್ತು. ಎಲ್ಲಿ ನೋಡಿದರಲ್ಲಿ ಅಪ್ಪು ಗೋಲ್‌ಗಪ್ಪ ಶಾಪ್, ಭಜರಂಗಿ ಆಲ್ ಇನ್ ಒನ್, ನಾದಿಯ ಒಣಮೀನು ಅಂಗಡಿ, ಮಲ್ನಾಡ್ ಫ್ರೂಟ್ ಅಂಡ್ ಜ್ಯೂಸ್ ಸೆಂಟರ್... ಹೀಗೆ ವೈವಿಧ್ಯಮಯ ಹೆಸರಿನ ಸಂತೆ ಮಳಿಗೆಗಳು, ಮಳಿಗೆಗಳಲ್ಲಿ ವ್ಯಾಪಾರಕ್ಕೆ ಕುಳಿತ ಚಿಣ್ಣರು... ಸೊಪ್ಪು ಬೇಕಾ ಸೊಪ್ಪು, ಗೋಲಿ ಸೋಡಾ ಇಪ್ಪತ್ತು ರೂಪಾಯಿ ಎನ್ನುವ ಕೂಗು... ಹೀಗೆ ಇಡೀ ಶಾಲೆಯ ಆವರಣವೇ ಸಂತೆ ಮಾರುಕಟ್ಟೆಯಾಗಿ ಬದಲಾಗಿತ್ತು. ಮಕ್ಕಳ ಪೋಷಕರು, ಗ್ರಾಮಸ್ಥರು ಉತ್ಸಾಹದಿಂದ ಪುಟ್ಟ ಮಕ್ಕಳ ಸಂತೆ ಮಳಿಗೆಯಲ್ಲಿ ಖರೀದಿಯಲ್ಲಿ ತೊಡಗಿದ್ದರು.
ಹೌದು, ಕೋಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ’ಮಕ್ಕಳ ಸಂತೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಕೋಡೂರು ಇವರ ಸಹಯೋಗದಲ್ಲಿ ಇಂದು ನಡೆದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ, ತರಕಾರಿ ಮಳಿಗೆಯಲ್ಲಿ ತರಕಾರಿಯನ್ನು ಖರೀದಿಸುವ ಮೂಲಕ ಗ್ರಾಮ ಪಂಚಾಯಿತಿ ಸದಸ್ಯ ಜಯಪ್ರಕಾಶ್ ಶೆಟ್ಟಿ ಸಂತೆಯನ್ನು ಉದ್ಘಾಟಿಸಿದರು. ಮಕ್ಕಳಲ್ಲಿ ಲೆಕ್ಕ ಹಾಗೂ ಲೆಕ್ಕಾಚಾರದ ಗ್ರಹಿಕೆ ಮತ್ತು ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಬೇಕು, ಜೊತೆಗೆ ವ್ಯಾಪಾರ ಮಾಡುವ ಕಲೆಯೂ ಬೆಳೆಯಬೇಕು ಎನ್ನುವ ಉದ್ದೇಶದಿಂದ ಆಯೋಜಿಸುತ್ತಿರುವ ಮಕ್ಕಳ ಸಂತೆಯಲ್ಲಿ ಮಕ್ಕಳು ಮತ್ತು ಮಕ್ಕಳಿಗೆ ಬೆಂಬಲವಾಗಿ ನಿಂತ ಪೋಷಕರು ಇಡೀ ಶಾಲೆಯ ಆವರಣವನ್ನೇ ನಿಜ ಸಂತೆ ಮಾರುಕಟ್ಟೆ ಎನ್ನುವಂತಾಗಿಸಿದ್ದರು. ಎಳನೀರು, ಬಾಳೆಹಣ್ಣು, ಸಿಹಿ ತಿಂಡಿಗಳು, ತರಕಾರಿ, ವಿವಿಧ ಬಗೆಯ ಸೊಪ್ಪು, ಒಣಮೀನು, ತಾಜಾ ಹಣ್ಣಿನ ರಸ, ಪುಸ್ತಕ, ಪೆನ್ನು, ಚಾಕೋಲೆಟ್, ಬೆಲ್ಲ, ಪಾನಿಪೂರಿ... ಹೀಗೆ ವೈವಿಧ್ಯಮಯ ವಸ್ತುಗಳ ಸಂತೆ ಮಳಿಗೆಗಳು, ಮಳಿಗೆಗಳಲ್ಲಿದ್ದ ಮಕ್ಕಳು ನಮ್ಮ ಅಂಗಡಿಗೆ ಬನ್ನಿ, ನಮ್ಮಲ್ಲಿ ಇಷ್ಟು ರೇಟು ಎಂದು ಹೇಳಿ ಗ್ರಾಹಕರನ್ನು ಸೆಳೆಯುತ್ತಿದ್ದ ರೀತಿ ಸಂತೆಗೆ ವಿಶೇಷ ಕಳೆ ತುಂಬಿತ್ತು. ಕಳೆದ ಎರಡು ದಿನಗಳಿಂದ ಮಕ್ಕಳು ಈ ಸಂತೆಗಾಗಿ ಸಿದ್ಧತೆ ನಡೆಸಿದ್ದು, ಇಂದು ಪೋಷಕರು ಹಾಗೂ ಗ್ರಾಮಸ್ಥರು ಆಗಮಿಸುತ್ತಿದ್ದಂತೆ ಮಳಿಗೆಗಳಲ್ಲಿ ತಾವು ಮಾರಾಟಕ್ಕಿಡಬೇಕಿರುವ ವಸ್ತುಗಳನ್ನು ನೀಟಾಗಿ ಜೋಡಿಸಿಟ್ಟು, ಶಿಸ್ತಿನಿಂದ ವ್ಯಾಪಾರ ನಡೆಸುತ್ತಿದ್ದ ರೀತಿ ಎಲ್ಲರ ಮೆಚ್ಚುಗೆ ಗಳಿಸಿತು. ತಮ್ಮ ಮಳಿಗೆಯ ಬಳಿ ಗ್ರಾಹಕರು ಬಂದು ಇಂತಹ ವಸ್ತು ಬೇಕು ಎಂದು ಕೇಳುತ್ತಿದ್ದಂತೆ ವಸ್ತುಗಳನ್ನು ಸರಿಯಾಗಿ ಲೆಕ್ಕ ಮಾಡಿ, ತೂಕ ಮಾಡಿ ಕೊಡುತ್ತಿದ್ದ ರೀತಿ, ಹಣ ಪಡೆದುಕೊಂಡು ಉಳಿದ ಚಿಲ್ಲರೆಯನ್ನು ಹಿಂದಿರುಗಿಸುತ್ತಿದ್ದ ಬಗೆ ಶಾಲಾ ಮಕ್ಕಳ ಲೆಕ್ಕದಲ್ಲಿನ ಚುರುಕುತನ, ವ್ಯಾಪಾರ ಮಾಡುವ ಕಲೆಯನ್ನು ತೋರಿಸುತ್ತಿತ್ತು. ಮತ್ತು ಈ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ಮಾತುಗಳನ್ನು ಹೇಳುತ್ತಿದ್ದದ್ದು ಎಲ್ಲೆಡೆ ಕೇಳಿಸುತ್ತಿತ್ತು. ಇನ್ನು ಕೆಲವು ಮಕ್ಕಳ ಪೋಷಕರು ಮಕ್ಕಳಿಗೆ ಜೊತೆಯಾಗಿ ಅಂಗಡಿಯಲ್ಲಿ ವಸ್ತುಗಳನ್ನು ಜೋಡಿಸುವ, ವ್ಯಾಪಾರದಲ್ಲಿ ಸಹಾಯ ಮಾಡುತ್ತಿದ್ದದ್ದು ಮಕ್ಕಳಿಗೆ ಪೋಷಕರು ನೀಡುತ್ತಿರುವ ಪ್ರೋತ್ಸಾಹ ಎಂತಹದ್ದು ಎನ್ನುವುದನ್ನು ತೋರಿಸುತ್ತಿತ್ತು. ಒಟ್ಟಿನಲ್ಲಿ ಒಂದು ನಿಜವಾದ ಸಂತೆಯೇ ಈ ದಿನ ಕೋಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮೇಳೈಸಿತ್ತು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೃಷ್ಣ ಆಚಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂತೆಯ ಉದ್ಘಾಟನಾ ಸಮಾರಂಭದಲ್ಲಿ ಎಸ್‌ಡಿಎಂಸಿಯ ಸದಸ್ಯರು, ಶಿಕ್ಷಕವೃಂದದವರು, ಪಂಚಾಯಿತಿ ಸದಸ್ಯರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳಿಲ್ಲ