ಹೊಸಕೆಸರೆ ಗ್ರಾಮಸ್ಥರಿಂದ ತುಂಬ್ರಿಕೊಪ್ಪ ಕೆರೆ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ - ಬಟ್ಟೆಮಲ್ಲಪ್ಪ ಸಾರಾ ಸಂಸ್ಥೆ ಸಹಯೋಗ
ಹೊಸನಗರ : ಈಗಾಗಲೇ ಕೆರೆಗಳ ಜೀರ್ಣೋದ್ಧಾರ ಮಾಡುವ ಮೂಲಕ ರಾಜ್ಯವ್ಯಾಪಿ ಹೆಸರಾಗಿರುವ ತಾಲ್ಲೂಕಿನ ಬಟ್ಟೆಮಲ್ಲಪ್ಪದ ಸಾರಾ ಸಂಸ್ಥೆಯ ಸಹಯೋಗದಲ್ಲಿ ಮಾರುತೀಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಕೆಸರೆ ಗ್ರಾಮಸ್ಥರು ಸಂಘಟಿತರಾಗಿ ಇಲ್ಲಿನ ತುಂಬ್ರಿಕೊಪ್ಪ ಕೆರೆಯ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಸರ್ಕಾರದ ನಕಾಶೆ ಕಂಡ ಈ ಕೆರೆಯು ಒಂದು ಎಕರೆ ವಿಸ್ತೀರ್ಣ ಹೊಂದಿದ್ದು, ಈ ಕೆರೆಗೆ ಆರೇಳು ದಶಕಗಳ ಇತಿಹಾಸವಿದೆ. ಸುಮಾರು ಇಪ್ಪತ್ತೈದು ಎಕರೆ ಅಚ್ಚುಕಟ್ಟು ಪ್ರದೇಶದ ರೈತಾಪಿಗಳು ಈ ಕೆರೆ ನೀರನ್ನೇ ತಮ್ಮ ಕೃಷಿ ಚಟುವಟಿಕೆಗಳಿಗೆ ಆಶ್ರಯಿಸಿದ್ದಾರೆ. ಈ ಹಿನ್ನಲೆಯಲ್ಲಿ ಗ್ರಾಮಾಭಿವೃದ್ಧಿಯನ್ನೇ ತನ್ನ ಮೂಲ ಉದ್ದೇಶ ಎಂಬುದಾಗಿ ಬಿಂಬಿಸಿಕೊಂಡಿರುವ ಸ್ಥಳೀಯ ಸಾರಾ ಸಂಸ್ಥೆ ಗ್ರಾಮಸ್ಥರ ಹಿತ ಕಾಪಾಡಲು ಕೆರೆ ಅಭಿವೃದ್ಧಿ ಕಾಮಗಾರಿಗೆ ಮುಂದಾಗಿದೆ. ಸುಮಾರು ಐದು ಲಕ್ಷ ರೂಪಾಯಿ ಮೊತ್ತದಲ್ಲಿ ಈ ಕಾಮಗಾರಿ ನಡೆಯುತ್ತಿದ್ದು, ಸರ್ಕಾರದ ನಯಾಪೈಸೆ ಬಯಸದೇ ಗ್ರಾಮಸ್ಥರೇ ಹಣ ಹೂಡಲೂ ಮುಂದಾಗಿರುವುದು ವಿಶೇಷ.
ಹೊಸಕೆಸರೆ ಗ್ರಾಮದ ಸರ್ವೆ ನಂಬರ್ 40ರಲ್ಲಿರುವ ಈ ಕೆರೆಗೆ ಸೂಕ್ತ ಕಾಯಕಲ್ಪ ದೊರೆತಲ್ಲಿ ಸುತ್ತಮುತ್ತಲ ರೈತಾಪಿ, ಜನ-ಜಾನುವಾರುಗಳಿಗೆ ಬೇಸಿಗೆಯಲ್ಲಿ ನೀರಿನ ಕೊರತೆ ನೀಗಿಸಲು ಸಹಕಾರಿ ಆಗಲಿದೆ ಎಂಬುದು ಕೆರೆ ಅಭಿವೃದ್ಧಿ ಸಮಿತಿ ಸದಸ್ಯ ರಾಘವೇಂದ್ರ ಅವರ ಅನಿಸಿಕೆ. ಈವರೆಗೆ ಜಿಲ್ಲೆಯಲ್ಲಿ ನೂರಾರು ಕೆರೆಗಳಿಗೆ ಕಾಯಕಲ್ಪ ನೀಡುವಲ್ಲಿ ಸಾಫಲ್ಯ ಕಂಡಿರುವ ಸಾರಾ ಸಂಸ್ಥೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಜನಪರ ಕಾರ್ಯಕ್ರಮ ಹಮ್ಮಿಕೊಳ್ಳಲಿ ಎಂಬುದು ಗ್ರಾಮಸ್ಥರ ಆಶಯವೂ ಆಗಿದೆ.
ಕಾಮೆಂಟ್‌ಗಳಿಲ್ಲ