ಶಿವಮೊಗ್ಗ ನಗರದಲ್ಲಿ ಬೆಳ್ಳಂಬೆಳಿಗ್ಗೆ ಕಾಣಿಸಿಕೊಂಡಿತು ಕರಡಿ - ಕೆಲವೇ ಗಂಟೆಗಳಲ್ಲಿ ಸೆರೆಸಿಕ್ಕ ಕರಡಿ ಸೆರೆ ಕಾರ್ಯಾಚರಣೆ ಹೇಗಿತ್ತು ಗೊತ್ತಾ?
ಶಿವಮೊಗ್ಗ : ಇಲ್ಲಿನ ಡಿವಿಜಿ ಪಾರ್ಕ್ ಬಳಿ ಕಾಣಿಸಿಕೊಂಡು, ವಾಕಿಂಗ್ ಹೋದ ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿದ್ದ ಕರಡಿಯನ್ನು ಹಿಡಿಯುವಲ್ಲಿ ಶಿವಮೊಗ್ಗ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಬಯಲುಸೀಮೆ ಪ್ರದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕರಡಿ ಶಿವಮೊಗ್ಗದಂತಹ ಮಲೆನಾಡಿನ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು ಸಹಜವಾಗಿಯೇ ಜನರ ಆತಂಕಕ್ಕೆ ಕಾರಣವಾಗಿತ್ತು. ಅದರಲ್ಲೂ ವಾಕಿಂಗ್ ಹೋಗುತ್ತಿದ್ದವರ ಮೇಲೆ ಕರಡಿ ದಾಳಿ ನಡೆಸಿದೆ ಎನ್ನುವುದೇ ಹೆಚ್ಚಿನವರಲ್ಲಿ ಭಯ ಹುಟ್ಟಿಸಿತ್ತು. ಇದರೊಂದಿಗೆ ನಾಯಿಗಳು ಅಟ್ಟಿಸುತ್ತಿದ್ದರಿಂದ ಆತಂಕಗೊಂಡ ಕರಡಿ ಡಿವಿಜಿ ಪಾರ್ಕ್ ಎದುರಿನ ಕುರುಚಲು ಗಿಡಗಳಿರುವ ಖಾಲಿ ನಿವೇಶನದಲ್ಲಿ ಗಿಡಗಳ ಮಧ್ಯೆ ಅವಿತು ಕುಳಿತಿತ್ತು. ಈ ಹಿನ್ನೆಲೆಯಲ್ಲಿ ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯ ಸಿಬ್ಬಂದಿ, ಕರಡಿ ಇರುವ ಜಾಗದ ಸಮೀಪ ಜನರು ಹೋಗದಂತೆ ನಿರ್ಬಂಧಿಸಿದರು. ಹಾಗೂ ಕರಡಿ ಅಡಗಿ ಕುಳಿತಿದ್ದ ಜಾಗದ ಸುತ್ತಲೂ ಬಲೆ ಹಾಕಿ ಅದು ಇರುವ ಜಾಗದಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಂಡರು. ಈ ನಡುವೆ ಪಶು ವೈದ್ಯರಿಗೆ ಈ ಬಗ್ಗೆ ಸುದ್ದಿ ಮುಟ್ಟಿಸಿ ಅವರು ಬಂದಕೂಡಲೇ ಅರಿವಳಿಕೆ ಮದ್ದು ನೀಡಲಾಯಿತು. ಆನಂತರ ಸುತ್ತಲೂ ಹಾಕಿದ್ದ ಬಲೆಯ ಸಮೀಪ ಬರುವಂತೆ ಮಾಡಿ ಕರಡಿಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಯಿತು. ಕಾರ್ಯಾಚರಣೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಫ್ ಶಿವಶಂಕರ್, ’ಶಿವಮೊಗ್ಗ ಪಟ್ಟಣಕ್ಕೆ ಸಮೀಪವಾಗಿ ಶೆಟ್ಟಿಹಳ್ಳಿ ಅಭಯಾರಣ್ಯ ಇರುವುದರಿಂದ ಅಲ್ಲಿಂದಲೇ ಕರಡಿ ಬಂದಿದೆ ಎಂದು ಅಂದಾಜಿಸಲಾಗಿದೆ. ಕರಡಿಗೆ ಆರರಿಂದ ಎಂಟು ವರ್ಷವಾಗಿರಬಹುದು. ಗಂಡೋ ಹೆಣ್ಣೋ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಪಶು ವೈದ್ಯರ ಸಲಹೆ ಮೇರೆ ಅದರ ಆರೋಗ್ಯ ಸ್ಥಿತಿಯನ್ನು ನೋಡಿಕೊಂಡು ಮುಂದೆ ಎಲ್ಲಿ ಬಿಡಬೇಕು ಎನ್ನುವುದನ್ನು ನಿರ್ಧರಿಸಲಾಗುವುದು ಎಂದು ಹೇಳಿದರು. ಶಿವಮೊಗ್ಗದಲ್ಲಿ ಕರಡಿ ಕಾಣಿಸಿಕೊಂಡಿದೆಯಂತೆ ಎನ್ನುವ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದ್ದರಿಂದ ಕರಡಿಯನ್ನು ನೋಡಲು ಸಾಕಷ್ಟು ಸಂಖ್ಯೆಯ ಜನ ಜಮಾಯಿಸಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿ ಕರಡಿಯನ್ನು ಹಿಡಿದು ಬೋನಿಗೆ ಹಾಕುತ್ತಿದ್ದಂತೆ ನೆರೆದಿದ್ದ ಜನರು ಜೈಕಾರ ಹಾಕಿದರು.
ಕಾಮೆಂಟ್‌ಗಳಿಲ್ಲ