Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಸಾವಿಗೂ ಅವರಿಬ್ಬರನ್ನು ಬೇರಾಗಿಸಲಾಗಲಿಲ್ಲ - ಬಂದರೆ ನಾವಿಬ್ಬರೂ ನಿನ್ನೊಂದಿಗೆ ಜೊತೆಯಾಗಿ ಬರುತ್ತೇವೆ ಎಂದು ಸಾವಿನಲ್ಲೂ ಜೊತೆಯಾದ ಮುಂಬಾರಿನ ಹೊಳೆಯಪ್ಪ ಗಂಗಮ್ಮ ದಂಪತಿ

ಹೊಸನಗರ : ’ಬದುಕಿನುದ್ದಕ್ಕೂ ಜೊತೆಯಾಗಿ ನಡೆಯೋಣ’ ಎಂದು ಜೊತೆಯಾಗಿ ಹೆಜ್ಜೆ ಇಡಲಾರಂಭಿಸಿದ ಸಂಗಾತಿಗಳನ್ನು ಯಾವುದರಿಂದ ಬೇರೆ ಮಾಡಲಾಗದಿದ್ದರೂ ಸಾವಿನೆದುರು ಅವರು ಸೋತು ಬಿಡುತ್ತಾರೆ. ಯಾಕೆಂದರೆ ಎಂತಹ ಪ್ರೀತಿ ಮತ್ತು ಸಾಂಗತ್ಯವನ್ನೂ ’ಸಾವು’ ಬೇರೆ ಮಾಡಿಬಿಡುತ್ತದೆ. ಆದರೆ ಈ ಸಾವಿಗೂ ಸೆಡ್ಡು ಹೊಡೆದು ನಮ್ಮಿಬ್ಬರನ್ನು ಬೇರೆ ಮಾಡಲು ನಿನ್ನಿಂದಲೂ ಸಾಧ್ಯವಿಲ್ಲ, ಬಂದರೆ ನಾವಿಬ್ಬರೂ ನಿನ್ನ ಜೊತೆಯಲ್ಲೇ ಬರುತ್ತೇವೆ ಎಂದು ಜೊತೆಜೊತೆಯಾಗಿ ಹೊರಟವರು ಹೊಸನಗರ ತಾಲ್ಲೂಕು ಮುಂಬಾರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಳೆಯಪ್ಪ ಹಾಗೂ ಗಂಗಮ್ಮ ದಂಪತಿಗಳು!

ಹೌದು, ಈ ವೃದ್ಧ ದಂಪತಿಗಳು ತಮ್ಮನ್ನು ಬೇರೆ ಮಾಡಲು ಬಂದ ಸಾವಿಗೆ, ಬಂದರೆ ನಾವಿಬ್ಬರೂ ಜೊತೆಯಾಗಿ ನಿನ್ನೊಂದಿಗೆ ಬರುತ್ತೇವೆ ಎಂದು ಇಂದು ಬೆಳಗಿನ ಜಾವ ಸಾವಿನೊಂದಿಗೆ ಜೊತೆ ಜೊತೆಯಾಗಿಯೇ ಹೊರಟು ನಿಂತಿದ್ದಾರೆ.

ಹೊಸನಗರ ತಾಲ್ಲೂಕು ಮುಂಬಾರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಾವಂತೂರು ಗ್ರಾಮ ಸಾಲತೋಡೆಯ ಕೃಷಿ ಕಾರ್ಮಿಕ ದಂಪತಿಗಳು ಹೊಳೆಯಪ್ಪ ಮತ್ತು ಗಂಗಮ್ಮ. ಹೊಳೆಯಪ್ಪನವರಿಗೆ 90 ವರ್ಷವಾದರೆ, ಗಂಗಮ್ಮನವರಿಗೆ 84 ವರ್ಷ. ಬದುಕಿನುದ್ದಕ್ಕೂ ಕಷ್ಟ ಸುಖಗಳಲ್ಲಿ ಒಂದಾಗಿ ಹೆಜ್ಜೆ ಇಟ್ಟ ಈ ದಂಪತಿಗಳಿಗೆ ವಯೋಸಹಜ ಸಣ್ಣ ಪುಟ್ಟ ಅನಾರೋಗ್ಯವಿತ್ತು. ಇಂದು ಅಂದರೆ ಗುರುವಾರ ಬೆಳಗಿನ ಜಾವ 1.30 ಗಂಟೆಗೆ ಹೊಳೆಯಪ್ಪನವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಹೊಳೆಯಪ್ಪನವರು ಮೃತ ಪಟ್ಟ ವಿಷಯವನ್ನು ಗಂಗಮ್ಮನವರಿಗೆ ಮನೆಯವರು ತಿಳಿಸಿದ್ದಾರೆ. ಗಂಡ ಮೃತಪಟ್ಟ ವಿಷಯ ತಿಳಿದ ಗಂಗಮ್ಮನವರು ಕಣ್ಣೀರಾಗಿದ್ದಾರೆ, ಮನೆಯವರೆಲ್ಲರೂ ಸಮಾಧಾನ ಮಾಡಿದಾಗ ಸಮಾಧಾನಗೊಂಡಂತೆ ಕಾಣಿಸಿದ್ದಾರಾದರೂ ಬದುಕಿನುದ್ದಕ್ಕೂ ನಿನ್ನೆಲ್ಲದಕ್ಕೂ ನಾನಿರುತ್ತೇನೆ ಎಂದು ಹೆಜ್ಜೆ ಇಟ್ಟು ಬಂದಿದ್ದ ಪತಿಯ ಅಗಲಿಕೆಯನ್ನು ಗಂಗಮ್ಮನವರ ಹೃದಯ ಸಹಿಸಿಕೊಂಡಿಲ್ಲ. ಹೊಳೆಯಪ್ಪನವರು ಮೃತಪಟ್ಟು ಒಂದು ಗಂಟೆಯೂ ಆಗಿರಲಿಲ್ಲ, ಅಷ್ಟರಲ್ಲಾಗಲೇ ’ನಿಮ್ಮೊಂದಿಗೆ ನಾನೂ ಬರುತ್ತೇನೆ’ ಎಂದು ಗಂಗಮ್ಮನವರು ಕೂಡಾ ಉಸಿರು ನಿಲ್ಲಿಸಿದ್ದಾರೆ. ಹೃದಯಾಘಾತವಾಗಿ ಗಂಗಮ್ಮನವರೂ ಮೃತಪಟ್ಟಿದ್ದಾರೆ. 

ಹೀಗೆ ಬದುಕಿನುದ್ದಕ್ಕೂ ಕಷ್ಟ ಸುಖಗಳಲ್ಲಿ ತೂಗುತ್ತಾ, ಜೊತೆಯಾಗಿ ಅಳುತ್ತಾ ನಗುತ್ತಾ ತುಂಬು ಜೀವನ ನಡೆಸಿದ ಮುಂಬಾರಿನ ಹೊಳೆಯಪ್ಪ ಮತ್ತು ಗಂಗಮ್ಮ ದಂಪತಿಗಳು ಸಾವಿನಲ್ಲೂ ಜೊತೆಯಾಗಿಯೇ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಸಾವಿಗೂ ಸೆಡ್ಡು ಹೊಡೆದ ದಂಪತಿಯಾಗಿ ಗಂಗಮ್ಮ ಮತ್ತು ಹೊಳೆಯಪ್ಪ ಊರಿನವರ ಮೆಚ್ಚುಗೆಯ ಕಣ್ಣುಗಳಲ್ಲಿ ಈಗಲೂ ಜೀವಂತವಾಗಿದ್ದಾರೆ.

ಮೃತ ದಂಪತಿಗಳು ಇಬ್ಬರು ಗಂಡು, ಐವರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸಾವಿನಲ್ಲೂ ಒಂದಾಗಿ ಹೋದ ಅಪರೂಪದ ಈ ದಂಪತಿಗಳ ನಿಧನಕ್ಕೆ ಮುಂಬಾರು ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌ಗಳಿಲ್ಲ