Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಪುರಪ್ಪೆಮನೆ ಗ್ರಾಮ ಪಂಚಾಯಿತಿಯಿಂದ ಆರಂಭವಾಯಿತು ’ವಿಧಾನಸಭಾ ಕ್ಷೇತ್ರ ಹೋರಾಟದ ನಡಿಗೆ ಗ್ರಾಮ ಪಂಚಾಯ್ತಿಗಳ ಕಡೆಗೆ ಅಭಿಯಾನ’ - 400 ಕಿ.ಮೀ ಸಾಗಲಿರುವ ಯಾತ್ರೆ

ಹೊಸನಗರ : ವಿಧಾನ ಸಭಾ ಕ್ಷೇತ್ರ ಪಡೆದೇ ತೀರಬೇಕು, ಇದು ನಮ್ಮೆಲ್ಲರ ಶಪಥವಾಗಬೇಕು ಎಂದು ತಾಲ್ಲೂಕು ಗ್ರಾಮ ಪಂಚಾಯಿತಿಗಳ ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ ಹೇಳಿದರು.

ಇಂದು ಪುರಪ್ಪೆಮನೆ ಗ್ರಾಮ ಪಂಚಾಯಿತಿ ಆವರಣದಲ್ಲಿ ’ವಿಧಾನಸಭಾ ಕ್ಷೇತ್ರ ಹೋರಾಟ ನಡಿಗೆ ಗ್ರಾಮ ಪಂಚಾಯ್ತಿಗಳ ಕಡೆಗೆ ಅಭಿಯಾನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹೊಸನಗರ ತಾಲ್ಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯದಂತೆ ಈ ಹೋರಾಟವನ್ನು ರೂಪಿಸಲಾಗಿದೆ. ಹೊಸನಗರ ತಾಲ್ಲೂಕು ವಿವಿಧ ವಿದ್ಯುತ್ ಮತ್ತು ಜಲ ಯೋಜನೆಗಳಿಂದ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಒಂದೆಡೆ ಇಡೀ ನಾಡಿಗೆ ಬೆಳಕು ಕೊಡುವ ಯೋಜನೆಯಾದರೆ, ಇನ್ನೊಂದೆಡೆ ಪಶ್ಚಿಮ ಘಟ್ಟ. ಹೀಗಾಗಿ ಇಲ್ಲಿ ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ವಿಂಗಡಣೆ ಆಗದೆ, ವಿಸ್ತೀರ್ಣ ಮತ್ತು ಭೌಗೋಳಿಕ ಹಿನ್ನೆಲೆ ಆಧಾರದಲ್ಲಿ ಕ್ಷೇತ್ರ ನೀಡಬೇಕು ಎಂದು ಅವರು ಅಗ್ರಹಿಸಿದರು.

ಹರಿದು ಹಂಚಿರುವ ಕ್ಷೇತ್ರವನ್ನು ಮತ್ತೆ ಒಟ್ಟುಗೂಡಿಸುವ ನಿಟ್ಟಿನಲ್ಲಿ ಮಠಾಧೀಶರು, ರಾಜಕಾರಣಿಗಳು, ಕಲಾವಿದರು, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ರೈತರು, ಕಾರ್ಮಿಕರು ಒಂದಾಗಬೇಕಿದೆ ಎಂದು ಈ ಸಂದರ್ಭದಲ್ಲಿ ಶ್ರೀನಿವಾಸ್ ರೆಡ್ಡಿ ಕರೆ ನೀಡಿದರು.

ಕ್ಷೇತ್ರಕ್ಕೆ ಒಳಪಡುವ ಪ್ರತಿ ಗ್ರಾಮ ಪಂಚಾಯಿತಿಗಳು ಒಕ್ಕೊರಲಿನಿಂದ ಈ ಹೋರಾಟವನ್ನು ಬೆಂಬಲಿಸುತ್ತಿದ್ದೇವೆ. ಅಲ್ಲದೇ ಪ್ರತಿ ಗ್ರಾಮ ಪಂಚಾಯಿತಿಯು ವಿಶೇಷ ಸಾಮಾನ್ಯ ಸಭೆ ಮತ್ತು ಗ್ರಾಮ ಸಭೆಗಳ ಮೂಲಕ ನಿರ್ಣಯ ಕೈಗೊಂಡು ರಾಷ್ಟ್ರಪತಿ, ಚುನಾವಣಾ ಆಯೋಗ, ಪ್ರಧಾನ ಮಂತ್ರಿ, ರಾಜ್ಯಪಾಲರು ಹಾಗೂ ಮುಖ್ಯ ಮಂತ್ರಿಗಳಿಗೆ ಕಳುಹಿಸಿಕೊಡುವ ನಿರ್ಣಯವನ್ನು ತಾಲ್ಲೂಕು ಒಕ್ಕೂಟ ಕೈಗೊಂಡಿದೆ ಎಂದು ಒಕ್ಕೂಟದ ಸಂಚಾಲಕ ಹೆಚ್. ಬಿ. ಚಿದಂಬರ ಹೇಳಿದರು.

ಹಿರಿಯರು ಈಗಾಗಲೇ ಹೋರಾಟ ಆರಂಭಿಸಿದ್ದಾರೆ. ಅವರಿಗೆ ನಾವೂ ಸ್ಥಳೀಯ ಆಡಳಿತವಾಗಿ ಕೈ ಜೋಡಿಸುವ ಕೆಲಸ ಮಾಡುತ್ತೇವೆ. ರಥಯಾತ್ರೆಯ ನಂತರ ಹಂತ ಹಂತವಾಗಿ ಹೋರಾಟವನ್ನು ಕೊಂಡೊಯ್ಯಬೇಕಿದೆ. ಇದಕ್ಕೆ ಎಲ್ಲಾ ಜನಪ್ರತಿನಿದಿಗಳು ಕೈ ಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಅಧ್ಯಕ್ಷೆ ಸುಜಾತ ದಿನೇಶ್, ಉಪಾಧ್ಯಕ್ಷ ರಾಘವೇಂದ್ರ, ಸದಸ್ಯರಾದ ಸಂತೋಷ್ ಮಳವಳ್ಳಿ, ಜಯಪ್ರಕಾಶ್ ಶೆಟ್ಟಿ, ಗೋಪಾಲ್ ಹಿಲಗೋಡು, ಇಕ್ಬಾಲ್ ಅಹ್ಮದ್, ಕಲಾವಿದ ಗೋಪಾಲಮೂರ್ತಿ ಹೆಬೈಲು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಇಂದು ಪುರಪ್ಪೆಮನೆ, ಹರಿದ್ರಾವತಿ, ಮಾರುತೀಪುರ, ಹರತಾಳು, ರಿಪ್ಪನ್‌‌‌ಪೇಟೆ, ಕೆಂಚನಾಲ, ಅರಸಾಳು, ಬೆಳ್ಳೂರು ಗ್ರಾಮ ಪಂಚಾಯಿತಿಗಳಿಗೆ ರಥಯಾತ್ರೆ ಸಾಗಿತು. ಸಂಚಾಲಕ ಮಂಜುನಾಥ್ ಬ್ಯಾಣದ ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾಮೆಂಟ್‌ಗಳಿಲ್ಲ