Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರದಲ್ಲಿ ಪ್ರಪ್ರಥಮ ಬಾರಿಗೆ ನಡೆಯಿತು ರಾಜ್ಯಮಟ್ಟದ ಕರಾಟೆ ಸ್ಪರ್ಧೆ

ಹೊಸನಗರ : ಪಟ್ಟಣದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ದಿವಂಗತ ಹೊಸಂಗಡಿ ಲಕ್ಷ್ಮಣ ಶೆಟ್ಟಿ ಸ್ಮರಣಾರ್ಥ ರಾಜ್ಯಮಟ್ಟದ ಕರಾಟೆ ಸ್ಪರ್ಧೆ ಹಾಗೂ ಹನ್ನೊಂದನೇ ವರ್ಷದ ವಾರ್ಷಿಕೋತ್ಸವ ಇಲ್ಲಿನ ಈಡಿಗರ ಸಭಾಭವನದಲ್ಲಿ ಅದ್ದೂರಿಯಾಗಿ ನೆರವೇರಿತು.

ಐ ಕೈ ಸ್ಕೂಲ್ ಆಫ್ ಮಾರ್ಷಲ್ ಆರ್ಟ್ಸ್ ಸಂಸ್ಥಾಪಕ ಅಧ್ಯಕ್ಷ ಶಿಹಾನ್ ಸಿ.ಎ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಹೊಸನಗರ ಜೆಎಂಎಫ್ ಸಿ ನ್ಯಾಯಾಲಯದ ಪ್ರಧಾನ ವ್ಯವಹಾರ ನ್ಯಾಯಾಧೀಶ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿಯಾದ ಕೆ. ರವಿಕುಮಾರ್ ಅವರು ಉದ್ಘಾಟಿಸಿ ಮಾತನಾಡಿ, ಆತ್ಮರಕ್ಷಣೆಯ ಏಕೈಕ ಕಲೆ ಕರಾಟೆ. ಈ ಕಲೆಗೆ ಎಲ್ಲರ ಪ್ರೋತ್ಸಾಹ ಅಗತ್ಯ. ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ಕಲೆ ಅತ್ಯವಶ್ಯಕವಾಗಿದೆ. ಮಕ್ಕಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಗಮನ ನೀಡಬೇಕು. ಮೊಬೈಲ್ ಬಳಕೆಯಿಂದ ಸಾಧ್ಯವಾದಷ್ಟು ದೂರವಿದ್ದು, ನಿಜ ಅಗತ್ಯತೆಗೆ ಮಾತ್ರ ಮೊಬೈಲ್ ಬಳಸುವಂತೆ ಕರೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ಕೃಷ್ಣಮೂರ್ತಿ, ಪತ್ರಕರ್ತ ರವಿ ಬಿದನೂರು, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಾಲಚಂದ್ರ ರಾವ್, ತಾಲ್ಲೂಕು ಕರಾಟೆ ಶಿಕ್ಷಕರ ಸಂಘದ ಗೌರವಾಧ್ಯಕ್ಷರು, ವಕೀಲರಾದ ಜಿ. ಮೋಹನ ಶೆಟ್ಟಿ, ಚಂದ್ರಕಾಂತ ಭಟ್, ತಾಲ್ಲೂಕು ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಜೆ.ಕೆ. ರಾಘವೇಂದ್ರ, ಎನ್.ಎಸ್. ಹರೀಶ್ ಕುಮಾರ್, ಕೆ. ವಿ. ಲಕ್ಷ್ಮಣಾಚಾರ್ಯ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿ, ಜಪಾನಿನ ಯುದ್ಧ ಕಲೆಯಾದ ಕರಾಟೆ ಇದೀಗ ಇಡೀ ಪ್ರಪಂಚದಾದ್ಯಂತ ಹರಡಿದ್ದು, ಈ ಕಲೆ ಆತ್ಮರಕ್ಷಣೆಯ ಮೂಲ ಮಂತ್ರವನ್ನು ಹೊಂದಿದೆ. ಇಂದಿನ ದಿನಗಳಲ್ಲಿ ಈ ಕಲೆ ಹೆಣ್ಣುಮಕ್ಕಳಿಗೆ ಅತ್ಯವಶ್ಯಕವಾಗಿದೆ. ಈ ಕಲೆಯಿಂದ ಆತ್ಮ ರಕ್ಷಣೆ ಮಾತ್ರವಲ್ಲದೇ, ಅಂಗ ಸೌಷ್ಠವದೊಂದಿಗೆ ದೈಹಿಕ ಸದೃಢತೆಗೆ ಪೂರಕವಾಗಿದೆ. ಈ ಕಲೆಗೆ ಸರ್ಕಾರದ ಸೌಲಭ್ಯ ನೆರವು ಅಗತ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.

ರಾಜ್ಯ ಮಟ್ಟದ ಈ ಸ್ಪರ್ಧೆಗೆ ಕುಮಾರಿ ರಚನಾ ವೆಂಕಟೇಶ್, ಬಳ್ಳಾರಿಯ ಮಿತೇಶ್, ಹೊಸಂಗಡಿಯ ಮೇಘನಾ ಎಂ ನಾಯಕ್, ನಯನ ಎಂ ನಾಯಕ್, ಕಬಳೆಯ ಸಾಕ್ಷಿತ, ನಿಲ್ಸ್‌‌ಕಲ್ಲಿನ ಕೆ.ಟಿ. ಸಿಂಚನ, ನಗರದ ಆಕಾಶ್ ಎಸ್. ಶೆಟ್ಟಿ, ಸುತ್ತದ ಶಿವಾನಿ ಶಿವಕುಮಾರ್, ಶಿವಮೊಗ್ಗದ ಮುಹೀಬ್, ನವೀನ್, ಸಾಧಿಕ್, ಮಂಜುನಾಥ, ಸಾಗರದ ಅಲೋಕ, ಶಿಕಾರಿಪುರದ ಮಿಥುನ್, ತೀರ್ಥಹಳ್ಳಿಯ ಗಣೇಶ್ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.

ತೇಜಸ್ವಿನಿ ಜಿ. ಯಾದವ್ ಸ್ವಾಗತಿಸಿದರು. ಶ್ರೀಮತಿ ಅಶ್ವಿನಿ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು. ರಾಜ್ಯದೆಲ್ಲೆಡೆಯಿಂದ ಬಂದ ಏಳು ನೂರಕ್ಕೂ ಹೆಚ್ಚು ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌ಗಳಿಲ್ಲ