Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಸೈಕಲ್ಲಿನಲ್ಲಿ ದೇಶ ಸುತ್ತುತ್ತಿರುವ ಅಪ್ಪು ಅಭಿಮಾನಿ ತಮಿಳುನಾಡಿನ ಮುತ್ತು ಸೆಲ್ವಂಗೆ ರಿಪ್ಪನ್‌ಪೇಟೆಯಲ್ಲಿ ಪ್ರೀತಿಯ ಸ್ವಾಗತ ಸನ್ಮಾನ

ರಿಪ್ಪನ್‌ಪೇಟೆ: ಸೈಕಲ್‌ ಮೂಲಕ ದೇಶಪರ್ಯಟನೆ ಮಾಡುತ್ತಿರುವ ತಮಿಳುನಾಡು ಕೊಯಮತ್ತೂರಿನ ಮುತ್ತು ಸೆಲ್ವಂ ಅವರು ಇಂದು ರಿಪ್ಪನ್‌ಪೇಟೆಗೆ ಆಗಮಿಸಿದ್ದು, ರಿಪ್ಪನ್‌ಪೇಟೆಯ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಪಂಚಾಯ್ತಿಯ ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರು ಪ್ರೀತಿಯಿಂದ ಸ್ವಾಗತಿಸಿ, ಅವರ ಸಾಹಸ ಕಾರ್ಯವನ್ನು ಪ್ರೋತ್ಸಾಹಿಸಿದರು.

ಈಗಾಗಲೇ ಲಡಾಖ್‌, ಮಧ್ಯಪ್ರದೇಶ, ಜಮ್ಮು, ಕಾರ್ಗಿಲ್‌ ಸೇರಿ ಉತ್ತರ ಭಾರತವನ್ನು ಸೈಕಲ್ ಮೂಲಕವೇ ಸುತ್ತಿ ಗೋವಾ, ಹಾಸನ ಮೂಲಕ ಶಿವಮೊಗ್ಗ ಜಿಲ್ಲೆಗೆ ಆಗಮಿಸಿರುವ ಮುತ್ತು ಸೆಲ್ವಂ ಅವರನ್ನು ರಿಪ್ಪನ್‌ಪೇಟೆಯ ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಸದಸ್ಯರು ಪಟ್ಟಣದ ವಿನಾಯಕ ವೃತ್ತದಲ್ಲಿ ಸನ್ಮಾನಿಸಿದರು.

ರಿಪ್ಪನ್‌ಪೇಟೆ ಜನರ ಪ್ರೀತಿಯ ಗೌರವವನ್ನು ಸ್ವೀಕರಿಸಿ ಮಾತನಾಡಿದ ಮುತ್ತು ಸೆಲ್ವಂ, ’ನಾನು ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಸೈಕಲ್ ಮೂಲಕವೇ ಇಡೀ ದೇಶ ಸುತ್ತುವ ಗುರಿಯನ್ನು ಹೊಂದಿದ್ದೇನೆ. ಈಗಾಗಲೇ 700ಕ್ಕೂ ಹೆಚ್ಚು ದಿನದ ಪಯಣವನ್ನು ಪೂರ್ಣಗೊಳಿಸಿದ್ದೇನೆ. ಜೊತೆಗೆ ಈ ಯಾತ್ರೆಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ಮಾನವೀಯ ಮೌಲ್ಯವನ್ನು ಎಲ್ಲರಿಗೂ ಸಾರುವ ಉದ್ದೇಶವೂ ನನ್ನದಾಗಿದೆ’ ಎಂದು ಹೇಳಿದರು. ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿಯಾಗಿದ್ದನ್ನು ಖುಷಿಯಿಂದ ನೆನಪಿಸಿಕೊಂಡು, ಜೇಮ್ಸ್‌ ಚಿತ್ರದಲ್ಲಿ ಪುನೀತ್ ಅವರು ಬಳಸಿದ್ದ ಕನ್ನಡಕವನ್ನು ತನಗೆ ಉಡುಗೊರೆಯಾಗಿ ನೀಡಿ, ತನ್ನ ಸೈಕಲ್ ಯಾತ್ರೆಗೆ ಹಾರೈಸಿದ್ದನ್ನೂ ನೆನಪಿಸಿಕೊಳ್ಳುತ್ತಾರೆ.

ಆನಂತರ ರಿಪ್ಪನ್‌ಪೇಟೆ ಪೊಲೀಸ್‌ ಠಾಣೆ ಹಾಗೂ ಗ್ರಾಮ ಪಂಚಾಯ್ತಿಯಲ್ಲಿಯೂ ಮುತ್ತು ಸೆಲ್ವಂ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ತಮಿಳುನಾಡಿನ ಪೊಲ್ಲಾಚಿಯಿಂದ 2022ರ ಮೇ ತಿಂಗಳ 25ನೇ ತಾರೀಖಿನಂದು ಸೈಕಲ್ ಯಾತ್ರೆ ಆರಂಭಿಸಿರುವ ಮುತ್ತು ಸೆಲ್ವಂ ಅವರು, 2025ರ ಜೂನ್‌ 09ರೊಳಗೆ ಇಡೀ ದೇಶವನ್ನು ಸೈಕಲ್ ಮೂಲಕವೇ ಸುತ್ತುವ ಗುರಿಯನ್ನಿಟ್ಟುಕೊಂಡಿದ್ದು, ನದಿ ಜೋಡಣೆ ಸೇರಿದಂತೆ ವಿವಿಧ ಸಂದೇಶಗಳನ್ನು ಸಾರುವ ಉದ್ದೇಶವನ್ನು ಈ ಯಾತ್ರೆಯಲ್ಲಿ ಇರಿಸಿಕೊಂಡಿದ್ದಾರೆ. ತಮಿಳುನಾಡಿನವರಾದರೂ ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಮುತ್ತು ಸೆಲ್ವಂ ಅವರು, ಈಗ ಪುನೀತ್ ಅವರ ಮಾನವೀಯ ಮೌಲ್ಯಗಳನ್ನು ಎಲ್ಲೆಡೆ ಸಾರುತ್ತಿದ್ದು, ಪ್ರತೀ ತಾಲ್ಲೂಕಿನಲ್ಲಿ ಪುನೀತ್ ಅವರ ನೆನಪಿನಲ್ಲಿ ವಿವಿಧ ಗಿಡಗಳ ಬೀಜಗಳನ್ನೂ ವಿತರಿಸುತ್ತಿದ್ದಾರೆ. 8ನೇ ತರಗತಿಯಲ್ಲಿದ್ದಾಗಲೇ ಸೈಕಲ್ ಸವಾರಿಯ ಕನಸು ಕಂಡಿದ್ದ ಇವರು, ತಮ್ಮ ಸ್ನೇಹಿತರೊಬ್ಬರಿಗೆ ಪುನೀತ್ ರಾಜ್‌ಕುಮಾರ್ ಅವರು ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದನ್ನು ನೋಡಿದಂದಿನಿಂದ ಅವರ ಸರಳತೆ, ಜನರೆಡೆಗಿನ ಪ್ರೀತಿ ಕಂಡು ಅಭಿಮಾನಿಯಾಗಿದ್ದಾರಂತೆ. ಆದ್ದರಿಂದಲೇ ಅವರ ಅಗಲಿಕೆಯ ನಂತರ, ಪುನೀತ್ ಅವರ ಮಾನವೀಯ ಮೌಲ್ಯಗಳನ್ನು ಎಲ್ಲರಿಗೂ ತಲುಪಿಸಬೇಕು ಎಂದು ಸೈಕಲ್ ಸವಾರಿಯನ್ನು ಮುಂದುವರಿಸಿರುವ ಮುತ್ತು ಸೆಲ್ವಂ ಅವರು ಇಂದು ರಿಪ್ಪನ್‌ಪೇಟೆಗೆ ಆಗಮಿಸಿದ್ದು, ಅವರಿಗೆ ರಿಪ್ಪನ್‌ಪೇಟೆಯ ಗ್ರಾಮಸ್ಥರ ಪ್ರೀತಿಯ ಸ್ವಾಗತ ಸಿಕ್ಕಿತು.

ಎಂಬಿಎ ಓದಿರುವ ಮುತ್ತು ಸೆಲ್ವಂ ಅವರು, ಒಟ್ಟು 1111 ದಿವಸಗಳಲ್ಲಿ ಇಡಿ ವಿಶ್ವವನ್ನೇ ಸೈಕಲ್ಲಿನಲ್ಲಿ ಸುತ್ತುವ ಗುರಿ ಇಟ್ಟುಕೊಂಡಿದ್ದು, ಈವರೆಗಿನ ಪಯಣದಲ್ಲಿ ಈಗ ಬಳಸುತ್ತಿರುವ 3ನೇ ಸೈಕಲ್ ಇದಾಗಿದ್ದು, ಒಟ್ಟು 108 ಟೈರುಗಳನ್ನು ಈಗಾಗಲೇ ಬಳಕೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾದ ಧನಲಕ್ಷ್ಮಿ, ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್, ಪಿಡಿಓ ಮಧುಸೂದನ್‌, ಕಸ್ತೂರಿ ಕನ್ನಡ ಸಂಘದ ಫ್ಯಾನ್ಸಿ ರಮೇಶ್‌, ಟಿ.ಆರ್‌.ಕೃಷ್ಣಪ್ಪ, ಗ್ರಾಮ ಪಂಚಾಯ್ತಿ ಸದಸ್ಯ ಪ್ರಕಾಶ್ ಪಾಲೇಕರ್‌ ಸೇರಿದಂತೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಉಪಸ್ಥಿತರಿದ್ದು, ಮುತ್ತು ಸೆಲ್ವಂ ಅವರ ಸಾಹಸ ಯಾತ್ರೆಯನ್ನು ಪ್ರೋತ್ಸಾಹಿಸಿದರು.


ಕಾಮೆಂಟ್‌ಗಳಿಲ್ಲ