ಪುನೀತ್ ಅಭಿಮಾನಿ ಮುತ್ತು ಸೆಲ್ವಂ ಸೈಕಲ್ ಯಾತ್ರೆಗೆ ಹೊಸನಗರದಲ್ಲಿ ಅದ್ಧೂರಿ ಸ್ವಾಗತ
ಹೊಸನಗರ : ಕನ್ನಡದ ಹೆಸರಾಂತ ನಟ ಕರ್ನಾಟಕ ರತ್ನ, ದಿವಂಗತ ಡಾ.ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ತಮಿಳುನಾಡು ಕೊಯಮತ್ತೂರಿನ ಮುತ್ತು ಸೆಲ್ವಂ ಅವರ ವಿಶ್ವಶಾಂತಿ ಸಾರುವ ಉದ್ದೇಶದಿಂದ ಕೈಗೊಂಡಿರುವ ಸೈಕಲ್ ಯಾತ್ರೆಗೆ ಇಲ್ಲಿನ ಪಟ್ಟಣ ಪಂಚಾಯತಿ ಆಡಳಿತ ಅದ್ಧೂರಿ ಸ್ವಾಗತ ಕೋರಿತು.
ಬುಧವಾರ ಕಚೇರಿ ಮುಂಭಾಗದಲ್ಲಿ ಮುಖ್ಯಾಧಿಕಾರಿ ಮಾರುತಿ ಅವರು, ಸೆಲ್ವಂ ಅವರಿಗೆ ಹೂಗುಚ್ಛ ನೀಡುವ ಮೂಲಕ ಪಟ್ಟಣದ ನಾಗರೀಕರ ಪರವಾಗಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಮುತ್ತು ಸೆಲ್ವಂ ಅವರು, ಮೂಲತಃ ಕೊಯಮತ್ತೂರಿನವನಾದ ನಾನು ಈವರೆಗೂ ನಟ ಪುನೀತ್ ರಾಜಕುಮಾರ್ ಅವರ ಯಾವುದೇ ಚಲನಚಿತ್ರ ನೋಡಿಲ್ಲ. ಆದರೆ ಅವರು ತೆರೆಮರೆಯಲ್ಲಿ ಕೈಗೊಂಡಿದ್ದ ಅನೇಕ ಜನಪರ ಸಾಮಾಜಿಕ ಕಾರ್ಯಕ್ರಮಗಳು ಇಂದಿಗೂ ಜೀವಂತವಾಗಿದೆ. ಅನೇಕ ಶಾಲಾ-ಕಾಲೇಜುಗಳು, ಅನಾಥಾಶ್ರಮ ಸೇರಿದಂತೆ ವಿಕಲಚೇತನರಿಗೆ ದಾರಿದೀಪವಾಗಿದ್ದ ನಟ ಪುನೀತ್ ರಾಜಕುಮಾರ್ ಅವರ ಆದರ್ಶದ ಬದುಕು ಹಲವರಿಗೆ ಮಾದರಿ ಆಗುವಂತಹದ್ದು. ಈ ಹಿನ್ನೆಲೆಯಲ್ಲಿ ಅವರ ಜೀವನಾದರ್ಶ ಕುರಿತಂತೆ ಪ್ರಚುರ ಪಡಿಸುವ ಸದ್ದುದ್ದೇಶ ತಮ್ಮದಾಗಿದ್ದು, ಪುನೀತ್ ಅವರ ಪತ್ನಿ ಅಶ್ವಿನಿ ಅವರು ಕೊಡುಗೆಯಾಗಿ ನೀಡಿದ ಸೈಕಲ್‌ನಿಂದಲೇ ದೇಶ ಪರ್ಯಟನೆಗೆ ಮುಂದಾಗಿದ್ದೇನೆ ಎಂದು ತಿಳಿಸಿದರು.
ಒಂದು ಸಾವಿರದ ನೂರಾ ಹನ್ನೊಂದು ದಿನಗಳಲ್ಲಿ ಸೈಕಲ್ ಮೂಲಕ ದೇಶದ 34 ರಾಜ್ಯಗಳ 733 ಜಿಲ್ಲೆಗಳ ಒಟ್ಟು 34 ಸಾವಿರ ಕಿ.ಮೀ. ಪ್ರವಾಸ ಮಾಡುವ ಗುರಿ ಹೊಂದಲಾಗಿದ್ದು, 2021ರ ಡಿ. 21ರಂದು ಆರಂಭಗೊಂಡ ಈ ಪ್ರಯಾಣದಲ್ಲಿ ಈಗಾಗಲೇ ದೇಶದ 15 ರಾಜ್ಯಗಳ ಒಟ್ಟು 20,250 ಕಿ.ಮೀ ಪ್ರಯಾಣಿಸಿದ್ದು, ಉಳಿದ 14,200 ಕಿ.ಮೀ ಸೈಕಲ್ ಪಯಣವನ್ನು ಬರುವ 2025ರ ಜ. 5ರಂದು ಬೆಂಗಳೂರಿನ ಪುನೀತ್ ಸಮಾಧಿ ಎದುರು ಪೂರ್ಣಗೊಳಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.
ಅಲ್ಲದೇ, ಸೈಕಲ್ ಜಾಥದ ಜೊತೆ ಜೊತೆಯಲ್ಲಿ ಸಾರ್ವಜನಿಕರಿಗೆ ಪರಿಸರ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಂಡಿದ್ದು ಈವರೆಗೂ 2.16 ಲಕ್ಷ ಗಿಡಗಳನ್ನು ನೆಟ್ಟಿದ್ದು, ಮುಂದೆಯೂ ತಮ್ಮ ಪರಿಸರ ಅಭಿಯಾನ ಮುಂದುವರೆಸುವುದಾಗಿ ತಿಳಿಸಿದರು.
ಇದೇ ವೇಳೆ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯರು ಹಾಜರಿದ್ದು ಮುತ್ತು ಸೆಲ್ವಂ ಅವರ ಸೈಕಲ್ ಜಾಥಾ ಯಶಸ್ಸಿಗೆ ಮಾಲಾರ್ಪಣೆ ಮಾಡುವ ಮೂಲಕ ಶುಭಕೋರಿದರು. ಈ ಸಂದರ್ಭದಲ್ಲಿ ಪ.ಪಂ. ಸಿಬ್ಬಂದಿಗಳ ಜೊತೆಯಲ್ಲಿ ಹಲವು ನಾಗರೀಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ