Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಮಾದಕ ವಸ್ತುಗಳ ಸೇವನೆ, ಸಾಗಾಟ, ಸಂಗ್ರಹ ಶಿಕ್ಷಾರ್ಹ ಅಪರಾಧ - ಸಿಪಿಐ ಗುರಣ್ಣ ಎಸ್ ಹೆಬ್ಬಾಳ್

ಹೊಸನಗರ :  ಗಾಂಜಾ, ಚರಸ್, ಅಫೀಮು ಸೇರಿದಂತೆ ವಿವಿಧ ಬಗೆಯ ಮಾದಕ ದ್ರವ್ಯಗಳ ಸೇವನೆ, ಸಂಗ್ರಹ, ಸಾಗಣೆ ಹಾಗೂ ಮಾರಾಟ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಸಿಪಿಐ ಗುರಣ್ಣ ಎಸ್. ಹೆಬ್ಬಾಳ್ ತಿಳಿಸಿದರು.

ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಇಲ್ಲಿನ ಕೊಡಚಾದ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾದಕ ದ್ರವ್ಯಗಳ ನಿರಂತರ ಸೇವನೆ ವ್ಯಕ್ತಿಯಲ್ಲಿ ಆತಂಕ ಸೃಷ್ಟಿಸುತ್ತದೆ. ಇಡೀ ದೇಹ ಬೆವರುವುದು, ಮಾಂಸಖಂಡಗಳು ಸಡಿಲಗೊಳ್ಳುವುದು, ನಿದ್ರಾಹೀನ ಸ್ಥಿತಿ, ಏಕಾಂಗಿ ಓಡಾಟ ಮೊದಲಾದವು ಮಾದಕ ದ್ರವ್ಯಗಳ ಸೇವನೆಯ ಪರಿಣಾಮಗಳಾಗಿವೆ. ಮಾದಕ ದ್ರವ್ಯ ಸೇವನೆ ದೃಢಪಟ್ಟಲ್ಲಿ ವ್ಯಕ್ತಿಗೆ ನ್ಯಾಯಾಲಯವು ಕನಿಷ್ಟ ಆರು ತಿಂಗಳಿನಿಂದ ಇಪ್ಪತ್ತು ವರ್ಷಗಳವರಗೂ ಜೈಲು ಶಿಕ್ಷೆ, ಸೂಕ್ತ ದಂಡ ವಿಧಿಸುತ್ತದೆ ಎಂದು ವಿವರಿಸಿದ ಅವರು, ಮಾತ್ರೆ, ಚುಚ್ಚುಮದ್ದು, ವಾಸನೆ ಹಾಗೂ ದ್ರವರೂಪದಲ್ಲಿ ದೊರೆಯುವ ಹಲವು ಬಗೆಯ ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿ ಸಮಾಜಕಂಟಕನಾಗಿ ಗೌರವ ರಹಿತ ಬದುಕು ಸಾಗಿಸಬೇಕಾಗುತ್ತದೆ. ಕುಟುಂಬದ ಸ್ವಾಸ್ಥ್ಯ ಹಾಳುಗೆಡವುವ ಇಂತಹ ಅನಿಷ್ಟಗಳಿಂದ ಯುವ ಪೀಳಿಗೆ ದೂರವೇ ಉಳಿದು ಸಮಾಜಮುಖಿ ಚಿಂತನೆಯಲ್ಲಿ ಪಾಲ್ಗೊಳ್ಳುವ ಮೂಲಕ ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ವಿವಿಧ ರೀತಿಯ ಡ್ರಗ್ಸ್ ಸೇವನೆಯಿಂದಾಗಿ ವಿಶ್ವಾದ್ಯಂತ ಇಂದು 20 ಮಿಲಿಯನ್ ಜನರು ಮಾದಕ ದ್ರವ್ಯ ವ್ಯಸನಿಗಳಾಗಿದ್ದು, ಪ್ರತಿವರ್ಷ 5.70 ಲಕ್ಷ ಜನ ಇದರ ಸೇವನೆಯಿಂದ ಅಪಮೃತ್ಯುಗೆ ಒಳಗಾಗುತ್ತಿದ್ದಾರೆ. ಪ್ರತಿದಿನ ಅಂದಾಜು ಕನಿಷ್ಠ ಹತ್ತು ಮಂದಿ ಖಿನ್ನತೆಯಿಂದಾಗಿ ಆತ್ಮಹತ್ಯೆಗೆ ಶರಣಾಗುವ ಆತಂಕದ ಸ್ಥಿತಿ ದೇಶದಲ್ಲಿಂದು ನಿರ್ಮಾಣವಾಗಿದೆ.

-ಸಿಪಿಐ ಗುರಣ್ಣ ಎಸ್ ಹೆಬ್ಬಾಳ್

ಕಾಲೇಜಿನ ಪ್ರಭಾರಿ ಪ್ರಾಚಾರ್ಯೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಐಕ್ಯೂಎಸಿ ಸಂಚಾಲಕ ಸಿ.ಹೆಚ್.ರವಿ, ಎನ್‌ಎಸ್‌ಎಸ್ ಘಟಕ-1ರ ಕಾರ್ಯಕ್ರಮಾಧಿಕಾರಿ ಎನ್. ಪ್ರದೀಪ್ ಕುಮಾರ್, ಘಟಕ-2ರ ಅಧಿಕಾರಿ ಡಾ. ಎಂ.ಟಿ. ಬಸವರಾಜಪ್ಪ, ಪ್ರೊ. ಪ್ರಭಾಕರ್ ಉಪಸ್ಥಿತರಿದ್ದರು.

ಕು. ನಿಖಿತಾ ಹಾಗೂ ದೀಪಿಕಾ ಪ್ರಾರ್ಥಿಸಿ, ಅನ್ನಪೂರ್ಣ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ವರಿ ವಂದಿಸಿದರು.

ಕಾಮೆಂಟ್‌ಗಳಿಲ್ಲ