ಗಾಜನೂರಿನ ನವೋದಯ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಮಿಲನ ಹಾಗೂ ಬೆಳ್ಳಿ ಹಬ್ಬದ ಸಂಭ್ರಮ
ಶಿವಮೊಗ್ಗ : ಇಲ್ಲಿಗೆ ಸಮೀಪದ ಗಾಜನೂರಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಇತ್ತೀಚೆಗೆ ’ಹಳೆ ವಿದ್ಯಾರ್ಥಿಗಳ ಮಿಲನ’ ಹಾಗೂ ’13ನೇ ಬ್ಯಾಚ್ ವತಿಯಿಂದ ಬೆಳ್ಳಿಹಬ್ಬ ಸಂಭ್ರಮ’ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನವೋದಯ ಶಾಲೆಗಳು, ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು, ಅವರಲ್ಲಿ ಅಡಗಿದ್ದ ಸುಪ್ತ ಪ್ರತಿಭೆಯನ್ನು ಗುರುತಿಸಿ, ಒಳ್ಳೆಯ ಸಂಸ್ಕೃತಿ ಕಲಿಸಿ, ದೇಶಕ್ಕೆ ಉತ್ತಮ ನಾಗರೀಕರನ್ನಾಗಿಸುವ ಒಂದು ಅತ್ಯುತ್ತಮ ಸಂಸ್ಥೆಯಾಗಿ ಬೆಳೆದಿದೆ. ಈ ರೀತಿಯ ಕಾರ್ಯಕ್ರಮಗಳು ನವೋದಯ ಶಾಲೆಯ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಒಂದು ಸ್ಫೂರ್ತಿ. ಇದರಿಂದ ಮುಂದಿನ ದಿನಗಳಲ್ಲಿ ಯಾವ ಕ್ಷೇತ್ರ ಆರಿಸಿಕೊಂಡರೆ ತಮಗೆ ಉತ್ತಮ ಭವಿಷ್ಯ ಇದೆ ಎನ್ನುವ ಕಲ್ಪನೆ ವಿದ್ಯಾರ್ಥಿಗಳಿಗೆ ಬರಲಿದೆ ಎಂದರು.
ಅತಿಥಿಗಳಾದ ಕುವೆಂಪು ವಿ.ವಿ.ಯ ಎನ್. ಎಸ್. ಎಸ್ ಸಂಯೋಜನಾಧಿಕಾರಿ ಡಾ.ನಾಗರಾಜ್ ಪರಿಸರ ಅವರು ಮಕ್ಕಳನ್ನು ಉದ್ದೇಶಿಸಿ ’ಮಾನವ ಮತ್ತು ಪರಿಸರ ಒಂದು ಅವಿನಾಭಾವ ಸಂಬಂಧ ಹೊಂದಿದ್ದು, ಈ ನಿಟ್ಟಿನಲ್ಲಿ ಪರಿಸರವನ್ನು ಪೋಷಿಸಿ ಬೆಳಸುವ ಗುಣ ಮಕ್ಕಳಲ್ಲಿ ಬೆಳೆಯಬೇಕು. ಗಾಜನೂರಿನ ನವೋದಯ ಶಾಲೆ ಪ್ರಕೃತಿಯ ಮಡಿಲಲ್ಲಿದ್ದು, ಇಲ್ಲಿನ ಮಕ್ಕಳು ಗಿಡಗಳನ್ನು ಬೆಳೆಸಿ, ಪರಿಸರವನ್ನು ಸ್ವಚ್ಛವಾಗಿ ಇಟ್ಟು, ಮುಂದಿನ ಪೀಳಿಗೆಗೆ ಮಾದರಿ ಆಗಲಿ’ ಎಂದು ಹಾರೈಸಿದರು.
ಸಮಾರಂಭದಲ್ಲಿ ಗಾಜನೂರು ನವೋದಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ, ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ಬೆಳೆಯುವುದಕ್ಕೆ ಪ್ರೇರೇಪಿಸಿದ ಹಳೆ ಶಿಕ್ಷಕರ ವೃಂದವನ್ನು ಸನ್ಮಾನಿಸಲಾಯಿತು. ಜೊತೆಗೆ ಪ್ರಸಕ್ತ ಸಾಲಿನಲ್ಲಿ ನವೋದಯದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಶಿಕ್ಷಕ ಬಳಗ ಮತ್ತು ಇತರೆ ಸಹೋದ್ಯೋಗಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮಗಳು ನಡೆದವು.
ಈ ವರ್ಷದ ಬೆಳ್ಳಿ ಹಬ್ಬವನ್ನು ಆಚರಿಸಿದ 13ನೇ ಬ್ಯಾಚ್ ವಿದ್ಯಾರ್ಥಿಗಳು ತಮ್ಮ ಮೆಚ್ಚಿನ ಶಾಲೆಗೆ 1.10 ಲಕ್ಷ ರೂ ವ್ಯಯಿಸಿ ಎರಡು ಶಾಲಾ ಕೊಠಡಿಗಳಿಗೆ ಚಾವಣಿಯ ಒಳಮೈ (ಸೀಲಿಂಗ್) ನಿರ್ಮಾಣಕ್ಕೆ ಸಹಕರಿಸಿದರು. ಹಳೆ ವಿದ್ಯಾರ್ಥಿಗಳ ಈ ಕೊಡುಗೆಗೆ, ಪ್ರಾಂಶುಪಾಲರಾದ ಶ್ರೀಮತಿ ಜಿ ವಲ್ಲಿಯಮೈ ಅವರು 13ನೇ ಬ್ಯಾಚ್ ಕಾರ್ಯವನ್ನು ಶ್ಲಾಘಿಸಿದರು. ಜೊತೆಗೆ ಬೆಂಗಳೂರಿನ ಖ್ಯಾತ ಪಾದಗಳ ಆರೈಕೆಯ ಸಂಸ್ಥೆಯಾದ - ಆಪ್ಟ್ ಫುಟ್ ಸೆಕ್ಯೂರ್ (Apta Foot Secure) ವತಿಯಿಂದ ಉಚಿತವಾಗಿ ಪಾದಗಳ ತಪಾಸಣೆ, ಅದರ ನಿರ್ವಹಣೆ ಮತ್ತು ಸಮಗ್ರ ಆರೈಕೆ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಜವಾಹರ್ ನವೋದಯ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ರವಿ, ಉಪಪ್ರಾಂಶುಪಾಲರಾದ ಜಾನ್ಸನ್ ಪಿ ಜೇಮ್ಸ್ ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನವೋದಯ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ ವೃಂದದ ವಿ ಎಸ್ ಹೆಗಡೆ, ಮನೋಜ್ ಪವಾಸ್ಕರ್, ರಾಜಕುಮಾರ್ ಕಡೆಮನಿ, ಸುರೇಶ್, ಹಳೆ ವಿದ್ಯಾರ್ಥಿ ಸಂಘ ಮಿಲನದ ಅಧ್ಯಕ್ಷರಾದ ತಾರಾನಾಥ್, ಅರುಣ್ ಕುಮಾರ್, ಡಾ. ಸುನಿಲ್ ಕುಮಾರ್, ಎಂ ಪಿ ನವೀನ್ ಕುಮಾರ್, ಪ್ರಕಾಶ್ ಜೋಯ್ಸ್ ಮತ್ತು ಗಾಜನೂರು ನವೋದಯ ಶಾಲೆಯ ಹಳೆ ವಿದ್ಯಾರ್ಥಿಗಳು ಹಾಜರಿದ್ದರು. ಈ ಕಾರ್ಯಕ್ರಮ ಯಶಸ್ವಿಯಾಗಲು ಮಿಲನ ತಂಡದವರ ಜೊತೆಗೆ 13ನೇ ಬ್ಯಾಚಿನ ವಿದ್ಯಾರ್ಥಿಗಳಾದ ಪ್ರದೀಪ್, ವಿಶ್ವಚೇತನ, ಹನುಮಂತ, ಪ್ರಜ್ವಲ್ ಜೈನ್, ರಶ್ಮಿ ಬಿ.ಕೆ, ಗಣೇಶ್ ಹಾಗೂ ಶ್ವೇತ ಮತ್ತಿತರರು ಸತತವಾಗಿ 3 ತಿಂಗಳಿಂದ ತಯಾರಿ ನಡೆಸಿ, ಕಾರ್ಯಕ್ರಮ ಯಶಸ್ವಿಯಾಗಲು ಕಾರಣವಾಗಿ ಇತರೆ ವಿದ್ಯಾರ್ಥಿ ಸಮೂಹಕ್ಕೆ ಮಾದರಿಯಾದರು.
ಗಾಜನೂರು ಹಳೆ ನವೋದಯ ವಿದ್ಯಾರ್ಥಿಗಳ ಸಾಧನೆ :
ರಾಜ್ಯಾದ್ಯಂತ ಸೀಡ್‌ಬಾಲ್ (ಬೀಜದ ಉಂಡೆ) ಮೂಲಕ ನಿಸರ್ಗವನ್ನು ಹಸಿರಾಗಿಸುವ ಯೋಜನೆಯೊಂದನ್ನು ಮಾಡಿ, ಈ ಕುರಿತು ಕಾರ್ಯಾಗಾರದ ಮೂಲಕ ಅರಿವು ಮೂಡಿಸಿ, ಪರಿಸರದ ಬಗ್ಗೆ ಕಾಳಜಿ ವಹಿಸಿದ್ದು ಇನ್ಫಿನಿಟಿ ಕಾರ್ತಿಕ್ - ಬ್ರೈನ್ ಸೈಂಟಿಸ್ಟ್.
ಡಾ.ಚಿನ್ನಬಾಬು ಸಿಇಓ - ಗ್ರೇಸ್ ಕ್ಯಾನ್ಸರ್ ಫೌಂಡೇಶನ್ ಅವರಿಂದ ಶಿವಮೊಗ್ಗ ನವೋದಯಲ್ಲಿ, ಕಳೆದ ವರ್ಷ ಗ್ರಾಮೀಣ ಭಾಗದವರಿಗೆ ಉಚಿತವಾಗಿ ಕ್ಯಾನ್ಸರ್ ತಪಾಸಣೆ ಮತ್ತು ವೈದ್ಯಕೀಯ ಸೌಲಭ್ಯ ನೀಡಲಾಯಿತು.
ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರನ್ನು ಒಂದು ಚೌಕಟ್ಟಿನಲ್ಲಿ ತರುವ ಆಶಯದೊಂದಿಗೆ ಜೆಎನ್‌ವಿ ಶಿವಮೊಗ್ಗದಲ್ಲಿ “ಕವಿ ವನ” ನಿರ್ಮಿಸಲಾಗಿದೆ. ಇಲ್ಲಿ ಕನ್ನಡದ 8 ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳ ಮೂರ್ತಿ ನಿರ್ಮಿಸಿ, ಅವರ ನುಡಿಗಳನ್ನು ಕೆತ್ತಲಾಗಿದೆ. ನವೋದಯ ದಿನಗಳ ನಂತರ ಹೊರಬಂದ ಹಲವು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಶೈಕ್ಷಣಿಕ ಬೆಂಬಲವಾಗಿ ಪ್ರತಿವರ್ಷ 2ರಿಂದ 3ಲಕ್ಷ ಅನುದಾನ ಮೀಸಲಿಟ್ಟು, ಅವರ ಜೀವನವನ್ನು ನಿರೂಪಿಸುವ ಕಾರ್ಯ ಮಾಡುತ್ತಿದ್ದಾರೆ ಈ ಶಾಲೆಯ ಆಲೂಮ್ನಿ ಬಳಗ..
ನವೋದಯ ಮತ್ತು ಮೊರಾರ್ಜಿ ಪರೀಕ್ಷೆಗಳಿಗೆ, ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮವಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಕಳೆದ ಮೂರು ವರ್ಷಗಳಿಂದ ಉಚಿತ ತರಬೇತಿ ಶಿಬಿರ (4 ತಿಂಗಳು) ನಡೆಸಲಾಗುತ್ತಿದೆ. ಈ ಶಿಬಿರದಲ್ಲಿ 149 ವಿದ್ಯಾರ್ಥಿಗಳು ಭಾಗವಹಿಸಿದ್ದು, ಇಲ್ಲಿಯವರೆಗೆ 4 ವಿದ್ಯಾರ್ಥಿಗಳು ನವೋದಯ ಮತ್ತು 26 ಮಕ್ಕಳು ಮೊರಾರ್ಜಿ ಶಾಲೆಗಳಿಗೆ ತೇರ್ಗಡೆ ಆಗಿದ್ದು, 76.4 ಲಕ್ಷ ರೂಪಾಯಿ ಮೊತ್ತದ ಶೈಕ್ಷಣಿಕ ಉಪಯೋಗ ಪಡೆದಿದ್ದಾರೆ. ಈ ಶಿಬಿರ ಶಿವಮೊಗ್ಗ ಜಿಲ್ಲೆಯ ಹುಂಚ, ನೆಲವಾಗಿಲು ಮತ್ತು ಕೋಣಂದೂರಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಕಾಮೆಂಟ್‌ಗಳಿಲ್ಲ