Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಡಿಎಸ್‌ಎಸ್ ಧರಣಿ-ಶೀಘ್ರ ಕ್ರಮಕ್ಕೆ ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಮನವಿ

ಹೊಸನಗರ : ಜನಪ್ರತಿನಿಧಿಗಳು ಹಾಗೂ ಇಲಾಖಾಧಿಕಾರಿಗಳ ನಿರ್ಲಕ್ಷ್ಯದಿಂದ ತಲೆದೋರಿರುವ ತಾಲ್ಲೂಕಿನ ಹಲವು ಜ್ವಲಂತ ಸಮಸ್ಯೆಗಳಿಗೆ ಶೀಘ್ರವಾಗಿ ಸೂಕ್ತ ಪರಿಹಾರ ಕಂಡುಕೊಳ್ಳುವ ಮೂಲಕ ತಾಲ್ಲೂಕಿನ ಸಮಗ್ರ ಅಭಿವೃದ್ದಿಗೆ ಸಹಕರಿಸಬೇಕೆಂದು ಆಗ್ರಹಿಸಿ ತಾಲ್ಲೂಕು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ಇಂದು ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಈ ವೇಳೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಸಂಚಾಲಕ ಕೆ.ವಿ. ನಾಗರಾಜ್ ಅರಳಸುರಳಿ, ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸೂತಿ ಮಹಿಳಾ ವೈದ್ಯರ ಕೊರತೆಯಿದೆ. ಬಡವರ ಅನುಕೂಲಕ್ಕಾಗಿ ಸೂಕ್ತ ಎಕ್ಸ್‌ರೇ ಹಾಗೂ ಸ್ಕ್ಯಾನಿಂಗ್ ಯಂತ್ರ ಅಳವಡಿಸಬೇಕಿದೆ. ರಕ್ತನಿಧಿಯ ತುರ್ತು ಅವಶ್ಯಕತೆ ಇದೆ. ಜನೌಷಧಿ ಕೇಂದ್ರಕ್ಕೆ ಮರುಚಾಲನೆ ನೀಡಬೇಕು. ತಾಲ್ಲೂಕಿನ ಜೆಜೆಎಂ ಯೋಜನೆಯ ಕುಡಿಯುವ ನೀರಿನ ಕಾಮಗಾರಿ ಕಳಪೆ ಗುಣಮಟ್ಟ ಹೊಂದಿದ್ದು, ಈ ಕುರಿತು ಸೂಕ್ತ ತನಿಖೆ ಆಗಬೇಕು. ತೋಟಗಾರಿಕೆ ಇಲಾಖೆಯ ಹಿಂದಿನ ಗಂಗನಕೊಪ್ಪದವರೆಗೆ ಎಸ್‌ಸಿ/ಎಸ್‌ಟಿ ಅನುದಾನದ ಕಾಂಕ್ರೀಟ್ ರಸ್ತೆ ನಿರ್ಮಿಸಬೇಕು. ಖಾಸಗಿ ಕಟ್ಟಡದಲ್ಲಿರುವ ಉಪನೋಂದಣಾಧಿಕಾರಿ, ಅಬಕಾರಿ ಹಾಗೂ ಸಿಡಿಪಿಓ ಕಚೇರಿಗಳನ್ನು ಸರ್ಕಾರಿ ಕಟ್ಟಡಗಳಿಗೆ ವರ್ಗಾಯಿಸಬೇಕು. ಎಪಿಎಂಸಿ ಹಿಂಭಾಗದ ಕೈಗಾರಿಕಾ ನಿಗಮಕ್ಕೆ ಸೇರಿದ ಜಾಗವನ್ನು ಎಸ್‌ಸಿ/ಎಸ್‌ಟಿ ಜನಾಂಗಕ್ಕೆ ಹಾಗೂ ಮೂಲ ಗುಡಿಗಾರಿಕೆ, ಕುಶಲಕರ್ಮಿಗಳಿಗೆ ನೀಡದೆ ಅವೈಜ್ಞಾನಿಕವಾಗಿ ಹಂಚಿಕೆ ಮಾಡಲಾಗಿದ್ದು, ತತಕ್ಷಣ ಅಕ್ರಮ ನಿವೇಶನ ಮಂಜೂರಾತಿ ವಜಾಗೊಳಿಸಿ ಮರುಹಂಚಿಕೆಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ತಾಲ್ಲೂಕು ಸಂಚಾಲಕ ಜಯನಗರ ಗುರುಪ್ರಸಾದ್ ಮಾತನಾಡಿ, ಕೈಗಾರಿಕಾ ಚುಟುವಟಿಕೆಗಳಿಗೆ  ಮೀಸಲಿಟ್ಟಿರುವ ಈ ಪ್ರದೇಶದಲ್ಲಿ ಖಾಸಗಿ ಕಂಪನಿಗೆ ಸೇರಿದ ಒಂದು ಟೆಲಿಪೋನ್ ಟವರ್ ತಲೆ ಎತ್ತಿದೆ. ಈ ಸಂಗತಿಯನ್ನು ಜಿಲ್ಲಾಡಳಿತ ಸೂಕ್ತವಾಗಿ ಪರಿಗಣಿಸಬೇಕು ಹಾಗೂ ಸಂಬಂದಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ಕೋರಿದರು.

ತಾಲ್ಲೂಕಿನ ವಸವೆ ಗ್ರಾಮದ ಸ.ನಂ. 86ರ 1.38 ಎಕರೆ ದಲಿತ ಮಹಿಳೆಯ ಜಮೀನನ್ನು ಪಟ್ಟಣದ ಪ್ರತಿಷ್ಠಿತ ಕುಟುಂಬವೊಂದು ಅಕ್ರಮ ದಾಖಲೆ ಸೃಷ್ಟಿಸಿ ದಲಿತ ಮಹಿಳೆಗೆ ಅನ್ಯಾಯ ಎಸಗಲು ಮುಂದಾಗಿದೆ. ಕೂಡಲೇ ಸ್ಥಳ ಪರಿಶೀಲಿಸಿ ನೊಂದ ದಲಿತ ಮಹಿಳೆಗೆ ಸೂಕ್ತ ನ್ಯಾಯ ಕೊಡಿಸಬೇಕು. ಪಟ್ಟಣದ ಕುಡಿಯುವ ನೀರಿಗೆ ಶಾಶ್ವತ ಪರಿಹಾರ, ಅಂಬೇಡ್ಕರ್ ವೃತ್ತದಲ್ಲಿ ಅವರ ಪುತ್ಥಳಿ ನಿರ್ಮಾಣ, ಪಟ್ಟಣ ಪಂಚಾಯತಿಯ ಗುತ್ತಿಗೆ ನೌಕರರನ್ನು ಖಾಯಂಗೊಳಿಸುವುದು, ಕಳೆದ ಹಲವು ವರ್ಷಗಳಿಂದ ಜಾಲಿ ಇರುವ ಬಸ್ ನಿಲ್ದಾಣದ ಪಂಚಾಯತಿ ಸಂಕೀರ್ಣಕ್ಕೆ ಮರು ಟೆಂಡರ್ ಆಹ್ವಾನಕ್ಕೆ ಸೂಕ್ತಕ್ರಮ ವಹಿಸುವಂತೆ ಸರ್ಕಾರವನ್ನು ಒತ್ತಾಯಿಸಿ ತಹಶೀಲ್ದಾರ್ ರಶ್ಮಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಧರಣಿಯಲ್ಲಿ ತಾಲ್ಲೂಕು ಸಂಚಾಲಕ ಬಿ.ಎಂ. ಪ್ರಕಾಶ್, ಸಂಘಟನಾ ಸಂಚಾಲಕ ಎ. ಹರೀಶ್, ಗಂಗನಕೊಪ್ಪ ಅಣ್ಣಪ್ಪ, ಮಂಜುನಾಥ, ಸುಬ್ರಹ್ಮಣ್ಯ, ನಾರಾಯಣ, ರಾಮ-ಲಕ್ಷ್ಮಣ, ಯೋಗಾನಂದ್, ಗಂಗನಕೊಪ್ಪ ಚಿಕ್ಕ, ಕಿರಣ್, ಶ್ರೀ ಕುಮಾರ್, ನಾಗರಾಜ, ಮಂಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ