ಮಾವಿನಕೊಪ್ಪ ಗಂಗಾಧರೇಶ್ವರ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ವಲಯ ಮಟ್ಟದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ
ಹೊಸನಗರ : ಮಾವಿನಕೊಪ್ಪ ಗಂಗಾಧರೇಶ್ವರ ದೇವಸ್ಥಾನದಲ್ಲಿ ಇಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ವಲಯ ಮಟ್ಟದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಮೂಲೆಗದ್ದೆ ಅಭಿನವ ಚನ್ನಬಸವ ಮಹಾಸ್ವಾಮಿಗಳು ಈ ಸಂದರ್ಭದಲ್ಲಿ ಆಶೀರ್ವಚನ ನೀಡಿ, ಪ್ರಾಣಿಸಂಕುಲದಲ್ಲೇ ಮನುಷ್ಯ ಅತ್ಯಂತ ವಿಷಕಾರಿ ಪ್ರಾಣಿ. ತಮ್ಮ ಸ್ವಾರ್ಥಕ್ಕಾಗಿ ಬದುಕುವುದು, ಸಂಪಾದನೆ ಮಾಡಿ ಕೂಡಿಡುವುದು, ಆಸೆ ಆಮಿಷಗಳಿಗೆ ಒಳಗಾಗಿ ದೇವರನ್ನು ಮರೆಯುವ ಮಾನವ, ಧರ್ಮ ಜಾಗೃತಿಗೆ ತನ್ನನ್ನು ಒಡ್ಡಿಕೊಳ್ಳಬೇಕು. ಭಾರತ ಖಂಡದಲ್ಲಿ ಜನ್ಮ ತಾಳಿದ ನಾವೇ ಧನ್ಯರು. ಧರ್ಮಸ್ಥಳದ ಪೂಜ್ಯರು ನಡೆಸುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳು ಅರ್ಥಪೂರ್ಣ ಹಾಗೂ ಅಭಿವೃದ್ಧಿಯ ಪರವಾಗಿದೆ. ಧರ್ಮದ ಅವನತಿ ಆದಾಗ ಆ ಪ್ರದೇಶ ಸಂಪೂರ್ಣ ನಾಶವಾಗುತ್ತದೆ. ದೇವರ ಕೃಪೆಗೆ ಈ ಮೂಲಕವಾದರೂ ಪಾತ್ರರಾಗಿ ಎಂದು ಸೇರಿದ್ದ ಜನರನ್ನು ಆಶೀರ್ವದಿಸಿದರು.
ಧಾರ್ಮಿಕ ಸಭಾ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ನಿವೃತ್ತ ಉಪನ್ಯಾಸಕರಾದ ಶಾಂತಾರಾಮ ಪ್ರಭು ಅವರು ಮಾತನಾಡಿ, ಬದಲಾದ ಆಧುನಿಕ ಪ್ರಪಂಚದಲ್ಲಿ ನಾವು ನಮ್ಮ ಸನಾತನ ಸಂಸ್ಕೃತಿಯನ್ನು ಬಿಟ್ಟು ಕಣ್ಣು ಮುಚ್ಚಿಕೊಂಡು ವಿದೇಶಿಗರ ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳುತ್ತಿದ್ದೇವೆ. ಪುರಾಣಗಳಿಂದಲೂ ನಮ್ಮ ಋಷಿ ಮುನಿಗಳು ಜ್ಞಾನವಂತರು, ತಪಸ್ವಿಗಳು, ಮೇಧಾವಿಗಳು ಆಗಿದ್ದರು. ಅವರು ಸಂಸ್ಕಾರ ಬೆಳೆಸಿಕೊಂಡು ತನ್ನ ಮೂಲ ಬೇರನ್ನು ಮರೆತಿರಲಿಲ್ಲ. ಆದ್ದರಿಂದ ದೇವರ ಆರಾಧನೆ, ಗುರು ಹಿರಿಯರ ಮಾರ್ಗದರ್ಶನ ಹಾಗೂ ಸನ್ಮಾರ್ಗದಲ್ಲಿ ನಡೆಯುವುದನ್ನು ನಾವೆಲ್ಲರೂ ಕಲಿಯಬೇಕು ಎಂದು ಹೇಳಿದರು.
ಜನಜಾಗೃತಿ ವೇದಿಕೆ ಸದಸ್ಯರಾದ ದೇವಾನಂದರವರು ಮಾತನಾಡಿ, ನಮ್ಮ ಹೊಸನಗರ ತಾಲ್ಲೂಕಿನ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಂಬಾ ಉತ್ತಮವಾದದ್ದು. ಸದುದ್ದೇಶ ಇಟ್ಟುಕೊಂಡು ಸಂಘವನ್ನು ನಡೆಸಿ ಎಂದು ತಿಳಿಸಿದರು.
ಪೂಜಾ ಸಮಿತಿ ಅಧ್ಯಕ್ಷರಾದ ಎಂ. ಪ್ರಭು, ಗಂಗಾಧರೇಶ್ವರ ದೇವಸ್ಥಾನದ ಉಪಾಧ್ಯಕ್ಷರಾದ ಗಣೇಶ್, ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಣೇಶ್, ಹೊಸನಗರ ತಾಲ್ಲೂಕಿನ ಯೋಜನಾಧಿಕಾರಿ ಶ್ರೀಮತಿ ಬೇಬಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹೊಸನಗರ ವಲಯದ ಮೇಲ್ವಿಚಾರಕ ಸುಭಾಷ್ ವಲಯದ ಸಾಧನೆ ವರದಿ ಮಂಡಿಸಿದರು.ಶಶಿಕಲಾ ಸ್ವಾಗತಿಸಿದರು. ವೇದಾಬಾಯಿ ನಿರೂಪಿಸಿದರು.
ಪುರೋಹಿತರಾದ ಪುರುಷೋತ್ತಮ ಅವರು ಸುಮಾರು 60 ಜೋಡಿ ವ್ರತಧಾರಿಗಳ ಮೂಲಕ ಪೂಜೆ ನೆರವೇರಿಸಿದರು. ವಲಯದ ಎಲ್ಲಾ ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಹಕಾರ ನೀಡಿದರು.
ಕಾಮೆಂಟ್‌ಗಳಿಲ್ಲ