Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಕೊಳಗಿ ಗ್ರಾಮದ ಶ್ರೀ ಈಶ್ವರ, ಶ್ರೀ ಬಸವಣ್ಣ ದೇವಸ್ಥಾನದಲ್ಲಿ ವಿಜೃಂಭಣೆಯ ಲಕ್ಷ ದೀಪೋತ್ಸವ - ಮಳಲಿ ಮಠದ ಶ್ರೀ ಡಾ॥ ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳಿಂದ ಆಶೀರ್ವಚನ

ಹೊಸನಗರ : ಸೊನಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಳಗಿ ಗ್ರಾಮದ ಶ್ರೀ ಈಶ್ವರ, ಶ್ರೀ ಬಸವಣ್ಣ ದೇವಸ್ಥಾನದ ಆವರಣದಲ್ಲಿ ಬೆಂಗಳೂರಿನ ಸುಧಾ, ಮಂಜುನಾಥ ಶೆಟ್ಟಿ ಕುಟುಂಬ ವರ್ಗವು ಸಂಕಲ್ಪದೊಂದಿಗೆ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವವು ವಿಜೃಂಭಣೆಯಿಂದ ಜರುಗಿತು.

ಮಳಲಿ ಮಠದ ಶ್ರೀ ಡಾ॥ ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿ, ಯೋಚಿಸಿ ನೋಡಿದರೆ ಎಲ್ಲರೂ ನಮ್ಮವರೇ, ಚಿಂತಿಸಿ ನೋಡಿದರೆ ಯಾರು ನಮ್ಮವರಲ್ಲ ಎಂದು ಬದುಕಿನ ಬಗ್ಗೆ ಮಾರ್ಮಿಕ ನುಡಿಗಳನ್ನಾಡಿದರು.

’ಬಂಧುಗಳು ಆದವರು ಬಂದುಂಡು ಹೋಗುವರು, ಬಂಧನವ ಕಳೆಯಲರಿಯರು, ಗುರುವಿಂದ ಬಂಧುಗಳು ಉಂಟೆ ಸರ್ವಜ್ಞ’ ಎಂಬ ಮಾತು ಸತ್ಯವಾದುದು. ಆದ್ದರಿಂದ ಜೀವನದಲ್ಲಿ ಒಂದು ಗುರಿ, ಓರ್ವ ಗುರುವನ್ನು ಪ್ರತಿಯೊಬ್ಬರು ಹೊಂದಿರಬೇಕು. ಕಾರಣ ನಾವು ಸುಖವಾಗಿದ್ದಾಗ ಎಲ್ಲರೂ ನಮ್ಮವರಾಗಿರುತ್ತಾರೆ. ಶಕ್ತನಾದರೆ ನೆಂಟರೆಲ್ಲರೂ ಹಿತರು. ಅಶಕ್ತನಾದರೆ ನೆಂಟರೆಲ್ಲರೂ ವೈರಿಗಳಾಗುತ್ತಾರೆ. ಆದರೆ, ಸರ್ವಕಾಲದಲ್ಲೂ ಎಲ್ಲರಿಗೂ ಹಿತ ಬಯಸುವ ಶ್ರೀಗುರುವು, ಧರ್ಮ ಪರಂಪರೆ ಉಳಿಸಿ ಬೆಳೆಸಿಕೊಂಡು ಬರಬೇಕೆಂದು ತಿಳಿಸುವುದರ ಮೂಲಕ, ತಂದೆ-ತಾಯಿ, ಗುರು-ಹಿರಿಯರಿಗೆ ಗೌರವಿಸಿ ಜೀವನ ಸಾಗಿಸಬೇಕೆಂದು ಶ್ರೀಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.

ಬೆಳಿಗ್ಗೆ ಶ್ರೀ ಈಶ್ವರ, ಶ್ರೀ ಬಸವಣ್ಣ ದೇವರಿಗೆ ರುದ್ರಾಭಿಷೇಕ, ಮಹಾಮಂಗಳಾರತಿ ನೆರವೇರಿದ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ತಮ್ಮ ಬಹುದಿನದ ಇಷ್ಟಾರ್ಥಗಳು ನೆರವೇರಿರುವ ಕಾರಣಕ್ಕೆ ಬೆಂಗಳೂರಿನ ಸುಧಾ-ಮಂಜುನಾಥ ಶೆಟ್ಟಿ ಅವರ ಸಂಕಲ್ಪದಂತೆ ರಾತ್ರಿ ಶ್ರೀಸ್ವಾಮಿಗೆ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರುಗಿತು. ಬಳಿಕ ಶಂಕರ ಬಾಳ್ಕುದ್ರು ಸಾರಥ್ಯದಲ್ಲಿ  ಬೆಂಗಳೂರಿನ ಯಕ್ಷ ಸಂಭ್ರಮ(ರಿ) ಹುಳಿಮಾವು ಇವರಿಂದ ’ಪಂಜುರ್ಲ” ಎಂಬ ಯಕ್ಷಗಾನ ಪ್ರಸಂಗ ನಡೆಯಿತು. ಸುತ್ತಮುತ್ತಲ ನೂರಾರು ಗ್ರಾಮಸ್ಥರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಜಾತ್ಯಾತೀತವಾಗಿ ಭಾಗವಹಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಪ್ರಮುಖರಾದ ಸಂಕಯ್ಯ ಶೆಟ್ರು, ಶೈಲಾ ಮಂಜುನಾಥ ಶೆಟ್ರು, ಸುಶೀಲ ಸುರೇಶ್ ಶೆಟ್ರು, ಗ್ರಾಮ ಪಂಚಾಯತಿ ಸದಸ್ಯರಾದ ಸತೀಶ್, ಸುಬ್ರಹ್ಮಣ್ಯ ಸ್ವಾಮಿರಾವ್, ಮಕ್ಕಳಾದ ಐಶ್ವರ್ಯ, ರೇಷ್ಮ, ರಶ್ಮಿ ಸೇರಿದಂತೆ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು. ಇದೇ ವೇಳೆ ಚಿತ್ತಾಕರ್ಷಕ ಬಾಣ ಬಿರುಸು ಪಟಾಕಿ ಸಿಡಿಮದ್ದುಗಳ ಪ್ರದರ್ಶನ ನಡೆಯಿತು.

ಸಮಾರಂಭದಲ್ಲಿ ಕು॥ ಶಾಮಲ ಪ್ರಾರ್ಥಿಸಿದರು. ಕೊಳಗಿ ಭೋಜರಾಜ ಶೆಟ್ರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೆ.ಎಲ್. ಗಂಗಾಧರಗೌಡ ನಿರೂಪಿಸಿ, ಸ್ವಾಗತಿಸಿದರು. ನಂತರ ಸುಮಿತ್ರ, ಫಾತಿಮಾ ಅವರಿಂದ ಭಕ್ತಿಸುಧೆ ಗಾಯನ ನಡೆಯಿತು.

ಕಾಮೆಂಟ್‌ಗಳಿಲ್ಲ