ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ - ಪೋಷಕರಿಗೆ ಯಾವುದೇ ಆತಂಕ ಬೇಡ ಎಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ
ಬೆಂಗಳೂರು : ಮಕ್ಕಳು ಮತ್ತು ಪೋಷಕರು ಯಾವುದೇ ರೀತಿಯಲ್ಲೂ ಭಯಗೊಳ್ಳುವುದು ಬೇಡ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಮತ್ತು ಈ ಕುರಿತು ಗೃಹ ಇಲಾಖೆಯವರೊಂದಿಗೆ ಮಾತನಾಡಿದ್ದೇನೆ. ಯಾರಿಗೂ ಯಾವುದೇ ರೀತಿಯ ಆತಂಕ ಬೇಡ’ ಎಂದು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಹೇಳಿದರು.
ಬೆಂಗಳೂರಿನ ಹದಿನೈದಕ್ಕೂ ಹೆಚ್ಚು ಸ್ಕೂಲುಗಳಿಗೆ ಬಾಂಬ್ ಬೆದರಿಕೆ ಇ ಮೇಲ್ ಬಂದಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ’ಮಕ್ಕಳ ವಿಷಯದಲ್ಲಿ ಹೀಗಾದಾಗ ಪೋಷಕರು ಆತಂಕ ಪಡುವುದು ಸಹಜ. ಆತಂಕ ಪಡುವುದು ಬೇಡ. ವಿಶ್ವಾಸ ಇಟ್ಟುಕೊಳ್ಳಿ. ಮಕ್ಕಳ ರಕ್ಷಣೆಗೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ’ ಎಂದು ಪೋಷಕರಲ್ಲಿ ಭರವಸೆ ತುಂಬಿದರು. ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಪೊಲೀಸ್ ಇಲಾಖೆ ತಿಳಿಸಿದೆ ಎಂದ ಅವರು, ಯಾವುದೇ ಫೋನ್ ಕರೆ ಬಂದಿಲ್ಲ. ಇ ಮೇಲ್ ಮೂಲಕ ಬೆದರಿಕೆ ಬಂದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನನ್ನ ಇಲಾಖೆಯಿಂದ ಏನೆಲ್ಲ ಮಾಡಬಹುದೋ ಅದೆಲ್ಲವನ್ನೂ ಸಂಪೂರ್ಣವಾಗಿ ಮಾಡುತ್ತೇನೆ, ಹಿರಿಯ ಅಧಿಕಾರಿಗಳೂ ಈ ಬಗ್ಗೆ ಕ್ರಮ ವಹಿಸುತ್ತಿದ್ದಾರೆ ಎಂದ ಸಚಿವರು, ಉಪಮುಖ್ಯಮಂತ್ರಿಗಳು ಬೆಂಗಳೂರು ನಗರ ಉಸ್ತುವಾರಿ ಸಚಿವರಾಗಿದ್ದು ಅವರು ಕೂಡಾ ಈ ಬಗ್ಗೆ ಅವಶ್ಯಕ ಕ್ರಮ ಕೈಗೊಂಡಿದ್ದಾರೆ ಎಂದರು.
ಬೆದರಿಕೆಯ ಇ ಮೇಲ್ ಮಾಡಿದವರು ಯಾರು ಎನ್ನುವ ಸುಳಿವು ಸಿಕ್ಕಿಲ್ಲ. ಪೊಲೀಸರು ಅವರನ್ನು ಹುಡುಕುವ ಕೆಲಸ ಮಾಡುತ್ತಿದ್ದು, ತನಿಖೆಯ ನಂತರ ಸತ್ಯ ಹೊರಬರಲಿದೆ ಎಂದರು.
ಕಾಮೆಂಟ್‌ಗಳಿಲ್ಲ