Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

SPECIAL REPORT - ಕೋಡೂರು ಉಪವಲಯ ಸಿಡಿಹಳ್ಳದಲ್ಲಿ ಸಾಗುವಾನಿ ಮರಗಳ್ಳರ ರಕ್ಷಣೆಗೆ ನಿಂತಿತೇ ಅರಣ್ಯ ಇಲಾಖೆ?!

ಕೋಡೂರು : ಅರಣ್ಯ ಇಲಾಖೆಯೇ ನಿರ್ಮಿಸಿದ್ದ ಸಾಗುವಾನಿ ನೆಡುತೋಪಿನಿಂದ ನಿರಂತರವಾಗಿ ಸಾಗುವಾನಿ ಮರಗಳ ಕಡಿತಲೆ ಹಾಗೂ ಕಳ್ಳ ಸಾಗಾಣಿಕೆ ನಡೆಯುತ್ತಿದ್ದರೂ, ಇದನ್ನು ಗಮನಿಸಿದ ಸಾರ್ವಜನಿಕರು ಇಲಾಖೆಗೆ ಸಾಕ್ಷ್ಯ ಸಹಿತ ದೂರು ನೀಡಿದರೂ ಅರಣ್ಯ ಇಲಾಖೆ ಈವರೆಗೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದರ ಅಸಲಿಯತ್ತೇನು?! ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮರಗಳ ಕಡಿತಲೆ ನಡೆದರೂ ಈ ಬಗ್ಗೆ ಯಾವುದೇ ರೀತಿಯಲ್ಲೂ ಗಮನ ಹರಿಸದ ಫಾರೆಸ್ಟರ್‌ ಹಾಗೂ ಸ್ಥಳೀಯ ಗಾರ್ಡುಗಳನ್ನೂ ಇನ್ನೂ ಯಾಕೆ ಅರಣ್ಯ ಇಲಾಖೆ ಏನೂ ನಡೆದಿಲ್ಲ ಎನ್ನುವಂತೆಯೇ ಡ್ಯೂಟಿ ಮಾಡಲು ಬಿಟ್ಟಿದೆ? ಇಂತಹ ಪ್ರಶ್ನೆ ನಿಮಗೂ ಹುಟ್ಟಬೇಕೆಂದರೆ ನೀವೊಮ್ಮೆ ಹೊಸನಗರ ತಾಲ್ಲೂಕು ಕೋಡೂರು ಉಪವಲಯದ ಸಿಡಿಹಳ್ಳ ಕಾರೇಮಟ್ಟಿ ಭಾಗದಲ್ಲಿ ನಡೆದಿರುವ ಸಾಗುವಾನಿ ಮರಗಳ ಕಡಿತಲೆ ಹಾಗೂ ಮರಗಳನ್ನು ಸಾಯಿಸಲು ನಡೆಸಿರುವ ಕುಕೃತ್ಯದ ಸಂಚನ್ನೊಮ್ಮೆ ನೋಡಬೇಕು.

ಕೋಡೂರು ಉಪವಲಯದ ಶಾಂತಪುರ, ಕರಿಗೆರಸು, ಸಿಡಿಹಳ್ಳ, ಕಾರೇಮಟ್ಟಿ ಸುತ್ತಮುತ್ತಲು ಅರಣ್ಯ ಇಲಾಖೆಯವರು ಸುಮಾರು 50 - 60ವರ್ಷಗಳ ಹಿಂದೆ ಸಾಗುವಾನಿ ನೆಡುತೋಪನ್ನು ನಿರ್ಮಿಸಿದ್ದರು. ಈ ಮೂಲಕ ಈ ಭಾಗದಲ್ಲಿ ಅರಣ್ಯ ಸಂಪತ್ತನ್ನು ಹೆಚ್ಚು ಮಾಡಬೇಕು ಎನ್ನುವುದು ಇಲಾಖೆಯ ಉದ್ದೇಶವಾಗಿತ್ತು. ಹೀಗೆ ನಿರ್ಮಿಸಿದ ನೆಡುತೋಪಿಗೆ ಇಲ್ಲಿ ಸಾಗುವಾನಿ ಸಸಿಗಳನ್ನು ನೆಟ್ಟಲ್ಲಿಂದ ಇಲ್ಲಿಯವರೆಗೂ ಸರ್ಕಾರ ಅವುಗಳ ಪಾಲನೆ, ಪೋಷಣೆಗೆಂದು ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿದೆ. ಅವುಗಳ ಸುರಕ್ಷತೆಗಾಗಿಯೂ ಸಾಕಷ್ಟು ಕ್ರಮ ವಹಿಸಿದೆ. ಹೀಗಿರುವಾಗ, ಇಲ್ಲಿ ನಡೆಯುತ್ತಿರುವ ಸಾಗುವಾನಿ ಮರಗಳ ಕಡಿತಲೆ ಹಾಗೂ ಕಳ್ಳ ಸಾಗಾಣಿಕೆ ತನ್ನ ಗಮನಕ್ಕೆ ಬಂದರೂ ಅರಣ್ಯ ಇಲಾಖೆ ಮೌನ ವಹಿಸಿರುವುದು ಹತ್ತು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಸಿಡಿಹಳ್ಳ ಕಾರೇಮಟ್ಟಿ ಭಾಗದ ಸರ್ವೇ ನಂಬರ್ 15, 16, 17, 09, 20 ಮತ್ತು 13 ರಲ್ಲಿರುವ ಸಾಗುವಾನಿ ನೆಡುತೋಪಿನಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸಾಗುವಾನಿ ಮರಗಳನ್ನು ಮರಗಳ್ಳರು ಯಾವುದೇ ಭಯವಿಲ್ಲದೆ ಕಡಿದಿರುವುದು ಒಂದೆಡೆಯಾದರೆ, ಇವುಗಳನ್ನು ಯಾವುದೇ ಅಂಜಿಕೆಯಿಲ್ಲದೆ ಇಲ್ಲಿಂದ ಸಾಗಿಸಿರುವುದು ಇನ್ನಷ್ಟು ಆಶ್ಚರ್ಯ ಹುಟ್ಟಿಸುತ್ತದೆ. ಇನ್ನು ಕೆಲವು ಮರಗಳನ್ನು ಸಾಯಿಸಲು ಸಂಚು ನಡೆದಿರುವುದು ನೋಡಿದರೆ ಇಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೋ ಇಲ್ಲವೋ ಎನ್ನುವ ಅನುಮಾನವನ್ನೂ ಹುಟ್ಟಿಸುತ್ತಿದೆ. ಹೌದು, ಇಷ್ಟೊಂದು ದೊಡ್ಡ ಪ್ರಮಾಣದಲ್ಲೇ ಸಾಗುವಾನಿ ಮರಗಳನ್ನು ರಾಜಾರೋಷವಾಗಿ ಕದ್ದೊಯ್ಯುತ್ತಿದ್ದರೂ ಇಲಾಖೆಯ ಯಾವುದೇ ಸಿಬ್ಬಂದಿ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಅರಣ್ಯ ಇಲಾಖೆಯ ಭ್ರಷ್ಟ ಸಿಬ್ಬಂದಿಗಳು ಹಾಗೂ ಕೆಲವು ಅಧಿಕಾರಿಗಳ ಕಾಂಚಾಣದ ಮೌನದಿಂದಲೇ ಇವೆಲ್ಲವೂ ನಡೆಯುತ್ತಿದೆಯೇನೋ ಎನ್ನುವ ಅನುಮಾನವನ್ನು ಹುಟ್ಟು ಹಾಕುತ್ತಿದೆ.

ಸ್ಥಳೀಯರೇ ಹೇಳುವಂತೆ, ಕೇವಲ ಎರಡು ವರ್ಷಗಳಿಂದೀಚೆಗೆ ಇಲ್ಲಿ ಸಾಕಷ್ಟು ಮರಗಳ ಕಳ್ಳತನವಾಗಿದೆ. ಮತ್ತು ಈ ಬಗ್ಗೆ ದೂರು ದಾಖಲಾಗದಂತೆ ಎಚ್ಚರಿಕೆ ವಹಿಸಿರುವುದು ನೋಡಿದರೆ ಉಪವಲಯ ಅರಣ್ಯಾಧಿಕಾರಿಗಳು, ಅರಣ್ಯ ರಕ್ಷಕರು ಮತ್ತು ಅರಣ್ಯ ವೀಕ್ಷಕರು ಇಲಾಖೆ ತಮಗೊಪ್ಪಿಸಿದ ಕೆಲಸವನ್ನು ಅದೆಂತಹ ಭಯಂಕರ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಿದ್ದಾರೆ ಎನ್ನುವುದೂ ತಿಳಿಯುತ್ತದೆ.

ಈ ಮಧ್ಯೆ ಅಕ್ಟೋಬರ್ ತಿಂಗಳಿನಲ್ಲೇ ಮರಗಳ ಅಕ್ರಮ ಕಡಿತಲೆ ಹಾಗೂ ಸಾಗಾಣಿಕೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರೊಬ್ಬರು ಹೊಸನಗರ ವಲಯ ಅರಣ್ಯಾಧಿಕಾರಿಗಳಿಗೆ ದಾಖಲೆ ಸಹಿತ ದೂರು ನೀಡಿದ್ದಾರೆ. ದೂರು ನೀಡಿ ಒಂದು ತಿಂಗಳು ಕಳೆದರೂ ಈವರೆಗೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದಕ್ಕೆ ಕಾರಣವೇನು? ತಾಲ್ಲೂಕಿನ ಮರಳು ಮಾಫಿಯಾದ ಹಿಂದೆ ಬಿದ್ದು ಕಾಸು ಮಾಡಿಕೊಳ್ಳಲಿಕ್ಕೇ ಇವರು ಅರಣ್ಯ ಇಲಾಖೆಯ ಸೇವೆಗೆ ಸೇರಿದ್ದಾರೇನೋ, ಆದ್ದರಿಂದಲೇ ಇವರು ಮರಗಳ ಕಳ್ಳ ಸಾಗಾಣಿಕೆಗೂ ತಮಗೂ ಸಂಬಂಧವಿಲ್ಲದಂತೆ ಇದ್ದಾರೆ ಎಂದು ಸ್ಥಳೀಯರು ಮಾತನಾಡಿಕೊಳ್ಳುವ ಮಟ್ಟಕ್ಕೆ ಅರಣ್ಯ ಇಲಾಖೆಯ ಕಾರ್ಯವೈಖರಿ ಲಡಾಸು ಬಿದ್ದು ಹೋಗಿದೆ.

ಈ ಮಧ್ಯೆ ’ನ್ಯೂಸ್‌ ಪೋಸ್ಟ್‌ಮಾರ್ಟಮ್‌’ ಸಾಗರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ ಈ ಬಗ್ಗೆ ವಿಚಾರಿಸಿದಾಗ, ಈ ಬಗ್ಗೆ ತನ್ನ ಗಮನಕ್ಕೆ ಬಂದಿಲ್ಲ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ನೋಡಿ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆಯೇ ಹೊರತು, ಆ ಎರಡು ದಿನಗಳು ಕಳೆದು ಹೋದರೂ ಈವರೆಗೂ ಸಂಬಂಧಿಸಿದ ಸಿಬ್ಬಂದಿ ವಿರುದ್ಧ ಯಾವುದೇ ಕ್ರಮ ಕೈಗೊಂಡ ಸುದ್ದಿ ಇಲ್ಲ.

ಅರಣ್ಯ ಸಂಪತ್ತು ನಶಿಸುತ್ತಿರುವ ಭಯದಲ್ಲಿ ಎಲ್ಲರೂ ಇರುವಾಗಲೇ ಅರಣ್ಯ ಇಲಾಖೆ ನೆಟ್ಟ ನೆಡುತೋಪಿನಿಂದಲೇ ಇಲಾಖೆಯ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗಲೇ ಲಕ್ಷಾಂತರ ಬೆಲೆ ಬಾಳುವ ಸಾಗುವಾನಿ ಮರಗಳ ಕಡಿತಲೆ ಹಾಗೂ ಕಳ್ಳ ಸಾಗಾಣಿಕೆ ಆಗುತ್ತಿದ್ದರೂ ಅರಣ್ಯ ಇಲಾಖೆಯಿಂದ ತಿಂಗಳುಗಳು ಕಳೆದರೂ ಕ್ರಮವಿಲ್ಲ ಎಂದರೆ, ಬಹುಶಃ ಚಳಿಗಾಲವಾಗಿರುವುದಕ್ಕೇ ಅರಣ್ಯ ಇಲಾಖೆ ಬೆಚ್ಚಗೆ ಹೊದ್ದುಕೊಂಡು ಗಾಢ ನಿದ್ದೆಗೆ ಜಾರಿದೆಯೇನೋ ಎನ್ನುವ ಅನುಮಾನ ಮಲೆನಾಡಿಗರದ್ದು. ಜಿಪಿಎಸ್‌ ಕ್ಯಾಮರಾದ ಸಹಾಯದೊಂದಿಗೆ ಅಕ್ಟೋಬರ್‌ ತಿಂಗಳ ಹದಿನೆಂಟನೇ ತಾರೀಖಿನಂದು ಸೆರೆ ಹಿಡಿದ ವಿಡಿಯೋದೊಂದಿಗೆ ಅಂದರೆ ಬಲವಾದ ಸಾಕ್ಷ್ಯದೊಂದಿಗೇ ಈ ವರದಿಯನ್ನು ನ್ಯೂಸ್ ಪೋಸ್ಟ್‌ಮಾರ್ಟಮ್ ಪ್ರಸಾರ ಮಾಡುತ್ತಿದೆ. ದೂರು ಕೊಟ್ಟರೂ ಅಲುಗಾಡದೇ ಚಳಿಗೆ ಹೊದ್ದುಕೊಂಡು ಕೂತಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಈಗಲಾದರೂ ಮೈಕೊಡವಿ ಎದ್ದು ಈ ಕಳ್ಳತನಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಜೊತೆಗೆ ನಿಂತ ಕೋಡೂರು ಉಪವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಈ ಕೂಡಲೇ ಸೇವೆಯಿಂದ ಅಮಾನತ್ತು ಮಾಡುವುದರ ಜೊತೆಗೆ, ಕಳ್ಳತನವಾಗಿರುವ ಮರಗಳ ಅಂದಾಜು ವೆಚ್ಚವನ್ನು ಈ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದಲೇ ತುರ್ತಾಗಿ ವಸೂಲಿ ಮಾಡಿಸಬೇಕಿದೆ. ಈ ಮೂಲಕ ಮರಗಳ್ಳರೊಂದಿಗೇ, ಇಲಾಖೆ ಕೊಡುವ ಸಂಬಳ-ಸೇವೆಯನ್ನೆಲ್ಲ ಅನುಭವಿಸಿಯೂ ಮರಗಳ್ಳರ ಎಂಜಲು ಕಾಸಿಗೆ ಕೈಯೊಡ್ಡುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೂ ಖಡಕ್‌ ಎಚ್ಚರಿಕೆಯೊಂದನ್ನು ರವಾನಿಸಬೇಕಿದೆ.

ಕಾಮೆಂಟ್‌ಗಳಿಲ್ಲ