Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ರಬ್ಬರ್‌ ಶೀಟ್‌ ಹಾಗೂ ಅಡಿಕೆ ಕದಿಯುತ್ತಿದ್ದ ಖತರ್ನಾಕ್ ಕಳ್ಳರ ತಂಡವನ್ನು 'ಲಾಕ್‌' ಮಾಡಿದ ರಿಪ್ಪನ್‌‌‌ಪೇಟೆ ಪೊಲೀಸರು

ರಿಪ್ಪನ್‌‌‌ಪೇಟೆ : ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳ ರೈತರ ಅಡಿಕೆ ಹಾಗೂ ರಬ್ಬರ್ ಶೀಟ್‌‌ಗಳನ್ನು ಕದ್ದು ಮಾರುತಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್‌ವೊಂದನ್ನು ರಿಪ್ಪನ್‌ಪೇಟೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹಲವು ಕಡೆ ಒಣಗಿಸಿದ ರಬ್ಬರ್ ಶೀಟ್‌‌ಗಳು ರಾತ್ರೋರಾತ್ರಿ ಕಾಣೆಯಾಗುತ್ತಿದ್ದ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಕದ್ದ ಕಳ್ಳರು ಮಾತ್ರ ಯಾವುದೇ ಕುರುಹುಗಳು ಸಿಗದಂತೆ ಭಯಂಕರ ಚಾಣಾಕ್ಷತೆಯಿಂದ ಕಳ್ಳತನ ಮಾಡಿ ಹೆಜ್ಜೆ ಕುರುಹು ಕೂಡಾ ಸಿಗದಂತೆ ಪರಾರಿಯಾಗಿರುತ್ತಿದ್ದರು. ಈ ಕಳ್ಳತನ ಪ್ರಕರಣಗಳು ಸುತ್ತಮುತ್ತಲಿನ ರೈತರ ಆತಂಕಕ್ಕೆ ಕಾರಣವಾಗಿದ್ದರೆ, ರಿಪ್ಪನ್‌ಪೇಟೆ ಪೊಲೀಸರ ಪಾಲಿಗೂ ತಲೆ ನೋವಾಗಿ ಪರಿಣಮಿಸಿತ್ತು.

ಇದೇ ರೀತಿ ದಿನಾಂಕ 16 -11-2023ರ ಮಧ್ಯರಾತ್ರಿ ಕೋಡ್ರಿಗೆಯ ಬಾಲರಾಜ್ ಎಂಬ ರೈತ ಬೇಯಿಸಿ ಒಣಗಿಸಿಟ್ಟಿದ್ದ ಸುಮಾರು 15 ರಿಂದ 20 ತಟ್ಟಿ ಅಡಿಕೆ ಕದ್ದೊಯ್ದ ಬಗ್ಗೆ ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಾಲರಾಜ್ ಪೊಲೀಸರ ಬಳಿ, ನನ್ನ ಒಂದು ವರ್ಷದ ಶ್ರಮದ ದುಡಿಮೆಯನ್ನೇ ಕಳ್ಳರು ಕದ್ದೊಯ್ದಿದ್ದಾರೆ. ಮಳೆ ಬಿಸಿಲೆನ್ನದೇ, ಹಗಲು ರಾತ್ರಿಯೆನ್ನದೆ ಕಷ್ಟಪಟ್ಟು ಬೆಳೆದ ಫಸಲನ್ನು ದೋಚಿದ್ದಾರೆ, ದಯಮಾಡಿ ನನ್ನ ಫಸಲನ್ನು ನನಗೆ ವಾಪಾಸ್ಸು ಕೊಡಿಸಿ ನ್ಯಾಯ ಕೊಡಿಸಬೇಕೆಂದು ತಮ್ಮ ದುಃಖ ತೋಡಿಕೊಂಡಿದ್ದರು.

ಈ ಪ್ರಕರಣವನ್ನು ಚಾಲೆಂಜಾಗಿ ತೆಗೆದುಕೊಂಡ ರಿಪ್ಪನ್‌‌ಪೇಟೆ ಪೊಲೀಸರು, ಠಾಣಾಧಿಕಾರಿ ಪ್ರವೀಣ್ ಎಸ್, ಪಿ. ನೇತೃತ್ವದಲ್ಲಿ ಪ್ರಕರಣವನ್ನು ಭೇದಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದರು. ತಂಡದಲ್ಲಿದ್ದ ಕ್ರೈಂ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಹಳಷ್ಟು ಶ್ರಮವಹಿಸಿ, ಹತ್ತು ಹಲವು ತನಿಖಾ ಮಾರ್ಗಗಳನ್ನು ಬಳಸಿಕೊಂಡು ಕಳ್ಳತನ ನಡೆದ ಬಗೆ, ಕಳ್ಳತನ ನಡೆದ ಮನೆಗಳಿರುವ ಪ್ರದೇಶ, ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಸಣ್ಣ ಸಣ್ಣ ಮಾಹಿತಿಯನ್ನೂ ಸಂಗ್ರಹಿಸಿ ಮಲೆನಾಡಿನಲ್ಲಿ ಹುಟ್ಟಿಕೊಂಡಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್‌ವೊಂದರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ A1 ಆರೋಪಿ ರಾಘವೇಂದ್ರ ಹರತಾಳು ಅಲಿಯಾಸ್ ರಾಘು ಕೆಂಪೇಗೌಡ, A5 ಆರೋಪಿ ಶ್ರೀಧರ ನಂಜವಳ್ಳಿಯನ್ನು ಬಂಧಿಸಿದ್ದು, ಈ ಪ್ರಕರಣದ A2 ಆರೋಪಿ ಪ್ರವೀಣ್ ಶಿವಪುರ, A3 ಆರೋಪಿ ನಾಗ ಅಲಿಯಾಸ್‌ ನಾಗಭೂಷಣ ಹಾಗೂ A4 ಆರೋಪಿ ಪ್ರತಾಪ್ ಎನ್ನುವವನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಪ್ರಕರಣದ A1  ಆರೋಪಿಯಾದ ರಾಘವೇಂದ್ರ ಅಲಿಯಾಸ್‌‌ ರಾಘು ಕೆಂಪೇಗೌಡನನ್ನು ತೀವ್ರ ವಿಚಾರಣೆಗೊಳಪಡಿಸಿದ ಪೊಲೀಸರು, ಆರೋಪಿಯಿಂದ ಕಳ್ಳತನ ಮಾಡಿದ್ದ ರಬ್ಬರ್ ಶೀಟುಗಳು, ಕಳ್ಳತನ ಮಾಡಲು ಉಪಯೋಗಿಸಿದ ಜೀತೋ ವಾಹನ ಮತ್ತು ಅಡಿಕೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಶ್ರೀಧರ ನಂಜವಳ್ಳಿಯ ಬಳಿ ಇದ್ದ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ. ಹಾಗೂ ಆರೋಪಿ ರಾಘವೇಂದ್ರ ತಾನು ಹಾಗೂ ತನ್ನ ಗ್ಯಾಂಗ್ ನಡೆಸಿದ ಎಲ್ಲಾ ಅಪರಾಧ ಪ್ರಕರಣಗಳನ್ನೂ ಒಪ್ಪಿಕೊಂಡಿದ್ದಾನೆ.

A1 ಆರೋಪಿ ರಾಘವೇಂದ್ರ ಪೊಲೀಸರಿಗೆ ನೀಡಿದ ಹೇಳಿಕೆ :

ದಿನಾಂಕ 2.11.2023ರ ರಾತ್ರಿ 11:00 ಗಂಟೆಗೆ A1 ಆರೋಪಿ ರಾಘವೇಂದ್ರ, A2 ಪ್ರವೀಣ, A3 ಪ್ರತಾಪ, A4 ನಾಗ ಅಲಿಯಾಸ್‌‌ ನಾಗಭೂಷಣ ಅಲಿಯಾಸ್‌‌ ತಮ್ಮಣ್ಣಿ ಸೇರಿ ಬೆಳಂದೂರು ಗ್ರಾಮದ ವೀರೇಶ್‌‌ರವರ ವಾಸದ ಮನೆಯ ಪಕ್ಕದಲ್ಲಿದ್ದ 105 ರಬ್ಬರ್ ಶೀಟ್‌‌ಗಳನ್ನು, ಬೆಳಂದೂರಿನ ಬಿ. ಟಿ. ಪ್ರಕಾಶ್ ಬಿನ್‌‌ ತಾತೇಶ್ವರ ಗೌಡರವರ ಮನೆಯ ಹತ್ತಿರ ರಾತ್ರಿ ಸುಮಾರು 12:30ಕ್ಕೆ 95 ರಬ್ಬರ್ ಶೀಟ್‌‌ಗಳನ್ನು, ರಾತ್ರಿ 2 ಗಂಟೆ ಸುಮಾರಿಗೆ ಗವಟೂರಿನ ಮಲ್ಲಾಪುರದ ಅಲೆಕ್ಸ್ ಜಾರ್ಜ್‌‌ರವರ ಮನೆಯಲ್ಲಿ 40 ರಬ್ಬರ್ ಶೀಟ್‌‌ಗಳನ್ನು, ರಾತ್ರಿ 3:30 ಗಂಟೆಗೆ ತಳಲೆ ಗ್ರಾಮದ ಜೋನ್ ಬಿನ್‌‌ ಉಲ್ಲಾಹನ್‌‌ರವರಿಗೆ ಸೇರಿದ್ದ 60 ರಬ್ಬರ್ ಶೀಟುಗಳನ್ನು  ಕಳ್ಳತನ ಮಾಡಿ, ನನ್ನ ಕೆಎ 15A 5746ರ ಮಹಿಂದ್ರ ಜೀತೋ ಪ್ಲಸ್ ಲಗೇಜ್ ಆಟೋದಲ್ಲಿ ತುಂಬಿಕೊಂಡು ನಮ್ಮ ಮನೆಗೆ ತೆಗೆದುಕೊಂಡು ಹೋಗಿ ಒಣಗಿಸಿಟ್ಟಿದ್ದೇನೆ. ನಮ್ಮ ಜೊತೆ ಬಂದರೆ ಸಂಗ್ರಹಿಸಿಟ್ಟ ಶೀಟುಗಳನ್ನು ಹಾಜರುಪಡಿಸಿ, ಅಡಿಕೆ ಕಳ್ಳತನದ ಸ್ಥಳವನ್ನು, ರಬ್ಬರ್ ಕಳ್ಳತನದ ಸ್ಥಳವನ್ನು ತೋರಿಸುವುದಾಗಿ ತಿಳಿಸಿ ನಾನು ಸ್ವಇಚ್ಚೆ ಯಿಂದ ಈ ಹೇಳಿಕೆಯನ್ನು ನೀಡುತ್ತಿದ್ದೇನೆ.

ಈ ಹೇಳಿಕೆಯ ನಂತರ ಕಾರ್ಯಪ್ರವೃತ್ತರಾದ ಪೊಲೀಸರು ಪಂಚರ ಸಮಕ್ಷಮ, ರಾಘವೇಂದ್ರ ಹಾಗೂ ಶ್ರೀಧರ್‌ನನ್ನು ಹಾಜರುಪಡಿಸಿ ಒಂದು ಕ್ವಿಂಟಾಲ್ 85 ಕೆಜಿ ತೂಕದ 4 ಅಡಿಕೆ ತುಂಬಿದ ಚೀಲಗಳನ್ನು ಹಾಜರು ಪಡಿಸಿರುತ್ತಾರೆ. ಇದರ ಅಂದಾಜು ಮೊತ್ತ 85,000 ರೂಗಳಾಗಿದ್ದು, ಅಂದಾಜು ಸುಮಾರು 50 ಸಾವಿರ ರೂಗಳ ಮೌಲ್ಯದ ರಬ್ಬರ್ ಶೀಟ್‌‌‌ಗಳನ್ನು ವಶಪಡಿಸಿಕೊಂಡು, ಅಪರಾಧವೆಸಗಿದ ಜಾಗಗಳನ್ನು ರಾಘವೇಂದ್ರ ಹಾಗೂ ಶ್ರೀಧರ್ ಅವರು ತೋರಿಸಿರುತ್ತಾರೆ.

ಪೊಲೀಸರ ಮಿಂಚಿನ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಶ್ಲಾಘನೆ

ಠಾಣಾಧಿಕಾರಿಯಾದ ಪ್ರವೀಣ್ ಎಸ್.ಪಿ ರವರ ತಂಡದ ಯಶಸ್ವಿ ಕಾರ್ಯಾಚರಣೆಗೆ ರಿಪ್ಪನ್‌‌ಪೇಟೆ ಹಾಗೂ ಸುತ್ತಮುತ್ತಲಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರೈತರ ಹಿತ ಕಾಪಾಡುವಲ್ಲಿ, ಕಾನೂನು ಸುವ್ಯವಸ್ಥೆಯನ್ನು ಎತ್ತಿ ಹಿಡಿಯುವಲ್ಲಿ ರಿಪ್ಪನ್‌‌ಪೇಟೆ ಪೊಲೀಸರು ಚುರುಕಾಗಿದ್ದು, ರೈತರ ಆತಂಕವನ್ನು ದೂರ ಮಾಡಿದ ದಕ್ಷ ಅಧಿಕಾರಿಗಳನ್ನು ಅಭಿನಂದಿಸಿದರು.

ಈ  ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಉಮೇಶ್, ಶಿವಕುಮಾರ್, ಸಂತೋಷ್ ಕೊರವರ್, ರಾಮಚಂದ್ರ, ಮಂಜುನಾಥ್, ಪ್ರೇಮ್ ಕುಮಾರ್, ಮಧುಸೂದನ್, ಹಾಗೂ ಶಿವಮೊಗ್ಗ ANC ತಂಡದ ಇಂದ್ರೇಶ್, ಮತ್ತು ವಿಜಯ್ ಪಾಲ್ಗೊಂಡಿದ್ದರು.


ಕಾಮೆಂಟ್‌ಗಳಿಲ್ಲ