ಸೌರಶಕ್ತಿ ಆಧಾರಿತ ಹುಲ್ಲು ಕಟಾವು ಯಂತ್ರ ಕಂಡುಹಿಡಿದ ಚಿಕ್ಕಜೇನಿ ಸರ್ಕಾರಿ ಪ್ರೌಢಶಾಲೆ 9ನೇ ತರಗತಿ ವಿದ್ಯಾರ್ಥಿ ಅಭಿಷೇಕ್ ರಾಜ್ಯಮಟ್ಟಕ್ಕೆ ಆಯ್ಕೆ - ಸರ್ಕಾರಿ ಶಾಲಾ ವಿದ್ಯಾರ್ಥಿಯ ಅಪರೂಪದ ಸಾಧನೆ
ಹೊಸನಗರ : ಚಿಕ್ಕಜೇನಿ ಸರಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಅಭಿಷೇಕ್ ಸಿದ್ಧಪಡಿಸಿರುವ ಸೌರಶಕ್ತಿ ಆಧಾರಿತ ಹುಲ್ಲು ಕಟಾವು ಯಂತ್ರ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದೆ.
ಕೋಡೂರು ಗ್ರಾಮದ ಕಾರಕ್ಕಿ ನಿವಾಸಿಗಳಾದ ಸತೀಶ್ ಹಾಗೂ ಆಶಾ ದಂಪತಿಗಳ ಪುತ್ರನಾದ ಅಭಿಷೇಕ್ ಚಿಕ್ಕಜೇನಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮಂಗಳವಾರ ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅಭಿಷೇಕ್ ಸಿದ್ಧಪಡಿಸಿರುವ ಸೌರಶಕ್ತಿ ಆಧಾರಿತ ಹುಲ್ಲು ಕಟಾವು ಯಂತ್ರ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ಮನೆಯಲ್ಲಿಯೇ ಲಭ್ಯವಿದ್ದ ಸೋಲಾರ್ ಪ್ಲೇಟ್, ಕಟ್ ಪೀಸ್ ಕಬ್ಬಿಣದ ಸಹಾಯದಿಂದ ಕೇವಲ ಒಂದು ಸಾವಿರ ರೂಪಾಯಿ ಖರ್ಚಿನಲ್ಲಿ ಈ ಯಂತ್ರವನ್ನು ಅಭಿಷೇಕ್ ಸಿದ್ಧಪಡಿಸಿದ್ದು, ವಿಜ್ಞಾನ ಶಿಕ್ಷಕರಾದ ಮಹೇಶ್ ಇದಕ್ಕೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಮನೆಯ ಸುತ್ತಮುತ್ತ ಬೆಳೆದಂತಹ ಹುಲ್ಲುಗಳನ್ನು ಕಟಾವು ಮಾಡುವ ಕಾರ್ಯಕ್ಕೆ ಕಡಿಮೆ ವೆಚ್ಚದ ಈ ಸೋಲಾರ್ ಯಂತ್ರವನ್ನು ಬಳಸಬಹುದಾಗಿದೆ.
ಈ ಬಗ್ಗೆ ಮಾತನಾಡಿದ ವಿದ್ಯಾರ್ಥಿ ಅಭಿಷೇಕ್, ಇವತ್ತು ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗಿರುವುದರಿಂದ ಈಗಾಗಲೇ ಮಾರುಕಟ್ಟೆಯಲ್ಲಿ ದೊರೆಯುವ ಕಟಾವು ಯಂತ್ರಗಳನ್ನು ಬಳಸುವುದು, ಖರೀದಿಸುವುದು ರೈತರಿಗೆ ದುಬಾರಿಯಾಗುತ್ತದೆ. ಆದ್ದರಿಂದ ನಾನು ಈ ಯೋಚನೆ ಮಾಡಿ ಶಿಕ್ಷಕರ ಸಹಾಯದಿಂದ ಸೌರಶಕ್ತಿ ಆಧಾರಿತ ಹುಲ್ಲು ಕಟಾವು ಯಂತ್ರವನ್ನು ಸಿದ್ಧಪಡಿಸಿದ್ದೇನೆ. ಒಂದು ಸಾವಿರ ರೂಪಾಯಿಯೊಳಗೆ ಇದನ್ನು ಯಾರು ಬೇಕಾದರೂ ತಯಾರಿಸಬಹುದು ಮತ್ತು ಬಳಸಬಹುದು ಎಂದರು. ಮಲೆನಾಡಿನ ಭಾಗದಲ್ಲಿ ಹೆಚ್ಚು ಬಿಸಿಲು ಇರುವುದಿಲ್ಲ. ಮೋಡದ ವಾತಾವರಣ ಇರುತ್ತದೆ. ಹೀಗಿದ್ದಾಗ ಸೋಲಾರ್ ಫಲಕದಿಂದ ಇದನ್ನು ಬಳಸಲಾಗದೇ ಇದ್ದರೂ, ಕಾರಿನ ಸಾಮಾನ್ಯ ಬ್ಯಾಟರಿಯಿಂದಲೇ ಇದನ್ನು ಚಲಾಯಿಸಬಹುದು ಎಂದು ಹೇಳಿದ ಅಭಿಷೇಕ್, ಸಣ್ಣ ಪ್ರಮಾಣದಲ್ಲಿ ಕೃಷಿ ಮಾಡುವ ರೈತರು ಕೂಡಾ ಇದನ್ನು ತಮ್ಮ ಗದ್ದೆ, ತೋಟಗಳಲ್ಲಿ ಬಳಸಬಹುದಾಗಿದೆ ಎಂದರು. ನಾನು ಸೌರಶಕ್ತಿ ಆಧಾರಿತ ಹುಲ್ಲು ಕಟಾವು ಯಂತ್ರವನ್ನು ಸಿದ್ಧಪಡಿಸುವ ಯೋಚನೆಯನ್ನು ಹೇಳಿಕೊಂಡಾಗ ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಾಜಿ, ವಿಜ್ಞಾನ ಶಿಕ್ಷಕರಾದ ಮಹೇಶ್ ಹಾಗೂ ಕನ್ನಡ ಶಿಕ್ಷಕರಾದ ಎನ್. ಡಿ. ಹೆಗಡೆ ಅವರು ಉತ್ತಮ ರೀತಿಯಲ್ಲಿ ಸ್ಪಂದಿಸಿ, ಅಗತ್ಯ ಮಾರ್ಗದರ್ಶನಗಳನ್ನು ನೀಡಿದ್ದರಿಂದ ಸೌರಶಕ್ತಿಯಿಂದ ಸಂಪೂರ್ಣ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಈ ಯಂತ್ರವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಯಿತು ಎನ್ನುತ್ತಾರೆ ಅಭಿಷೇಕ್.
ಸೌರಶಕ್ತಿ ಆಧಾರಿತ ಹುಲ್ಲು ಕಟಾವು ಯಂತ್ರವನ್ನು ಶಾಲಾ ಆವರಣದಲ್ಲಿ ಪ್ರದರ್ಶಿಸಿ ಅದು ಕೆಲಸ ಮಾಡುವ ಬಗೆಯನ್ನು ಪ್ರತ್ಯಕ್ಷವಾಗಿ ತೋರಿಸಿದ ಅಭಿಷೇಕ್, ಈ ಯಂತ್ರಕ್ಕೆ DC ಮೋಟಾರ್ ಮಾತ್ರ ನಾನು ಖರೀದಿ ಮಾಡಿದ್ದೇನೆ. ಉಳಿದಂತೆ ಸೋಲಾರ್ ಪ್ಲೇಟ್, ಕಬ್ಬಿಣ, ಬ್ಯಾಟರಿ ಎಲ್ಲವೂ ಮನೆಯಲ್ಲಿ ಇರುವುದನ್ನೇ ಬಳಸಿದ್ದೇನೆ. ಹೀಗಾಗಿ ಪ್ರತಿಯೊಬ್ಬರು ಇದನ್ನು ಮನೆಯಲ್ಲಿಯೇ ಅಭಿವೃದ್ಧಿ ಪಡಿಸಿಕೊಂಡು ತಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು. ರಾಜ್ಯಮಟ್ಟದ ಸ್ಪರ್ಧೆಗೆ ಇದನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸುತ್ತೇನೆ ಎಂದರು.
ಶಾಲೆಯ ವಿಜ್ಞಾನ ವಿಭಾಗದ ಶಿಕ್ಷಕ ಮಹೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಇದ್ದರೆ ಎಂತಹದ್ದನ್ನು ಸಾಧಿಸಿ ತೋರಿಸಬಹುದು ಎನ್ನುವುದಕ್ಕೆ ನನ್ನ ವಿದ್ಯಾರ್ಥಿ ಅಭಿಷೇಕ್ ಸಾಕ್ಷಿಯಾಗಿದ್ದಾನೆ, ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸೌರಶಕ್ತಿ ಆಧಾರಿತ ಹುಲ್ಲು ಕಟಾವು ಯಂತ್ರ ಎಲ್ಲಾ ತೀರ್ಪುಗಾರರ, ವೀಕ್ಷಕರ ಗಮನ ಸೆಳೆದು ಪ್ರಥಮ ಸ್ಥಾನ ಗಳಿಸಿದೆ. ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಈ ಯಂತ್ರವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಇಂಗಿತವನ್ನು ವಿದ್ಯಾರ್ಥಿ ಅಭಿಷೇಕ್ ವ್ಯಕ್ತಪಡಿಸಿದ್ದು ಆತನಿಗೆ ಅಗತ್ಯ ಸಲಹೆ ನೀಡುತ್ತೇನೆ ಎಂದರು.
ಶಾಲಾ ಮುಖ್ಯೋಪಾಧ್ಯಾಯರಾದ ಶಿವಾಜಿ ಮಾತನಾಡಿ, ಅಭಿಷೇಕ್ ಸಾಧನೆ ಮೆಚ್ಚುವಂತಹದ್ದು. ಇನ್ನಷ್ಟು ಪ್ರೋತ್ಸಾಹಿಸಿದರೆ ಅವನು ಇನ್ನೂ ಹೆಚ್ಚಿನದ್ದನ್ನು ಸಾಧಿಸಬಲ್ಲವನು ಎಂದು ಪ್ರಶಂಸಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರು ಸೇರಿದಂತೆ ಶಿಕ್ಷಕರ ಬಳಗ, ವಿದ್ಯಾರ್ಥಿಗಳು ಹಾಗೂ ಶಾಲಾಭಿವೃದ್ಧಿ ಸಮಿತಿಯವರು ಅಭಿಷೇಕ್‌ನ ಸಾಧನೆಯನ್ನು ಮೆಚ್ಚಿ, ರಾಜ್ಯಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.
ಕಾಮೆಂಟ್‌ಗಳಿಲ್ಲ