ಮದುವೆ ನಿಶ್ಚಿತಾರ್ಥದಂದೇ ರಕ್ತದಾನ ಮಾಡಿ ಮಾದರಿಯಾದ ಹೊಸನಗರ ತಾಲ್ಲೂಕು ಕುಂಭತ್ತಿಯ ಯುವಕ ವಿಶ್ವನಾಥ್
ಹೊಸನಗರ : ತಮ್ಮ ಮದುವೆ ನಿಶ್ಚಿತಾರ್ಥಕ್ಕೆ ಕೆಲವೇ ಗಂಟೆಗಳಿರುವಾಗ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಹೊಸನಗರ ತಾಲ್ಲೂಕಿನ ಯುವಕ ಕುಂಭತ್ತಿ ವಿಶ್ವನಾಥ ಇತರರಿಗೂ ಮಾದರಿ ಆಗಿದ್ದಾರೆ ಮತ್ತು ರಕ್ತದಾನದ ಮಹತ್ವ ಏನೆನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಹೊಸನಗರ ತಾಲ್ಲೂಕು ರಾಮಚಂದ್ರಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಂಭತ್ತಿ ಗ್ರಾಮದ ನಿವಾಸಿಯಾದ ವಿಶ್ವನಾಥ್‌ರವರು, ವೃತ್ತಿಯಲ್ಲಿ ವಾಹನ ಚಾಲಕರಾಗಿದ್ದು ಇಂದು ಹೊಸನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ತಮ್ಮ ಠಾಣೆಯಲ್ಲಿ ರಕ್ತದಾನ ಶಿಬಿರ ಇರುವುದಾಗಿ ತಿಳಿಸಿದ ತಕ್ಷಣ, ತನ್ನ ಮದುವೆ ನಿಶ್ಚಿತಾರ್ಥ ಇನ್ನೇನು ಕೆಲವೇ ಕ್ಷಣಗಳಲ್ಲಿ ನಡೆಯುತ್ತಿದ್ದರೂ, ಅದರ ನಡುವೆಯೇ ಠಾಣೆಗೆ ಸ್ವಯಂಪ್ರೇರಿತರಾಗಿ ಬಂದು ರಕ್ತದಾನ ಮಾಡಿದ್ದಾರೆ.
ಇಂತಹದ್ದೊಂದು ಅಪರೂಪದ ಕ್ಷಣಗಳಿಗೆ ಇಂದು ಹೊಸನಗರ ಪೊಲೀಸ್ ಠಾಣೆಯಲ್ಲಿ ಶಿವಮೊಗ್ಗದ ಆಶಾಜ್ಯೋತಿ ಸ್ವಯಂಪ್ರೇರಿತ ರಕ್ತದಾನ ಸಂಸ್ಥೆ ಹಾಗೂ ತೀಥರ್ಹಳ್ಳಿ ಹೆಚ್‌ಡಿಎಫ್‌ಸಿ ಬ್ಯಾಂಕ್‌ಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಸಾಕ್ಷಿಯಾಯಿತು. ನಿಶ್ಚಿತಾರ್ಥಕ್ಕೆ ಸಿದ್ಧವಾಗುತ್ತಿದ್ದ ನಡುವೆಯೇ ಬಂದು ರಕ್ತದಾನ ಮಾಡಿ ರಕ್ತದಾನ ಮಾಡುವವರಿಗೆ ಪ್ರೇರಣೆ ನೀಡಿ ಮಾದರಿಯಾದ ಕುಂಭತ್ತಿಯ ವಿಶ್ವನಾಥ್ ಅವರನ್ನು ಹೊಸನಗರ ಪೊಲೀಸ್ ಇಲಾಖೆ ಹಾಗೂ ಹೆಚ್‌ಡಿಎಫ್‌ಸಿ ಬ್ಯಾಂಕ್ ವತಿಯಿಂದ ಈ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಶ್ವನಾಥ್ ಅವರು, ತಮ್ಮಂತೆಯೇ ಬೇರೆಯವರು ಕೂಡಾ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವಲ್ಲಿ ಜೊತೆಯಾಗಬೇಕು ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಕ್ತದಾನಿ ಸಿಪಿಐ ಗುರಣ್ಣ ಎಸ್ ಹೆಬ್ಬಾಳ್ ಅವರು, ಅಗತ್ಯ ಹಾಗೂ ಅನಿವಾರ್ಯ ಸಂದರ್ಭಗಳಲ್ಲಿ ರಕ್ತದಾನವು ಅವಘಡಕ್ಕೀಡಾದವರ ಜೀವ ಕಾಪಾಡುತ್ತದೆ. ಯುವ ಜನತೆ ರಕ್ತದಾನದಂತಹ ಮಹತ್ಕಾರ್ಯಕ್ಕೆ ಮುಂದಾಗಬೇಕೆಂದು ಕಿವಿಮಾತು ಹೇಳಿದರು.
ತೀಥರ್ಹಳ್ಳಿ ಹೆಚ್‌ಡಿಎಫ್‌ಸಿ ಬ್ಯಾಂಕಿನ ವ್ಯವಸ್ಥಾಪಕಿ ರಶ್ಮಿ ಶೆಟ್ಟಿ ಮಾತನಾಡಿ, ರಕ್ತದಾನದಂತಹ ಸಿಎಸ್‌ಆರ್ ಕಾರ್ಯಕ್ರಮಗಳಿಗೆ ಬ್ಯಾಂಕ್ ಉತ್ತೇಜನ ನೀಡುತ್ತಿದ್ದು, ಬ್ಯಾಂಕ್ ಆರಂಭಗೊಂಡು ಹದಿನೈದು ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ ಬ್ಯಾಂಕಿನ ಸಹಯೋಗದಲ್ಲಿ ರಾಜ್ಯದ ವಿವಿಧೆಡೆ ನಡೆದ ಶಿಬಿರಗಳಲ್ಲಿ ಸುಮಾರು ಐವತ್ತು ಸಾವಿರ ಯುನಿಟ್ ರಕ್ತ ಸಂಗ್ರಹ ಆಗಿದೆ. ರಕ್ತದಾನ ಶಿಬಿರಗಳ ಮೂಲಕ ಬ್ಯಾಂಕ್ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದರೊಂದಿಗೆ ಸಮಾಜದ ಏಳಿಗೆಗೆ ತನ್ನನ್ನು ತೊಡಗಿಸಿಕೊಂಡಿದೆ ಎಂದು ಹೇಳಿದರು.
ಹಲವಾರು ಆರೋಗ್ಯವಂತ ಯುವಕರು ಈ ರಕ್ತದಾನ ಶಿಬಿರದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ನಿರ್ದೇಶನದಂತೆ, ತೀರ್ಥಹಳ್ಳಿ ಡಿವೈಎಸ್‌ಪಿ ಗಜಾನನ ಸತಾರ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಕೆ.ವೈ. ಶಿವಾನಂದ ಸೂಚನೆ ಮೇರೆಗೆ, ಪರಿಸರಾಸಕ್ತ, ರಕ್ತದಾನ ಶಿಬಿರದ ಪ್ರೇರಕ ಶಕ್ತಿ, ಭದ್ರಾವತಿ ಸಂಚಾರಿ ವಿಭಾಗದ ಹೆಡ್ ಕಾನ್‌ಸ್ಟೇಬಲ್ ಹಾಲೇಶಪ್ಪ ಸಲಹೆಯಂತೆ ಹೊಸನಗರದಲ್ಲಿ ಶಿಬಿರ ನಡೆಯಿತು.
ಶಿಬಿರದಲ್ಲಿ ಆಶಾ ಜ್ಯೋತಿ ಸಂಸ್ಥೆಯ ಡಾ. ಹುಲುಮನಿ, ಸ್ವಾಮಿ, ಪಿಆರ್‌ಓ ರವಿಕುಮಾರ್, ಉಲ್ಲಾಸ್, ಅಜ್ಮತ್, ಶಶಾಂಕ್, ರೂಹಿನಾ, ಬ್ಯಾಂಕಿನ ಸಿಬ್ಬಂದಿ ವಿಮಲ, ಪೊಲೀಸ್ ಸಿಬ್ಬಂದಿಗಳಾದ ವೀರೇಶ್, ತೀರ್ಥೇಶ್, ಗಂಗಣ್ಣ, ರಾಘವೇಂದ್ರ, ಎಎಸ್‌ಐ ಶಿವಪುತ್ರ ಸೇರಿದಂತೆ ಹಲವರು ಭಾಗವಹಿಸಿ ರಕ್ತದಾನ ಮಾಡಿದರು.
ಕಾಮೆಂಟ್‌ಗಳಿಲ್ಲ