Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ನ್ಯೂಸ್ ಪೋಸ್ಟ್‌ಮಾರ್ಟಮ್ ಆಯೋಜಿಸಿದ್ದ ಭಕ್ತಿಗೀತೆ ಗಾಯನ ಸ್ಪರ್ಧೆಯ ಟಾಪ್ ಒನ್ ಸ್ಪರ್ಧಿ ರಿಪ್ಪನ್‌ಪೇಟೆಯ ವಿದ್ಯಾರ್ಥಿನಿ ಭೂಮಿ ಎನ್ ಪೂಜಾರ್‌ಗೆ ಬಹುಮಾನ ವಿತರಣೆ

ರಿಪ್ಪನ್‌ಪೇಟೆ : ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆ, ನ್ಯೂಸ್ ಯುಟ್ಯೂಬ್ ಚಾನೆಲ್ ಹಾಗೂ ಡೈಲಿ ನ್ಯೂಸ್ ವೆಬ್‌ಸೈಟ್‌ನಿಂದ ಈ ವರ್ಷದ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಹೊಸನಗರ ತಾಲ್ಲೂಕಿನ ಪ್ರಾಥಮಿಕ ಶಾಲಾ ಮಕ್ಕಳಿಗೆ ಗಣಪತಿ ಕುರಿತ ಭಕ್ತಿಗೀತೆ ವಿಡಿಯೋ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯ ಅಂತಿಮ ಸುತ್ತು ಪ್ರವೇಶಿಸಿದ 13 ವಿದ್ಯಾರ್ಥಿಗಳಲ್ಲಿ ಟಾಪ್ ಒನ್ ಆಗಿ ಹೊರಹೊಮ್ಮಿದ ರಿಪ್ಪನ್‌ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಭೂಮಿ ಎನ್. ಪೂಜಾರ್‌ಗೆ ಇತ್ತೀಚೆಗೆ ಪತ್ರಿಕಾ ಬಳಗ ಶಾಲೆಗೆ ತೆರಳಿ ಬಹುಮಾನ ವಿತರಿಸಿತು.

ಹೊಸನಗರ ತಾಲ್ಲೂಕಿನ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು ಎನ್ನುವ ಉದ್ದೇಶದಿಂದ ನ್ಯೂಸ್ ಪೋಸ್ಟ್‌ಮಾರ್ಟಮ್ ಪತ್ರಿಕಾ ಸಮೂಹ ಏರ್ಪಡಿಸಿದ್ದ ಈ ಸ್ಪರ್ಧೆಯ ವಿಜೇತರಾದ ಭೂಮಿ ಎನ್. ಪೂಜಾರ್ ಅವರಿಗೆ ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾದ ಧನಲಕ್ಷ್ಮಿರವರು ಪೇಟ ತೊಡಿಸಿ, ಶಾಲು ಹೊದೆಸಿ, ಪ್ರಶಸ್ತಿ ಪತ್ರ, ಬಹುಮಾನದ ಮೊತ್ತವಾದ 1001 ರೂಪಾಯಿ ಮೊತ್ತದ ಚೆಕ್ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಬಹುಮಾನ ವಿತರಿಸಿ ಮಾತನಾಡಿದ ಅವರು, ನ್ಯೂಸ್ ಪೋಸ್ಟ್‌ಮಾರ್ಟಮ್ ಪತ್ರಿಕೆ ಇಂತಹ ಸ್ಪರ್ಧೆಗಳ ಮೂಲಕ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚಿಕೊಂಡರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ನ್ಯೂಸ್ ಪೋಸ್ಟ್‌ಮಾರ್ಟಮ್ ಪತ್ರಿಕೆಯ ಸಂಪಾದಕರಾದ ಗಣೇಶ ಕೆ ಅವರು, ಈ ಸ್ಪರ್ಧೆಯಲ್ಲಿ ಹೊಸನಗರ ತಾಲ್ಲೂಕಿನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ 43 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಈ ಸ್ಫರ್ದೆಯಲ್ಲಿ ಭಾಗವಹಿಸಬೇಕು ಎನ್ನುವುದು ನಮ್ಮ ನಿರೀಕ್ಷೆಯಾಗಿತ್ತು. ನಮ್ಮ ನಿರೀಕ್ಷೆಗೆ ತಕ್ಕಂತೆ ಶಾಲೆಗಳ ಸ್ಪಂದನೆ ಇರಲಿಲ್ಲವಾದರೂ ಭಾಗವಹಿಸಿದ ಸ್ಪರ್ಧಿಗಳಲ್ಲಿ ಅಂತಿಮ ಸುತ್ತಿಗೆ 13 ವಿದ್ಯಾರ್ಥಿಗಳ ಗಾಯನದ ವಿಡಿಯೋವನ್ನು ಆಯ್ಕೆ ಮಾಡಲಾಗಿತ್ತು. ಸ್ಪರ್ಧೆಯ ನಿಯಮದಂತೆ ನ್ಯೂಸ್ ಪೋಸ್ಟ್‌ಮಾರ್ಟಮ್ ನ್ಯೂಸ್ ಯುಟ್ಯೂಬ್ ಚಾನೆಲ್ಲಿನಲ್ಲಿ ಅತಿಹೆಚ್ಚು ವೀಕ್ಷಣೆಗಳನ್ನು ಪಡೆದ ರಿಪ್ಪನ್‌ಪೇಟೆಯ ಭೂಮಿ ಎನ್. ಪೂಜಾರ್ ಟಾಪ್ ಒನ್ ಸ್ಥಾನ ಪಡೆದಿದ್ದು, ಭೂಮಿ ಪೂಜಾರ್‌ಗೆ ಈ ದಿನ ಬಹುಮಾನ ವಿತರಿಸಲಾಗುತ್ತಿದೆ ಎಂದು ಹೇಳಿ, ಎಲ್ಲಾ ಮಕ್ಕಳಲ್ಲೂ ಪ್ರತಿಭೆ ಇದೆ. ಅದನ್ನು ಹೊರ ತರುವುದೇ ನಮ್ಮ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಸ್ಪರ್ಧೆಗಳನ್ನು ಆಯೋಜಿಸುವ ಯೋಜನೆ ನಮ್ಮ ಪತ್ರಿಕಾ ಸಮೂಹಕ್ಕಿದ್ದು ಇವತ್ತು ಭೂಮಿ ಪೂಜಾರ್ ಇರುವ ಸ್ಥಾನದಲ್ಲಿ ನಾಳೆ ನೀವೆಲ್ಲರೂ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಹುರುಪು ತುಂಬಿದರು.

ಬಹುಮಾನ ಸ್ವೀಕರಿಸಿದ ಭೂಮಿ ಎನ್. ಪೂಜಾರ್, ತನಗೆ ಬಹುಮಾನ ಬಂದಿರುವುದಕ್ಕೆ ತುಂಬಾ ಖುಷಿಯಾಗಿದೆ ಎಂದರೆ, ಭೂಮಿ ಅವರ ತಾಯಿ ಚೈತ್ರ ಅವರು ಮಾತನಾಡಿ, ಇದೊಂದು ಉತ್ತಮ ಸ್ಪರ್ಧೆಯಾಗಿತ್ತು. ಈ ಸ್ಪರ್ಧೆಯಲ್ಲಿ ನನ್ನ ಮಗಳು ಬಹುಮಾನ ಪಡೆದಿರುವುದಕ್ಕೆ ಖುಷಿ ಇದೆ. ಮುಂದೆಯೂ ನ್ಯೂಸ್ ಪೋಸ್ಟ್‌ಮಾರ್ಟಮ್ ಇಂತಹ ಇನ್ನಷ್ಟು ಸ್ಪರ್ಧೆಗಳನ್ನು ನಡೆಸಿಕೊಡುವಂತಾಗಲಿ. ಈ ಮೂಲಕ ಸರ್ಕಾರಿ ಶಾಲಾ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಲಿ ಎಂದು ಹಾರೈಸಿ ತಮ್ಮ ಖುಷಿಯನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಂಜುನಾಥ್, ಸ್ಥಳೀಯ ಮುಖಂಡರಾದ ಫ್ಯಾನ್ಸಿ ರಮೇಶ್, ಆದರ್ಶ, ಉಮೇಶ್, ಶಾಲಾ ಶಿಕ್ಷಕವೃಂದದವರು ಉಪಸ್ಥಿತರಿದ್ದರು. ಶಾಲೆಯ ವಿದ್ಯಾರ್ಥಿಗಳು ಈ ಸಂತಸದ ಕ್ಷಣಗಳಿಗೆ ಜೊತೆಯಾದರು.


ಕಾಮೆಂಟ್‌ಗಳಿಲ್ಲ