ಅಮ್ಮನಘಟ್ಟ ಜೀರ್ಣೋದ್ಧಾರ ಅನುದಾನ ಬಿಡುಗಡೆಗೆ ತಹಶೀಲ್ದಾರ್ ರಶ್ಮಿ ಮೀನಾಮೇಷ - ತಹಶೀಲ್ದಾರ್ ಕ್ರಮ ಖಂಡಿಸಿ ನಾಳೆ ಧರಣಿ ನಡೆಸಲಿದ್ದಾರೆ ಮಾಜಿ ಶಾಸಕ ಬಿ.ಸ್ವಾಮಿರಾವ್
ಹೊಸನಗರ : ತಾಲ್ಲೂಕಿನ ಪುರಾಣ ಪ್ರಸಿದ್ಧ ಕೋಡೂರು ಗ್ರಾಮದಲ್ಲಿರುವ ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ಜೀರ್ಣೋದ್ಧಾರ ಅಂಗವಾಗಿ ರಾಜ್ಯ ಸರ್ಕಾರ ಮಂಜೂರು ಮಾಡಿರುವ ರೂ ಒಂದು ಕೋಟಿ ಅನುದಾನ ಬಿಡುಗಡೆಗೆ ಮೀನಾಮೇಷ ಎಣಿಸುತ್ತಿರುವ ತಹಶೀಲ್ದಾರ್ ರಶ್ಮಿ ಅವರ ಕ್ರಮವನ್ನು ಖಂಡಿಸಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ, ಮಾಜಿ ಶಾಸಕರಾದ ಬಿ.ಸ್ವಾಮಿರಾವ್ ಡಿಸೆಂಬರ್ 7ರ ಗುರುವಾರ ಅಂದರೆ ನಾಳೆ ಬೆಳಿಗ್ಗೆ 10 ಗಂಟೆಗೆ ಇಲ್ಲಿನ ತಾಲ್ಲೂಕು ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು, ಅವರ ಹೋರಾಟಕ್ಕೆ ಮಾಜಿ ಸಚಿವ ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ತಾಲ್ಲೂಕು ಅಧ್ಯಕ್ಷ ಗಣಪತಿ ಬೆಳಗೋಡು ಸೇರಿದಂತೆ ಹಲವರು ಸಾಥ್ ನೀಡಲಿದ್ದಾರೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಬಾರಿ ನಡೆದ ಅಮ್ಮನಘಟ್ಟ ಜಾತ್ರೆ ಸಂದರ್ಭದಲ್ಲಿ ದೇವಿಯ ದರ್ಶನಕ್ಕೆ ಆಗಮಿಸಿದ್ದ ಮಾಜಿ ಶಾಸಕ ಹರತಾಳು ಹಾಲಪ್ಪನವರು, ತಮ್ಮ ಅವಧಿಯಲ್ಲಿ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ದೇಗುಲದ ಜೀರ್ಣೋದ್ಧಾರಕ್ಕಾಗಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿದ್ದೆ. ಸಂಸದ ರಾಘವೇಂದ್ರ ಅವರು ಕೂಡಾ ಇದಕ್ಕಾಗಿ ಶ್ರಮಿಸಿದ್ದರು. ಆದರೆ ಈಗಿನ ಸರ್ಕಾರ ಅದನ್ನು ತಡೆ ಹಿಡಿದಿದೆ. ಅದನ್ನು ಬಿಡುಗಡೆ ಮಾಡಿಸಲು ವಿಧಾನಸೌಧದ ಕಂಬಗಳನ್ನು ಸುತ್ತಬೇಕಾದದ್ದು ಈಗಿನ ಶಾಸಕರ ಜವಾಬ್ದಾರಿ ಎಂದು ಮಾಧ್ಯಮಗಳಿಗೆ ಹೇಳಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.
ಕಾಮೆಂಟ್‌ಗಳಿಲ್ಲ