ಚಿಕ್ಕಜೇನಿ ಗ್ರಾಮದಲ್ಲಿ ಇರುವಕ್ಕಿ ಕೃಷಿ ವಿವಿ ವಿದ್ಯಾರ್ಥಿಗಳಿಂದ ಅಡಿಕೆ ಸಿಪ್ಪೆಯಿಂದ ಗೊಬ್ಬರ ತಯಾರಿಸುವ ವಿಧಾನದ ಪ್ರದರ್ಶನ
ರಿಪ್ಪನ್‌ಪೇಟೆ : ಇಲ್ಲಿನ ಚಿಕ್ಕಜೇನಿ ಗ್ರಾಮದಲ್ಲಿ ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್ಸಿ. ಕೃಷಿ ವಿದ್ಯಾರ್ಥಿಗಳು ಆರಂಭಿಸಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಇಂದು ’ಸಿಹಿಜೇನು’ ತಂಡದವರು ಅಡಿಕೆ ಸಿಪ್ಪೆಯಿಂದ ಗೊಬ್ಬರ ತಯಾರಿಸುವ ವಿಧಾನದ ಪ್ರದರ್ಶನವನ್ನು ಕೃಷಿ ವಿಸ್ತರಣ ವಿಭಾಗದ ಡಾ. ಅರುಣ್ ಕುಮಾರ್ ಮತ್ತು ಕೃಷಿ ಅರ್ಥಶಾಸ್ತ್ರ ವಿಭಾಗದ ಡಾ. ಕಿರಣ್ ಕುಮಾರ್ ರವರ ನೇತೃತ್ವದಲ್ಲಿ ಏರ್ಪಡಿಸಿದ್ದರು.
ಹಸಿ ಅಡಿಕೆ ಸುಲಿದಾಗ ದೊಡ್ಡ ಪ್ರಮಾಣದಲ್ಲಿ ಸಿಪ್ಪೆಯ ರಾಶಿಯೇ ನಿರ್ಮಾಣವಾಗುತ್ತದೆ. ಇದನ್ನು ವಿಲೇವಾರಿ ಮಾಡುವುದಕ್ಕೆ ಬೆಳೆಗಾರರು ಕಷ್ಟ ಪಡುವ ಸ್ಥಿತಿ ಇದೆ. ಕೆಲವೆಡೆ ಇದಕ್ಕೆ ಬೆಂಕಿಯಿಟ್ಟು ಸುಡಲಾಗುತ್ತದೆ. ಇದರ ಮಹತ್ವ ಅರಿಯದೇ ಅನವಶ್ಯಕವಾಗಿ ರಸ್ತೆಯ ಬದಿ ಖಾಲಿ ಜಾಗದಲ್ಲಿ ಸುರಿಯಲಾಗುತ್ತದೆ. ಸರಿಯಾಗಿ ತ್ಯಾಜ್ಯ ವಿಲೇವಾರಿ ಆಗದೇ ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಜತೆಗೆ, ಸಿಪ್ಪೆಯು ನೀರು ಹೋಗುವ ಚರಂಡಿ, ಬಾವಿ, ಹೊಂಡ, ನದಿಗಳಲ್ಲಿ ಶೇಖರಣೆಯಾಗುತ್ತದೆ. ಇದೆಲ್ಲದ್ದಕ್ಕೂ ಅಡಿಕೆ ಸಿಪ್ಪೆ ಗೊಬ್ಬರ ಪರಿಹಾರಾತ್ಮಕ ದಾರಿಯಾಗಿದ್ದು, ಕೊಟ್ಟಿಗೆ ಗೊಬ್ಬರಕ್ಕಿಂತ ಇದರಲ್ಲಿ ಹೆಚ್ಚು ಪೋಷಕಾಂಶ ಇರುವುದರಿಂದ ಬೆಳೆಗಳಿಗೂ ಹೆಚ್ಚು ಉಪಯುಕ್ತ. ಇದರಲ್ಲಿ ನಾರಿನಾಂಶವೂ ಇರುವುದರಿಂದ ಅಡಿಕೆ ಬೆಳೆಗೆ ಹೇಳಿ ಮಾಡಿಸಿದ ಗೊಬ್ಬರ ಎನ್ನಬಹುದು ಎಂದು ಈ ಸಂದರ್ಭದಲ್ಲಿ ನೆರೆದಿದ್ದ ಕೃಷಿಕರಿಗೆ ತಿಳಿಸಿಕೊಡಲಾಯಿತು ಹಾಗೂ ಎರೆಹುಳು ಗೊಬ್ಬರದ ಮಹತ್ವ ಮತ್ತು ಅದರ ತಯಾರಿ ವಿಧಾನವನ್ನು ವಿವರಿಸಲಾಯಿತು.
ಎರೆಹುಳುಗಳು ನೈಸರ್ಗಿಕವಾಗಿ ಭೂಮಿಯನ್ನು ಫಲವತ್ತಾಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದಲೇ ಎರೆಹುಳುಗಳು ರೈತರ ಸಹಜ ಸ್ನೇಹಿತರು ಎಂದು ಹೇಳಬಹುದು. ಎರೆಹುಳುಗಳು ಸ್ವಾಭಾವಿಕವಾಗಿ ತೇವಾಂಶವುಳ್ಳ ಮಣ್ಣಿನಲ್ಲಿ ಕೊರೆಯುತ್ತವೆ ಮತ್ತು ಭೂಮಿಯಲ್ಲಿರುವ ಸಾವಯವ ಪದಾರ್ಥಗಳನ್ನು ತಿನ್ನುತ್ತವೆ ಹಾಗೂ ಫಲವತ್ತಾದ ಮಣ್ಣನ್ನು ಹೊರಹಾಕುತ್ತವೆ. ಈ ಮಲವಿಸರ್ಜನೆಯನ್ನು ವರ್ಮಿಕಾಂಪೋಸ್ಟ್ ಎಂದು ಕರೆಯಲಾಗುತ್ತದೆ ಎಂದು ನೆರೆದಿದ್ದ ರೈತ ಬಾಂಧವರಿಗೆ ಡಾ. ಅರುಣ್ ಕುಮಾರ್ ಮತ್ತು ಡಾ. ಕಿರಣ್ ಕುಮಾರ್ ಅವರು ವಿವರಿಸಿದರು.
ಕಾಮೆಂಟ್‌ಗಳಿಲ್ಲ