Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ತೀರ್ಥಹಳ್ಳಿಯ ಪತ್ರಕಟ್ಟೆಯಲ್ಲಿ ನವೋದಯ ಪರೀಕ್ಷೆಗಾಗಿ ಉಚಿತ ತರಬೇತಿ ಶಿಬಿರದ ಉದ್ಘಾಟನೆ

ತೀರ್ಥಹಳ್ಳಿ : ನವೋದಯ ಶಾಲೆ ಪ್ರವೇಶ ಪರೀಕ್ಷೆಗಾಗಿ ಉಚಿತ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ಪತ್ರಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು. ಪ್ರಥಮ ವರ್ಷದ ಶಿಬಿರದಲ್ಲಿ ಭಾಗಿಯಾದ ಎಲ್ಲಾ ಮಕ್ಕಳಿಗೆ ನವೋದಯ ಪ್ರವೇಶ ಪರೀಕ್ಷೆ ಬಗ್ಗೆ ಮಾಹಿತಿ, ನೋಟ್ ಬುಕ್, ಬ್ಯಾಗ್‌ ಸೇರಿದಂತೆ ಕಲಿಕಾ ಸಾಮಗ್ರಿ ಮತ್ತು ಟೀಶರ್ಟ್‌‌ಗಳನ್ನು ಕೊಡಲಾಯಿತು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ  ಪತ್ರಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಜಗದೀಶ್ ವಿ. ಅವರು ಮಾತನಾಡಿ, ’ಶಿಕ್ಷಣವು ಎಲ್ಲರಿಗೂ ಶಾಂತಿ, ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯ ಜಗತ್ತನ್ನು ಸಾಧಿಸುವ ಸಾಧನವಾಗಿದೆ. ಹೀಗಾಗಿ ಶಿಕ್ಷಣ ಎಲ್ಲರಿಗೂ ಅತ್ಯಗತ್ಯ. ನಮ್ಮ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮವಾದ ವೇದಿಕೆ ಕಲ್ಪಿಸಿದ ಹಳೆ ನವೋದಯ ವಿದ್ಯಾರ್ಥಿ ಬಳಗ ಮತ್ತು ಪತ್ರಕಟ್ಟೆಯ ಶಿಕ್ಷಕರ ಕೆಲಸ ಎಲ್ಲರೂ ಮೆಚ್ಚುವಂತಹದ್ದು’ ಎಂದು ಶ್ಲಾಘಿಸಿದರು.

ಶಿಬಿರದ ಸಂಚಾಲಕರು ಮತ್ತು ಶಿವಮೊಗ್ಗ ನವೋದಯ ಶಾಲೆಯ ವಿದ್ಯಾರ್ಥಿಯಾದ ರಮ್ಯಾ ರಾವ್ ಮಾತನಾಡಿ ’ನವೋದಯ ಮತ್ತು ಮೊರಾರ್ಜಿ ವಸತಿ ಶಾಲೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಉತ್ತಮ ಯೋಜನೆಗಳಾಗಿದ್ದು, ನಮ್ಮ ಊರಿನ ಭಾಗದ ಮಕ್ಕಳು ಇದರ ಉಪಯೋಗ ಪಡೆದುಕೊಂಡು ಉತ್ತಮ ಶಿಕ್ಷಣ ಪಡೆಯುವ ಮೂಲಕ ತಮ್ಮ ಬದುಕು ರೂಪಿಸಿಕೊಳ್ಳಬೇಕು’ ಎಂದು ಹೇಳಿದರು.

ಪತ್ರಕಟ್ಟೆ ಗ್ರಾಮದ ಹಿರಿಯರಾದ ಕೆ ಎಸ್ ಗೋಪಾಲ ರಾವ್ ಅವರ ಮಾರ್ಗದರ್ಶನದಲ್ಲಿ ನಡೆದ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ತ್ರಿಯಂಬಕಪುರ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಅನಿಲ್ ಟಿ ಜೆ, ಸದಸ್ಯರಾದ ಪ್ರಭಾಕರ್, ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯರಾದ ಜಯ ಜಿ ರಾವ್, ಮುಖ್ಯ ಶಿಕ್ಷಕರಾದ ರಂಗನಾಥ್ ಮತ್ತು ಶಿವಮೊಗ್ಗ ನವೋದಯ ಶಾಲೆಯ ಹಳೆ ವಿದ್ಯಾರ್ಥಿಗಳಾದ ನವೀನ್ ಕುಮಾರ್, ಪ್ರಾಂಶುಪಾಲರು ಹಿರಿಯೂರು, ಪುನೀತ್, ರೋಬೊಸಾಫ್ಟ್ ಬೆಂಗಳೂರು, ಸುನಿಲ್ ಕುಮಾರ್ ಕೆ. ಎಂ, ಪಶುವೈದ್ಯಕಾರಿಗಳು ಶಿಕಾರಿಪುರ, ಶಾರದಾ, ಶಿಕ್ಷಕರು ನೊಣಬೂರು, ದೀಪ್ತಿ ಬೆಂಗಳೂರು ಉಪಸ್ಥಿತರಿದ್ದರು.

ನವೋದಯ ಮತ್ತು ಮೊರಾರ್ಜಿ ಶಾಲೆಗಳ ಪ್ರವೇಶ ಪರೀಕ್ಷೆಯ ಉಚಿತ ತರಬೇತಿ ಶಿಬಿರ 2021ರಲ್ಲಿ ಹೊಸನಗರ ತಾಲ್ಲೂಕಿನ ಹುಂಚದಲ್ಲಿ ಆರಂಭವಾಗಿದ್ದು, ಈ ವರ್ಷ ಕೋಣಂದೂರು ವ್ಯಾಪ್ತಿಯ ಪತ್ರಕಟ್ಟೆಯಲ್ಲಿ ಪ್ರಾರಂಭವಾಗಿದೆ. ನವೋದಯ ಪರೀಕ್ಷೆಗೆ ದಾಖಲಿಸಿಕೊಂಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನವೋದಯ ಮತ್ತು ಮೊರಾರ್ಜಿ ಶಾಲೆಯ ಪರಿಚಯ, ಆಯ್ಕೆ ಪ್ರಕ್ರಿಯೆ ಮಾಹಿತಿ, ಕೋಚಿಂಗ್, ಮಾದರಿ ಪರೀಕ್ಷೆ, ಕಲಿಕಾ ಸಾಮಗ್ರಿಗಳು, ಸಮಯ ನಿರ್ವಹಣೆ ಮತ್ತು ಇತರೆ ಉಪಯುಕ್ತ ಮಾಹಿತಿಗಳನ್ನು ಕೊಡಲಾಗುತ್ತಿದೆ.

ಪ್ರಸಕ್ತ ಸಾಲಿನ ಶಿಬಿರಕ್ಕೆ ಪತ್ರಕಟ್ಟೆ ಸುತ್ತಮುತ್ತಲಿನ 4 ಸರ್ಕಾರಿ ಶಾಲೆಗಳಿಂದ ಒಟ್ಟು 20 ಮಕ್ಕಳು ಹೆಸರು ನೋಂದಾಯಿಸಿದ್ದು, ಶಿಬಿರ ಅಕ್ಟೋಬರ್ ತಿಂಗಳಿಂದ ಪ್ರಾರಂಭವಾಗಿದೆ. ಸತತ ಮೂರು ತಿಂಗಳು ಪ್ರತಿ ಭಾನುವಾರ ಮಕ್ಕಳಿಗೆ ಪ್ರವೇಶ ಪರೀಕ್ಷೆಗೆ ಉತ್ತಮ ತರಬೇತಿ ನೀಡಲಾಗುತ್ತದೆ.

ಕಾಮೆಂಟ್‌ಗಳಿಲ್ಲ