Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಂಬೆಯವರೊಂದಿಗೆ ಮಾತುಕತೆ - ರಂಗಭೂಮಿಯ ಸದ್ದಿಲ್ಲದ ಸಾಧಕ ಚಿದಂಬರ್ ರಾವ್ ಜಂಬೆ ಅವರನ್ನು ಅರಸಿ ಬಂತು ರಾಜ್ಯೋತ್ಸವ ಪ್ರಶಸ್ತಿ

ನೀನಾಸಂ ಎಂದರೆ ಜಂಬೆ, ಜಂಬೆ ಎಂದರೆ ನೀನಾಸಂ ಎನ್ನುವಷ್ಟು ನೀನಾಸಂಗಾಗಿ ಕೆ.ವಿ. ಸುಬ್ಬಣ್ಣನವರೊಂದಿಗೆ ಕೆಲಸ ಮಾಡಿದ ಚಿದಂಬರ್‌ ರಾವ್ ಜಂಬೆಯವರು, ಕನ್ನಡ ರಂಗಭೂಮಿ ಕಂಡ ಅಪ್ರತಿಮ ಸಾಧಕರು. ಜಂಬೆಯವರು ಒಂದು ನಾಟಕವನ್ನು ನಿರ್ದೇಶಿಸುತ್ತಾರೆ ಎಂದರೆ ಅದೆಷ್ಟು ಕುತೂಹಲ! ನೀನಾಸಂನ ಸಂಸ್ಕೃತಿ ಶಿಬಿರದಲ್ಲಿ ಜಂಬೆಯವರು ನಿರ್ದೇಶಿಸಿದ ನಾಟಕವನ್ನು ನೋಡುವುದೇ ಒಂದು ಹಬ್ಬವಾಗಿರುತ್ತಿತ್ತು. ಅಷ್ಟರಮಟ್ಟಿಗೆ ಕನ್ನಡ ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿದವರು ಜಂಬೆಯವರು. ಸುದೀರ್ಘ ಇಪ್ಪತ್ತೆರಡು ವರ್ಷಗಳ ಕಾಲ ಹೀಗೆ ನೀನಾಸಂಗಾಗಿ ದುಡಿದ ಜಂಬೆಯವರು ಅಲ್ಲಿಂದ ಹೊರಬಂದ ನಂತರ ಸಾಣೇಹಳ್ಳಿ, ರಂಗಾಯಣ... ಹೀಗೆ ತಮ್ಮ ರಂಗ ಚಟುವಟಿಕೆಯನ್ನು ವಿಸ್ತರಿಸುತ್ತಾ ಹೋದರು. ಆನಂತರ ಎನ್‌ಎಸ್‌ಡಿಯ ಬೆಂಗಳೂರು ಕೇಂದ್ರದ ನಿರ್ದೇಶಕರಾಗಿ ಶಿಕ್ಷಣ ಮತ್ತು ರಂಗಭೂಮಿಯನ್ನು ಹತ್ತಿರ ತರುವ ಕೆಲಸದಲ್ಲಿ ತೊಡಗಿಸಿಕೊಂಡ ಜಂಬೆಯವರು ಅಲ್ಲಿಯೂ ಸಾಕಷ್ಟು ಹೊಸ ಪ್ರಯೋಗಗಳನ್ನು ನಡೆಸಿದರು. ತಮ್ಮ ಪಾಡಿಗೆ ತಾವು ರಂಗಸೇವೆಯನ್ನು ಮಾಡಿಕೊಂಡು ಬಂದಿದ್ದ ಈ ಸದ್ದಿಲ್ಲದ ಸಾಧಕರನ್ನು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಅರಸಿಕೊಂಡು ಬಂದಿದೆ. ಈ ಮೂಲಕ ನಿಜಕ್ಕೂ ಈ ಪ್ರಶಸ್ತಿ ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಅಪ್ರತಿಮ ಸಾಧಕನಾಗಿ ತನ್ನಷ್ಟಕ್ಕೆ ತಾನು ರಂಗಭೂಮಿಯ ತಪಸ್ಸಿನಲ್ಲಿರುವ ಜಂಬೆಯವರು ಎನ್‌ಎಸ್‌ಡಿಯ ಬೆಂಗಳೂರು ಕೇಂದ್ರದ ನಿರ್ದೇಶಕರಾಗಿದ್ದಾಗ 2012ರಲ್ಲಿ ಪತ್ರಿಕೆಯ ಸಂಪಾದಕರಾದ ಗಣೇಶ ಕೆ. ಅವರು ನಡೆಸಿದ ಮಾತುಕತೆ ಈಗ ನಿಮ್ಮ ಮುಂದೆ...


‘ಜಂಬೆ’ ಎಂದರೆ ಸಾಕು ಕನ್ನಡದ ರಂಗಭೂಮಿಗೆ ರಂಗಭೂಮಿಯೇ ಒಂದು ಕ್ಷಣ ಕಿವಿಯರಳಿಸುತ್ತದೆ. ಯಾಕೆಂದರೆ ಜಂಬೆಯವರು ಸುಮ್ಮನೆ ಮಾತಾಗುವವರಲ್ಲ. ಅದು ನನ್ನ ಕೆಲಸವೂ ಅಲ್ಲ ಅನ್ನುತ್ತಲೇ ರಂಗಭೂಮಿಯ ಹೊಸ ಆಯಾಮಗಳ ಬಗ್ಗೆ ಚಿಂತಿಸುತ್ತಾ, ಜನ ತಲುಪಬಹುದಾದ ನಾಟಕವೊಂದನ್ನು ಅದ್ಭುತವಾಗಿ ನಿರ್ದೇಶಿಸುತ್ತಾ ತಮ್ಮ ಪಾಡಿಗೆ ತಾವಿರುವವರು. ಆದ್ದರಿಂದಲೇ ಕನ್ನಡ ರಂಗಭೂಮಿಯ ಕೆಲವೇ ಕೆಲವು ಪ್ರಮುಖರಲ್ಲಿ ಚಿದಂಬರ್ ರಾವ್ ಜಂಬೆಯವರ ಹೆಸರು ಮೊದಲು ಕೇಳಿ ಬರುತ್ತದೆ. 

ಮಾತು, ಪ್ರಚಾರಗಳಿಂದ ಸದಾ ದೂರವೇ ಉಳಿದು ಬಿಡುವ ಜಂಬೆಯವರು ಈ ರಂಗಭೂಮಿಯಿಂದ ಆಕರ್ಷಿತರಾಗಿದ್ದು ಹೇಗೆ? ಎನ್ನುವ ಪ್ರಶ್ನೆಗೆ ಉತ್ತರವಾಗುವುದರೊಂದಿಗೆ ಇಲ್ಲಿ ಅವರು ತಮ್ಮ ಬದುಕಿನ ರಂಗಭೂಮಿಯೊಳಗಿನ ಪಯಣವನ್ನು ಮಾತಾಗಿಸಿದ್ದಾರೆ.

‘ವೈಯಕ್ತಿಕವಾಗಿ ನನಗೆ ಈ ‘ಭೂಮಿ’ ಮತ್ತು ‘ರಂಗಭೂಮಿ’ ಎರಡೂ ಬೇರೆಯಲ್ಲ. ಇವೆರಡೂ ನನಗೆ ಬಹಳ ಇಷ್ಟವಾದಂತಹ ವಿಷಯಗಳು. ನನ್ನ ಪ್ರಕಾರ ಭೂಮಿಯನ್ನು ಬಿಟ್ಟು ರಂಗಭೂಮಿ ಇರಲಿಕ್ಕೆ ಸಾಧ್ಯವಿಲ್ಲ. ಯಾಕೆಂದರೆ ನಾವೆಲ್ಲ ಒಂದು ಕೃಷಿ ಪರಂಪರೆಯಿಂದ ಬಂದವರು. ಮೊದಲಿನಿಂದಲೂ ಬೇಸಾಯ,ಗದ್ದೆ, ತೋಟ ಎಂದುಕೊಂಡು ಅದರ ಜೊತೆಯೇ ಬೆಳೆದವರು. ಜೊತೆಗೆ ಸ್ವತಃ ನಾನೇ ಸಾಗುವಳಿ ಕೂಡಾ ಮಾಡುತ್ತಿದ್ದೆ. ಆದರೆ ಈಗ ಅದು ಕೇವಲ ನೆನಪಷ್ಟೇ. ಸ್ವಂತ ಜಮೀನಿದೆ. ಆದರೆ ಸ್ವತಃ ಸಾಗುವಳಿ ಮಾಡಲಿಕ್ಕೆ ಆಗುತ್ತಿಲ್ಲ’ ಎನ್ನುತ್ತಲೇ ತಮ್ಮ ಅಂದಿನ ಬದುಕಿನ ನೆನಪಿಗೆ ಜಾರುವ ಜಂಬೆಯವರು ರಂಗಭೂಮಿಯೆಡೆಗೆ ಹೊರಳಿಕೊಳ್ಳಲು ಕಾರಣವಾಗಿದ್ದು ಅವರ ಊರಿನಲ್ಲಿದ್ದ ಸಾಂಸ್ಕೃತಿಕ ವಾತಾವರಣ. 

‘ಕೆಳದಿ ಹತ್ತಿರದ ಮಾಸೂರು ಅಡ್ಡೆ ನನ್ನ ಊರು. ನಮ್ಮೂರಿನಲ್ಲಿ ಎರಡು ಮೂರು ಮನೆ ಬಿಟ್ಟು ಒಕ್ಕಲಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅವರು ಸಾಮಾನ್ಯವಾಗಿ ಮಳೆಗಾಲದಲ್ಲಿ ಈ ಸಣ್ಣಾಟದ ಅಭ್ಯಾಸ ಮಾಡುತ್ತಿದ್ದರು. ಇದರ ತಾಲೀಮು ನಮ್ಮ ಮನೆಯ ಹತ್ತಿರದಲ್ಲೇ ನಡೆಯುತ್ತಿದ್ದಿದ್ದರಿಂದ, ರಾತ್ರಿ ಎರಡು ಗಂಟೆವರೆಗೂ ಅವರು ಹಾಡುತ್ತಿದ್ದ ಪದಗಳು ನನ್ನ ಕಿವಿ ಮೇಲೆ ಬೀಳುತ್ತಿತ್ತು. ಸಣ್ಣಾಟ, ಕೋಲಾಟ, ಡೊಳ್ಳು ಬಡಿತ...  ಹೀಗೆ ಒಂದು ಸಾಂಸ್ಕೃತಿಕ ಅಭಿರುಚಿ ಇದ್ದ ಊರಾಗಿತ್ತು. ಜೊತೆಗೆ ನಮ್ಮದು ಅವಿಭಕ್ತ ಕುಟುಂಬ. ಇದರಿಂದಾಗಿ ಕೋಲಾಟ ಆಡಲಿಕ್ಕೆ ನಮ್ಮಲ್ಲಿಯೇ ಎಂಟ್ಹತ್ತು ಜನ ಇರುತ್ತಿದ್ದೆವು. ಜೊತೆಗೆ ಯಕ್ಷಗಾನದ ಪ್ರಭಾವವೂ ಇತ್ತು. ಇದೇ ನನಗೆ ರಂಗಭೂಮಿ ಕಡೆ ಅಭಿರುಚಿ ಬೆಳೆಯಲಿಕ್ಕೆ ಕಾರಣವಾಯಿತು ಅನ್ನಿಸುತ್ತದೆ’ ಎನ್ನುವ ಜಂಬೆಯವರು ಸ್ಕೂಲಿನಲ್ಲಿದ್ದಾಗಲೇ ನಾಟಕದಲ್ಲಿ ಬಣ್ಣ ಹಚ್ಚಿದ್ದರು. ಊರಿನಲ್ಲಿದ್ದ ಸಣ್ಣ ನಾಟಕ ತಂಡವೊಂದರ ನಾಟಕಗಳಲ್ಲೂ ಇವರು ಭಾಗವಹಿಸುತ್ತಿದ್ದರು. ಸಾಗರದ ಎಲ್‌‌ಬಿ ಕಾಲೇಜಿನಲ್ಲಿ 1969ರ ಸುಮಾರಿಗೆ ಡಿಗ್ರಿ ಮುಗಿಸಿದ ಇವರು ನಂತರ ಸುಮಾರು ಹತ್ತು ವರ್ಷಗಳ ಕಾಲ ಬೇಸಾಯದಲ್ಲೇ ಪೂರ್ತಿಯಾಗಿ ತೊಡಗಿಸಿಕೊಂಡಿದ್ದರು. ಇಂತಹ ಒಂದು ದೊಡ್ಡ ಗ್ಯಾಪಿನ ನಂತರ 1979ರಲ್ಲಿ ಎನ್ಎಸ್‌ಡಿ ಅಂದರೆ ರಾಷ್ಟ್ರೀಯ ನಾಟಕ ಶಾಲೆಗೆ ಸೇರಿಕೊಂಡರು.

‘ಇದರಿಂದಾಗಿ ನನ್ನ ಬದುಕಿನ ದಿಕ್ಕೇ ಬದಲಾಯಿತು’ ಎನ್ನುವ ಜಂಬೆಯವರು, ‘1982ಕ್ಕೆ ಎನ್ಎಸ್‌ಡಿ ಕೋರ್ಸ್ ಮುಗಿಸಿ ವಾಪಾಸ್ಸು ಬಂದವನು ಸುಮಾರು ಇಪ್ಪತ್ತೆರಡು ವರ್ಷಗಳ ಕಾಲ ನೀನಾಸಂನಲ್ಲಿ ತೊಡಗಿಸಿಕೊಂಡೆ. ನೀನಾಸಂನ ಆ ಸಂದರ್ಭದಲ್ಲಿ ಚಲನಚಿತ್ರಕ್ಕೆ ಸಂಬಂಧಿಸಿದ ಶಿಬಿರಗಳು ನಡೆಯುತ್ತಿದ್ದು, ಇದಕ್ಕೆ ಬೇರೆ ಬೇರೆ ಭಾಗದಿಂದ ಜನ ಬರುತ್ತಿದ್ದರು. ಪರರಾಜ್ಯದ ಆಲೋಚನೆ, ವಿಚಾರಗಳನ್ನು ಹಂಚಿಕೊಳ್ಳುವ ಮತ್ತು ವಿಸ್ತರಿಸುವ ಒಂದು ಭಾಗವಾಗಿ ಈ ರೀತಿಯ ಕಾರ್ಯಕ್ರಮಗಳು ಕೆಲಸ ಮಾಡಿದವು. 1985ರಿಂದ ’ತಿರುಗಾಟ’ ಆರಂಭವಾಯಿತು ಸಂಸ್ಕೃತಿ ಶಿಬಿರದಿಂದಾಗಿ ಬೇರೆಯವರು ಇಲ್ಲಿಗೆ ಬರುತ್ತಿದ್ದರು. ತಿರುಗಾಟದಿಂದಾಗಿ ನಾವು ಬೇರೆ ಬೇರೆ ಕಡೆಗೆ ಹೋಗುವುದು, ಅಲ್ಲಿನ ಜನರಿಗೆ ನಮ್ಮ ನಾಟಕ ತೋರಿಸುವುದು... ಹೀಗೆ ಒಂದು ರೀತಿಯಲ್ಲಿ ಇಡೀ ರಾಜ್ಯದ ಜನರ ಸಂಪರ್ಕವನ್ನು ನೀನಾಸಂ ಸಾಧಿಸಿದ್ದಿದೆಯಲ್ಲ ಅದು ನನಗೆ ತುಂಬಾ ದೊಡ್ಡ ಕೆಲಸ ಅನ್ನಿಸುತ್ತದೆ. ಸುಬ್ಬಣ್ಣನವರಲ್ಲಿ ಇಂತಹದ್ದೊಂದು ದೃಷ್ಟಿಕೋನ ಇಲ್ಲವೆಂದಿದ್ದರೆ ನೀನಾಸಂ ಬೇರೆಲ್ಲ ಸಾಂಸ್ಕೃತಿಕ ಸಂಸ್ಥೆಗಳಂತೆಯೇ ಉಳಿದುಬಿಡುತ್ತಿತ್ತು. ಸುಬ್ಬಣ್ಣನವರು ಮಾಡಿದ ಈ ಸಾಧನೆ ನನಗೆ ಇವತ್ತಿಗೂ ಒಂದು ವಿಸ್ಮಯವಾಗಿಯೇ ಕಾಣುತ್ತದೆ’ ಎನ್ನುತ್ತಲೇ ನೀನಾಸಂ ತನ್ನ ಅರಿವು ವಿಸ್ತರಿಸಿದ ಜಾಗ ಎಂದು ಹೇಳುವುದನ್ನೂ ಜಂಬೆಯವರು ಮರೆಯುವುದಿಲ್ಲ. 

‘ಈ ’ಟೀಚಿಂಗ್’ ಎನ್ನುವುದು ನನ್ನ ದೃಷ್ಟಿಯಲ್ಲಿ ಬಹಳ ಕೆಟ್ಟ ಶಬ್ದ. ‘ನಾನು ನಿನಗೆ ಕಲಿಸುತ್ತೇನೆ’ ಅನ್ನೋದೇ ಒಂದು ಅಹಂಕಾರ. ಯಾರೂ ಯಾರಿಗೂ ಕಲಿಸಲಿಕ್ಕೆ ಆಗುವುದಿಲ್ಲ. ಆದರೆ ಎಲ್ಲರೂ ಕಲಿಯಲಿಕ್ಕೆ ಸಾಧ್ಯವಿದೆ. ನಾವು ಮಕ್ಕಳ ಜೊತೆಯಲ್ಲಿ, ಮಕ್ಕಳು ನಮ್ಮ ಜೊತೆಯಲ್ಲಿ ಹೀಗೆ ಇಬ್ಬರೂ ಕಲಿಯುತ್ತಾ ಹೋಗುತ್ತೇವೆ. ಆ ಕಲಿಯುವ ಸಂದರ್ಭದಲ್ಲಿ ನಾವು ನಮ್ಮ ಎತ್ತರದಿಂದ ಸ್ವಲ್ಪ ಕೆಳಗೆ ಇಳಿಯ ಬೇಕಾಗುತ್ತದೆ. ಅಂದರೆ ನಮ್ಮ ಅಹಂಕಾರವನ್ನು ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ. ಮಕ್ಕಳ ಮಟ್ಟಕ್ಕೆ ಬಂದು ಅವರನ್ನು ಮೇಲೆತ್ತಬೇಕಾಗುತ್ತದೆ. ಈ ಪ್ರಕ್ರಿಯೆ ಆಗಬೇಕಾದದ್ದು ಬಹಳ ಮುಖ್ಯ. ಅದನ್ನು ನಾವು ಇದರ ಮೂಲಕ ಸಾಧಿಸಲು ಹೊರಟಿದ್ದೇವೆ’

‘ಮೂರು ವರ್ಷ ಎನ್ಎಸ್‌ಡಿಯಲ್ಲಿ ಏನು ಕಲಿತೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಹೊರಗಡೆ ಕೆಲಸ ಮಾಡು ಮಾಡುತ್ತಾ ಕಲಿತಿದ್ದು ಇದೆಯಲ್ಲ ಅದು ತುಂಬಾ ಮುಖ್ಯವಾದದ್ದು. ಈ ಕಲಿಕೆ ಅನ್ನೋದು, ನಾವು ಯಾರ ಯಾರ ಜೊತೆ ಕೆಲಸ ಮಾಡುತ್ತೇವೋ ಅವರಿಗೆ ಕಲಿಸುತ್ತೇವೆ ಎನ್ನುವುದಕ್ಕಿಂತ ಅವರಿಂದ ನಾವು ಕಲಿಯುತ್ತೇವೆ ಎನ್ನುವುದು ನನ್ನ ನಂಬಿಕೆ’ ಎನ್ನುತ್ತಾರೆ ಜಂಬೆ. ಪುಟ್ಟದೊಂದು ವಿಷಾದದೊಂದಿಗೆ ನೀನಾಸಂನ್ನು ಬಿಡಬೇಕಾಗಿ ಬಂದಿದ್ದರ ಬಗ್ಗೆ ಈಗಲೂ ಬೇಸರವಾಗುವ ಇವರನ್ನು 2004ರಲ್ಲಿ ರಂಗಾಯಣ ತನ್ನಲ್ಲಿಗೆ ಕರೆಸಿಕೊಂಡಿತು. ನಾಲ್ಕು ವರ್ಷ ಇಲ್ಲಿ ಕೆಲಸ ಮಾಡಿ ಮುಗಿಸುತ್ತಿದ್ದಂತೆ ಕರೆ ಬಂದಿದ್ದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿಗಳಿಂದ!

‘2008ರಲ್ಲಿ ರಂಗಭೂಮಿಗೆ  ಸಂಬಂಧಿಸಿದಂತೆ ಒಂದು ಸ್ಕೂಲು ಮಾಡಬೇಕು, ಬನ್ನಿ ಅಂತ ಸ್ವಾಮೀಜಿಗಳೇ ಕರೆದರು. ವೈಯಕ್ತಿಕವಾಗಿ ನನಗೆ ಮಠಗಳು, ಸ್ವಾಮಿಗಳು ಅಂದ್ರೆ ಅಷ್ಟಕ್ಕಷ್ಟೇ. ಇದನ್ನು ನಾನು ಸ್ವಾಮೀಜಿಗಳಿಗೆ ನೇರವಾಗಿಯೇ ಹೇಳಿದ್ದೆ ಕೂಡಾ. ಜೊತೆಗೆ ರಂಗಭೂಮಿ ವಿಚಾರವಾಗಿ ಮಾತ್ರ ನಾನು ಇಲ್ಲಿ ಕೆಲಸ ಮಾಡಬಹುದೇ ಹೊರತು, ಮಠದ ವಿಚಾರವಾಗಿ ನನ್ನಲ್ಲಿ ಯಾವುದೇ ಆಸಕ್ತಿಯಿಲ್ಲ ಎಂದು ನೇರವಾಗಿ ಹೇಳಿದ್ದೆ. ಸ್ವಾಮೀಜಿಗಳು ಒಪ್ಪಿಕೊಂಡರು. ಎರಡು ವರ್ಷ ಆ ಥಿಯೇಟರ್ ಸ್ಕೂಲ್‌ನ್ನು ಕಟ್ಟಲಿಕ್ಕೆ ಅವಕಾಶ ಮಾಡಿಕೊಟ್ಟರು. ರಂಗಭೂಮಿಗೆ ಸಂಬಂಧಿಸಿದ ಸ್ಕೂಲು ಹೇಗಿರಬೇಕು ಎಂದು ನನ್ನಲ್ಲಿ ಒಂದು ಕಲ್ಪನೆಯಿತ್ತಲ್ಲ, ಅದನ್ನು ಸಾಕಾರಗೊಳಿಸಿಕೊಳ್ಳಲಿಕ್ಕೆ ಇದು ಉತ್ತಮ ಅವಕಾಶ ನೀಡಿತು. 2008ರಲ್ಲಿ ಅಲ್ಲಿಂದ ಹೊರಡುವ ಹೊತ್ತಿಗೆ ಆ ಸ್ಕೂಲಿಗೆ ಸರ್ಕಾರದಿಂದ ಮಾನ್ಯತೆ ಸಿಕ್ಕಿತ್ತು. ಸಿಲಬಸ್ ರೆಡಿಯಾಗಿತ್ತು. ಎರಡು ಪರೀಕ್ಷೆಗಳು ಕೂಡಾ ಆಗಿದ್ದವು’ ಎಂದು ನೆನಪಿಗೆ ಜಾರುವ ಇವರು ಸಾಣೇಹಳ್ಳಿಯಲ್ಲಿ ನಡೆಯುವ ರಂಗ ಸಂಬಂಧಿ ಚಟುವಟಿಕೆಗಳ ಬಗ್ಗೆ ಅಗಾಧ ಪ್ರೀತಿಯಿಂದ ಮಾತನಾಡುತ್ತಾರೆ.

‘ಇಲ್ಲಿ ಕೆಲಸ ಒಂದು ಹಂತಕ್ಕೆ ಬರುವ ಹೊತ್ತಿಗೆ, ರಾಷ್ಟ್ರೀಯ ನಾಟಕ ಶಾಲೆಯಿಂದ ನನಗೆ ಕರೆ ಬಂತು. ನಾನು ಸ್ವಾಮಿಗಳ ಹತ್ತಿರ ಹೋಗಿ, ‘ಇಲ್ಲಿಂದ ನನ್ನನ್ನು ಬಿಟ್ಟು ಕೊಡ್ತೀರಾ?’ ಎಂದು ಕೇಳಿದೆ. ಅವರು ಸ್ವಲ್ಪ ಗಾಬರಿಯಾದರು. ಯಾಕೆ ಏನು ಸಮಸ್ಯೆ? ಎಂದವರಿಗೆ ಎನ್ಎಸ್‌ಡಿಯಿಂದ ಕರೆ ಬಂದಿದ್ದನ್ನು ತಿಳಿಸಿದೆ. ನೋಡಿ ನಿಮಗೆ ಇದರಿಂದ ಒಳ್ಳೆಯದಾಗುತ್ತದೆ ಎಂದರೆ ಹೋಗಿ, ಬಿಟ್ಟು ಕೊಡ್ತೇನೆ, ಇಲ್ಲ ಅಂದ್ರೆ ಇಲ್ಲೇ ಇರಿ ಅಂದರು. ಅದು ಬಹಳ ದೊಡ್ಡ ಮಾತು...’ ಎಂದು ಸ್ವಾಮೀಜಿಗಳನ್ನು ನೆನಪಿಸಿಕೊಳ್ಳುವ ಜಂಬೆಯವರಿಗೆ ಎನ್ಎಸ್‌ಡಿಯ ಹೊಸ ಕೆಲಸ, ರಂಗಭೂಮಿಯ ಬಗೆಗೆ ಇನ್ನಷ್ಟು ಹೊಸ ಹೊಳಹುಗಳನ್ನು ನೀಡಲಾರಂಭಿಸಿತು.

‘ಎನ್ಎಸ್‌ಡಿ ಕೆಲಸವೆಂದು ಬೆಂಗಳೂರಿಗೆ ಬಂದವನಿಗೆ ಮತ್ತೆ ಹೊಸತೇ ಎದುರಾಯಿತು. ಇಲ್ಲಿ ಒಂದು ಸ್ಕೂಲನ್ನು ಆರಂಭ ಮಾಡಲಿಕ್ಕೆ ಅಗತ್ಯವಾದ ಸಂಪನ್ಮೂಲ ವ್ಯಕ್ತಿಗಳನ್ನು ಹುಡುಕುವುದು ಮತ್ತು ಸಂಪನ್ಮೂಲಗಳನ್ನು ಕ್ರೋಢೀಕರಿಸುವಂತಹ ಕೆಲಸವನ್ನು ಎನ್ಎಸ್‌ಡಿ ನನಗೆ ನೀಡಿತು. ಮೊದಲಿಗೆ ಆ್ಯಕ್ಟಿಂಗ್ ಬಗ್ಗೆ ಒಂದು ಕೋರ್ಸ್, ನಂತರ ತಂತ್ರಜ್ಞರಿಗೆ  ಸಂಬಂಧಿಸಿದ ಒಂದು ಕೋರ್ಸ್ ನಡೆಯಿತು. ಇವೆಲ್ಲದರ ನಂತರ ಆರಂಭವಾಗಿದ್ದು, ಶಿಕ್ಷಣದಲ್ಲಿ ರಂಗಭೂಮಿ ಒಂದಾಗುವ ‘ಥಿಯೇಟರ್ ಇನ್ ಎಜುಕೇಶನ್’ ಎನ್ನುವ ವಿಷಯ. ಇದು ನನಗೆ ಬಹಳ ಕುತೂಹಲದ ವಿಷಯವಾಗಿತ್ತು. ಒಂದು ಯೋಜನೆಯನ್ನು ತಯಾರಿಸಿಕೊಂಡು ಕೆಲಸ ಶುರು ಮಾಡಿದಾಗ ಬಹಳ ಆಸಕ್ತಿ ಬಂತು’ ಎನ್ನುವ ಇವರು, ‘ಇಲ್ಲಿ ನಾವು ಶಿಕ್ಷಣಕ್ಕೆ ಪೂರಕವಾಗಿ ರಂಗಭೂಮಿ ಅಂಶಗಳನ್ನು ಬಳಸಿಕೊಂಡು ಮಕ್ಕಳ ಕಲಿಕೆಯನ್ನು ಹೇಗೆ ಇನ್ನಷ್ಟು ಹೆಚ್ಚಿಸಬಹುದು, ಆಸಕ್ತಿದಾಯಕ ಮಾಡಬಹುದು ಎನ್ನುವುದರ ಹುಡುಕಾಟದಲ್ಲಿದ್ದೇವೆ’ ಎನ್ನುತ್ತಲೇ, ರಂಗಾಯಣದಲ್ಲಿದ್ದಾಗ ನಡೆದ ಇಂತಹದ್ದೇ ಒಂದು ಸ್ವೀಡಿಶ್ ಪ್ರಾಜೆಕ್ಟನ್ನು ನೆನಪಿಸಿಕೊಂಡು, ಈ ವಿಷಯದಲ್ಲಿ ಅದು ನನ್ನ ‘ಮೊದಲ ಮೆಟ್ಟಿಲು’ ಎಂದು ಹೇಳುತ್ತಾರೆ.

‘ನಾಟಕ ಮಾಡುವವರಿಗೆ ರಂಗಭೂಮಿ ಗೊತ್ತಿರುತ್ತದೆ. ಶಿಕ್ಷಣ ವ್ಯವಸ್ಥೆಯ ಆಳ ಗೊತ್ತಿರುವುದಿಲ್ಲ. ಅದೇ ರೀತಿ ಅಲ್ಲಿರುವವರಿಗೆ ರಂಗಭೂಮಿ ಗೊತ್ತಿರುವುದಿಲ್ಲ. ಹಾಗಾಗಿ ಇವೆರಡನ್ನೂ ಸೇರಿಸಿದಾಗ ಏನಾದರೂ ಪ್ರಯೋಜನ ಆಗಬಹುದು ಎನ್ನುವ ಉದ್ದೇಶ ಇಲ್ಲಿದೆ. ನಮ್ಮಲ್ಲಿ ಗೊಂಬೆಯಾಟಗಳೇ ಬೇಕಾದಷ್ಟು ಇವೆ. ಅದನ್ನೇ ಇಟ್ಟುಕೊಂಡು, ಅದರ ಮೂಲಕ ಪಠ್ಯವನ್ನು ಮಕ್ಕಳಿಗೆ ಹೇಗೆ ಹೇಳಲಿಕ್ಕೆ ಸಾಧ್ಯವಿದೆ ಎನ್ನುವ ಹುಡುಕಾಟವೂ ನಡೆದಿದೆ. ಇದರಲ್ಲಿ ನಾವು ವೇಸ್ಟ್ ಆಗುವಂತಹ ವಸ್ತುಗಳನ್ನೇ ಬಳಸಿಕೊಳ್ಳುತ್ತಿದ್ದೇವೆ. ಇಲ್ಲಿ ಕೆಲಸ ಕಂಪ್ಲೀಟಾದ ನಂತರ ಕರ್ನಾಟಕದ ಬೇರೆ ಬೇರೆ ಶಾಲೆಗಳಿಗೆ ಹೋಗಿ ಎರಡು ದಿನ ಒಂದೊಂದು ಸ್ಕೂಲಿನಲ್ಲಿ ಇದ್ದು, ನಮ್ಮ ತಂಡ ಸಂಪಾದನೆ ಮಾಡಿರುವ ಜ್ಞಾನವನ್ನು ಮಕ್ಕಳು ಮತ್ತು ಶಿಕ್ಷಕರೊಂದಿಗೆ ಮುಖಾಮುಖಿ ಮಾಡುವುದು ಈ ಪ್ರಾಜೆಕ್ಟಿನ ಮುಖ್ಯಉದ್ದೇಶ’ ಎನ್ನುತ್ತಾರೆ ಜಂಬೆ. ಹಿಂದಿನ ಬಾರಿ ಮಾಗಡಿಯಿಂದ ಗುಲ್ಬರ್ಗಾದವರೆಗೆ ಕ್ಷೇತ್ರಾಧ್ಯಯನ ಪ್ರವಾಸ ಮಾಡಿ, ಸಾಕಷ್ಟು ಟೀಚರ್ರುಗಳು ಅದರ ಪ್ರಯೋಜನ ಪಡೆದುಕೊಂಡಿದ್ದು ಮತ್ತು ಮೆಚ್ಚಿಕೊಂಡಿದ್ದನ್ನೂ ಖುಷಿಯಿಂದ ಹೇಳಿಕೊಳ್ಳುತ್ತಾರೆ.

‘ಈ ’ಟೀಚಿಂಗ್’ ಎನ್ನುವುದು ನನ್ನ ದೃಷ್ಟಿಯಲ್ಲಿ ಬಹಳ ಕೆಟ್ಟ ಶಬ್ದ. ‘ನಾನು ನಿನಗೆ ಕಲಿಸುತ್ತೇನೆ’ ಅನ್ನೋದೇ ಒಂದು ಅಹಂಕಾರ. ಯಾರೂ ಯಾರಿಗೂ ಕಲಿಸಲಿಕ್ಕೆ ಆಗುವುದಿಲ್ಲ. ಆದರೆ ಎಲ್ಲರೂ ಕಲಿಯಲಿಕ್ಕೆ ಸಾಧ್ಯವಿದೆ. ನಾವು ಮಕ್ಕಳ ಜೊತೆಯಲ್ಲಿ, ಮಕ್ಕಳು ನಮ್ಮ ಜೊತೆಯಲ್ಲಿ ಹೀಗೆ ಇಬ್ಬರೂ ಕಲಿಯುತ್ತಾ ಹೋಗುತ್ತೇವೆ. ಆ ಕಲಿಯುವ ಸಂದರ್ಭದಲ್ಲಿ ನಾವು ನಮ್ಮ ಎತ್ತರದಿಂದ ಸ್ವಲ್ಪ ಕೆಳಗೆ ಇಳಿಯ ಬೇಕಾಗುತ್ತದೆ. ಅಂದರೆ ನಮ್ಮ ಅಹಂಕಾರವನ್ನು ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ. ಮಕ್ಕಳ ಮಟ್ಟಕ್ಕೆ ಬಂದು ಅವರನ್ನು ಮೇಲೆತ್ತಬೇಕಾಗುತ್ತದೆ. ಈ ಪ್ರಕ್ರಿಯೆ ಆಗಬೇಕಾದದ್ದು ಬಹಳ ಮುಖ್ಯ. ಅದನ್ನು ನಾವು ಇದರ ಮೂಲಕ ಸಾಧಿಸಲು ಹೊರಟಿದ್ದೇವೆ’ ಎನ್ನುವ ಜಂಬೆಯವರು, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿನ ದೋಷಗಳ ಬಗ್ಗೆಯೂ ಬೇಸರವಾಗುತ್ತಾರೆ. 

‘ಈ ನಡುವೆ ಒಂದು ದೋಷವಾಗಿದೆ. ನಮ್ಮ ಶಿಕ್ಷಣದಲ್ಲಿ ಕಾಯಕ ಅನ್ನೋದು ಕಣ್ಮರೆಯಾಗಿದೆ. ಶಾಲೆಯಲ್ಲಿ ಕಾಯಕ ಇದ್ದಿದ್ದರೆ ಮಕ್ಕಳಿಗೆ ಮಣ್ಣಿನ ಜೊತೆ ಸಂಬಂಧ ಇರುತ್ತಿತ್ತು. ಕೈಬೆರಳುಗಳು ಮಣ್ಣಿನೊಂದಿಗೆ ಆಡುತ್ತಿದ್ದವು. ಏನೋ ಕೆಲಸ ಮಾಡುತ್ತಿದ್ದರು. ಹಳ್ಳಿಯ ಮಕ್ಕಳು ಯಾಕೆ ಹಾಗಿರುತ್ತಿದ್ದರು ಎಂದರೆ ಅವರು ಮಣ್ಣಿನ ಜೊತೆ ಸಂಬಂಧ ಇಟ್ಟುಕೊಳ್ಳುತ್ತಿದ್ದರು. ನಗರಗಳ ಮಕ್ಕಳಿಗೆ ಮಣ್ಣಿನ ಜೊತೆ ಸಂಬಂಧವೇ ಮರೆತು ಹೋಗಿರುತ್ತದೆ. ಮಣ್ಣು ಮುಟ್ಟಿದರೆ ಬಟ್ಟೆ ಎಲ್ಲಿ ಕೊಳೆಯಾಗಿ ಬಿಡುತ್ತದೋ ಎನ್ನುವ ಭಯ. ಹೀಗೆ ನಾವು ಮಕ್ಕಳಿಗೆ ಏನನ್ನು ಕಲಿಸಬಾರದೋ ಅದನ್ನು ಕಲಿಸಲು ಪ್ರಯತ್ನ ಪಡುತ್ತಿದ್ದೇವೆ. ಅವರು ಏನನ್ನು ಕಲಿಯಬೇಕೋ ಅದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ರಂಗಭಾಷೆ ಈ ಥರದಲ್ಲಿ ನಮ್ಮ ಶಿಕ್ಷಣದಲ್ಲಿ ಕೆಲಸ ಮಾಡಬೇಕು, ಅದು ಬಹಳ ಮುಖ್ಯವಾದದ್ದು’ ಎನ್ನುತ್ತಾರೆ ಜಂಬೆ. ಮಕ್ಕಳನ್ನೂ ನಾವು ವೇಸ್ಟ್ ವಸ್ತುಗಳಿಂದ ಪಠ್ಯಕ್ಕೆ ಸಂಬಂಧಿಸಿದ ಗೊಂಬೆ ಇತ್ಯಾದಿ ಮಾಡಲಿಕ್ಕೆ ಬಿಡುವುದರಿಂದ ಅವರ ಕೈಗಳೂ ಚುರುಕಾಗುತ್ತವೆ ಎನ್ನುತ್ತಲೇ, ಅಲಂಕಾರಿಕ ರಂಗಭೂಮಿಗಿಂತ ಈಗ ನಾವು ಮಾಡುತ್ತಿರುವ ಕೆಲಸ ಇದೆಯಲ್ಲ ಇದು ಅಗತ್ಯ ಮತ್ತು ಇವತ್ತಿನ ತುರ್ತು ಕೂಡಾ ಎನ್ನುತ್ತಾರೆ. 

ರಾಜ್ಯದಲ್ಲಿ ಬೇಕಾದಷ್ಟು ರಂಗಶಾಲೆಗಳಿದ್ದರೂ ಒಬ್ಬ ಒಳ್ಳೆಯ ನಟ, ತಂತ್ರಜ್ಞ ಹೊರಬಾರದಿರುವುದರ ಬಗ್ಗೆಯೂ  ಬೇಸರಿಸಿಕೊಳ್ಳುವ ಇವರು, ‘ಬೇರೆ ಯಾವುದೇ ರಾಜ್ಯದಲ್ಲಿ ಇಲ್ಲದಷ್ಟು ರಂಗಶಾಲೆಗಳು ಕರ್ನಾಟಕದಲ್ಲಿವೆ. ಸರಿ, ಈ ರಂಗಶಾಲೆಗಳಿಂದ ಇಲ್ಲಿಯವರೆಗೆ ಒಬ್ಬ ಸರಿಯಾದ ನಟ ಬಂದಿದ್ದಾನಾ? ಇಲ್ಲ. ತಂತ್ರಜ್ಞ ಬಂದಿಲ್ಲ. ಇವತ್ತು ಲೈಟಿಂಗಿನ ಬಗ್ಗೆ ಒಂದು ಕ್ಲಾಸ್ ಮಾಡಬೇಕು ಎಂದರೆ ನಮ್ಮಲ್ಲಿ ಜನವಿಲ್ಲ. ಈ ನಿಟ್ಟಿನಲ್ಲಿ ನೀನಾಸಂ ಸೇರಿದಂತೆ ಯಾವ ರಂಗಶಾಲೆಗಳೂ ಪ್ರಯತ್ನ ಮಾಡಿಲ್ಲ’ ಎನ್ನುತ್ತಲೇ, ‘ಈಗ ರಂಗಭೂಮಿಯ ಬಗ್ಗೆ ಪಾಠ ಮಾಡುವಂತಹವರು ಎಲ್ಲೋ ಕೆಲವರಿದ್ದಾರೆ. ಇನ್ನೂ ಒಂದು ವಿಷಯ, ಒಳ್ಳೆಯ ನಿರ್ದೇಶಕರು ಅಧ್ಯಾಪಕರಾಗಲಿಕ್ಕೆ ಸಾಧ್ಯವಿಲ್ಲ. ರಂಗಭೂಮಿಯಲ್ಲಿ ಒಳಹೊಳಹುಗಳನ್ನು ಕೊಡುವಂತಹ, ಬೇರೆ ಬೇರೆ ಸಾಧ್ಯತೆಗಳನ್ನು ತೆರೆದು ಕೊಡುವಂತಹ ಅಧ್ಯಾಪಕರು ಬೇಕು. ಪ್ರಸನ್ನ, ರಘುನಂದನ್ ಸೇರಿದಂತೆ ಕೆಲವರು ಮಾತ್ರವೇ ನಮ್ಮಲ್ಲಿದ್ದಾರೆ ಬಿಟ್ಟರೆ ಬೇರೆ ಯಾರೂ ಇಲ್ಲ’ ಎಂದು ಬೇಸರವಾಗುತ್ತಾರೆ. ನಮ್ಮ ದೇಶದಲ್ಲಿ ರಂಗಶಿಕ್ಷಣವನ್ನು ಬೆಳೆಸುವುದು ಎಷ್ಟು ಮುಖ್ಯಾನೋ ಶಿಕ್ಷಕರನ್ನು ಬೆಳೆಸೋದು ಕೂಡಾ ಅಷ್ಟೇ ಮುಖ್ಯ. ರಂಗಶಿಕ್ಷಣದಲ್ಲಿ ಕೊಡುಕೊಳ್ಳುವಿಕೆ ಆಗಬೇಕು. ಅದು ಆಗುತ್ತಿಲ್ಲ. ಜೊತೆಗೆ ರಾಷ್ಟ್ರೀಯ ನಾಟಕ ಶಾಲೆ ದೆಹಲಿಯಲ್ಲಿ ಇದ್ದರೆ ಸಾಕಾಗೋದಿಲ್ಲ. ಅದು ಪ್ರಾದೇಶಿಕ ಮಟ್ಟದಲ್ಲೂ ಕೇಂದ್ರ ಮಾಡಿಕೊಂಡು ಕೆಲಸ ಮಾಡಿದರೆ ಆಗ ರಂಗಭೂಮಿ ಇನ್ನಷ್ಟು ಬೆಳೆಯಬಹುದು ಎಂದು ರಂಗಭೂಮಿಯ ಬಗೆಗಿನ ತಮ್ಮ ದೃಷ್ಟಿಕೋನವನ್ನು ತೆರೆದಿಡುತ್ತಾರೆ.

ಇಂದಿನ ಯುವಜನರು ಮತ್ತು ರಂಗಭೂಮಿಯ ನಡುವಿನ ನಂಟು ಹೇಗಿದೆ ಎಂದರೆ, ‘ನಮ್ಮ ಯುವಜನರಲ್ಲಿ ಬಹಳಷ್ಟು ಜನ ನಾಟಕ ಓದಿರುವುದಿಲ್ಲ, ನೋಡಿರುವುದಿಲ್ಲ. ಯಾವುದಾದರೂ ಸಾಹಿತ್ಯ ಕೃತಿ ಓದಿದ್ದೀಯಾ ಎಂದರೆ ಅದೂ ಇಲ್ಲ. ಆದರೂ ಖುಷಿ ಪಡುವ ವಿಚಾರ ಎಂದರೆ, ಅವರಲ್ಲಿ ಕಲಿಯಬೇಕು ಎನ್ನುವ ಅದಮ್ಯ ಉತ್ಸಾಹವಿದೆ. ಹಾಗೆಂದು ಅವರನ್ನು ನಾವು ಬೈಯುವ ಹಾಗಿಲ್ಲ. ಯಾಕೆಂದರೆ ಇದಕ್ಕೆ ಕಾರಣರಾದವರು ನಾವೇ! ನಾವು ಅವರಿಗೆ ಏನೂ ಕೊಟ್ಟಿಲ್ಲ ಎನ್ನುವ ಸತ್ಯವನ್ನು ಒಪ್ಪಿಕೊಳ್ಳಬೇಕಿದೆ. ಮೊದಲೆಲ್ಲ ಹವ್ಯಾಸಿ ನಾಟಕ ಕಲಾವಿದರ ತಂಡಗಳಿಂದಾಗಿ ಒಂದಿಷ್ಟು ಜನರಿಗೆ ರಂಗಭೂಮಿಯ ಪರಿಚಯವಾಗಿರುತ್ತಿತ್ತು. ಆದರೆ ಇವತ್ತು ಅವು ಕಣ್ಮರೆಯಾಗಿವೆ. ಹೀಗೆ ಕೊಡುವವರೇ ಇಲ್ಲ. ಅಂದಮೇಲೆ ನಾವು ಯುವಜನರಿಗೆ ಬೈದು ಪ್ರಯೋಜನವೇನು?’ ಎನ್ನುತ್ತಲೇ, ಇಲ್ಲಿಗೆ ಬಂದವರನ್ನು ನಾವು ಮೋಟಿವೇಟ್ ಮಾಡಬೇಕು ಎನ್ನುತ್ತಾರೆ. ಮುಖ್ಯವಾಗಿ ಇಂದಿನ ಯುವಜನರಲ್ಲಿ ಕಾಣುವ ಪರಿಶ್ರಮ ಮತ್ತು ಶ್ರದ್ಧೆಯನ್ನು ಮನಸ್ಸಿನಾಳದಿಂದ ಮೆಚ್ಚಿಕೊಳ್ಳುತ್ತಾರೆ. 

‘ಇವತ್ತು ಏನಾಗಿದೆ ಎಂದರೆ ಒಂದು ರೀತಿಯಲ್ಲಿ ರಿಯಾಲಿಟಿ ಶೋಗಳೇ ನಮ್ಮ ಸಂಸ್ಕೃತಿ ಎನ್ನುವ ಹಾಗಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕೂ, ಮನೋರಂಜನಾ ಕಾರ್ಯಕ್ರಮಕ್ಕೂ ಏನು ವ್ಯತ್ಯಾಸ ಎನ್ನುವುದು ಗೊತ್ತಿಲ್ಲ. ಮನೋರಂಜನೆ ಆ ಕ್ಷಣದಲ್ಲಿ ಒಂದಿಷ್ಟು ರಂಜನೆ ಕೊಟ್ಟು ಮಾಯವಾಗುತ್ತದೆ. ಆದರೆ ಸಾಂಸ್ಕೃತಿಕ ಕಾರ್ಯಕ್ರಮ ನಮ್ಮ ಸಂಸ್ಕೃತಿಯ ಬಗೆಗಿನ ನಮ್ಮ ಆಲೋಚನೆಯನ್ನು ವಿಸ್ತರಿಸುತ್ತದೆ. ಇಂದಿನವರಿಗೆ ಇವೆರಡರ ನಡುವೆ ವ್ಯತ್ಯಾಸ ಗೊತ್ತಾಗುತ್ತಿಲ್ಲ. ಆದ್ದರಿಂದಲೇ ಮಕ್ಕಳಿಗೆ ರಿಯಾಲಿಟಿ ಶೋಗಳೇ ಹೆಚ್ಚು ಮುಖ್ಯವೆನ್ನಿಸುತ್ತಿವೆ. ಅಂದಮೇಲೆ ಈ ಮಕ್ಕಳನ್ನು ನಾವೇಕೆ ಬೈಯಬೇಕು?’ಎನ್ನುತ್ತಲೇ ಮಾತು ಮುಗಿಸಿದ ಜಂಬೆಯವರು, ಪ್ರತೀದಿನ ಸಂಜೆ ಎನ್ಎಸ್‌ಡಿಗೆ ಆಟಿಕೆಗಳೊಂದಿಗೆ ಪಠ್ಯವನ್ನು ಕಲಿಯಲು ಬರುವ ಮಕ್ಕಳೊಂದಿಗೆ ಆಟ - ಪಾಠದಲ್ಲಿ ತೊಡಗಿಸಿಕೊಂಡರು.


ಕಾಮೆಂಟ್‌ಗಳಿಲ್ಲ