ಬೆಂಗಳೂರಿನಲ್ಲಿ ತೀರ್ಥಹಳ್ಳಿ ಮೂಲದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಪ್ರತಿಮಾ ಕೊಲೆ
ಬೆಂಗಳೂರು : ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದ ತೀರ್ಥಹಳ್ಳಿ ಮೂಲದ ಪ್ರತಿಮಾ (37) ಅವರನ್ನು ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಕಲ್ಲಸಂದ್ರದ ಗೋಕುಲ್ ಅಪಾರ್ಟ್‌ಮೆಂಟಿನಲ್ಲಿ ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ.
ಶನಿವಾರ ರಾತ್ರಿ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದ್ದು, ಭಾನುವಾರ ಬೆಳಿಗ್ಗೆ ಕೃತ್ಯ ಬೆಳಕಿಗೆ ಬಂದಿದೆ. ಶನಿವಾರ ರಾತ್ರಿ 8 ಗಂಟೆಗೆ ಪ್ರತಿಮಾ ಅವರನ್ನು ಕಚೇರಿಯಿಂದ ಮನೆಗೆ ಅವರ ಕಾರಿನ ಚಾಲಕ ಡ್ರಾಪ್ ಮಾಡಿ ತೆರಳಿದ್ದಾನೆ. ರಾತ್ರಿ ಪ್ರತಿಮಾ ಅವರ ಮೊಬೈಲಿಗೆ ಅವರ ಅಣ್ಣ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಿರಲಿಲ್ಲ. ಆದ್ದರಿಂದ ಅನುಮಾನಗೊಂಡ ಅಣ್ಣ ಬೆಳಿಗ್ಗೆ ಮನೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಪ್ರತಿಮಾ ಅವರು ಮೂಲತಃ ತೀರ್ಥಹಳ್ಳಿ ತಾಲ್ಲೂಕಿನ ಕುಂಡ್ಲೂರು ಪಕ್ಕದ ಕಲ್ಕಟ್ಟೆಯವರಾಗಿದ್ದು, ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದರು. ಆನಂತರ 2003-2005ನೇ ಸಾಲಿನಲ್ಲಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಯಲದಿಂದ ಗಣಿ ಮತ್ತು ಭೂ ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಅಧ್ಯಯನ ನಡೆಸಿದ್ದರು. ಓದು ಮುಗಿಯುತ್ತಿದ್ದಂತೆ ಸರ್ಕಾರಿ ಕೆಲಸ ಪಡೆದ ಇವರು ಮೊದಲು ರಾಮನಗರದಲ್ಲಿ ಕೆಲಸ ನಿರ್ವಹಿಸಿ, ಬಡ್ತಿ ಪಡೆದು ಬೆಂಗಳೂರಿಗೆ ವರ್ಗವಾಗಿದ್ದರು. ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಒಂಟಿಯಾಗಿ ವಾಸವಿದ್ದ ಪ್ರತಿಮಾ ಅವರ ಗಂಡ ಮತ್ತು ಮಗ ತೀರ್ಥಹಳ್ಳಿಯಲ್ಲೇ ವಾಸವಿದ್ದಾರೆ. ಪತಿ ಕೃಷಿ ಕೆಲಸವನ್ನು ಮಾಡುತ್ತಿದ್ದಾರೆ. ಇಂದಾವರದ ತುಂಗಾ ಕಾಲೇಜಿನ ಸಮೀಪ ಕಳೆದ ಹದಿನೈದು ದಿನಗಳ ಹಿಂದೆ ತಮ್ಮ ಹೊಸ ಮನೆಯ ಗೃಹ ಪ್ರವೇಶದಲ್ಲಿ ಭಾಗಿಯಾಗಿದ್ದ ಪ್ರತಿಮಾ ಅವರು, ಬೆಂಗಳೂರಿಗೆ ಬಂದಿದ್ದರು. ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ಒಂಟಿಯಾಗಿ ವಾಸವಿದ್ದ ಪ್ರತಿಮಾ ಅವರಿದ್ದ ಅಪಾರ್ಟ್‌ಮೆಂಟಿಗೆ ಬಿಗಿ ಭದ್ರತೆ ಇದೆ. ಹೀಗಿರುವಾಗ ಇವರ ಕೊಲೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಪರಿಚಿತರೇ ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಪ್ರತಿಮಾ ಅವರ ಕೌಟುಂಬಿಕ ಜೀವನದಲ್ಲಿ ಅನ್ಯೋನ್ಯತೆ ಇಲ್ಲ ಎನ್ನುವ ಸುದ್ದಿ ಇದ್ದು, ಈ ವಿಷಯವಾಗಿ ಪ್ರತಿಕ್ರಿಯಿಸಿರುವ ಪ್ರತಿಮಾ ಅವರ ಅತ್ತೆ, ನಮ್ಮ ಕುಟುಂಬ ಚೆನ್ನಾಗಿಯೇ ಇತ್ತು. ಮಾಧ್ಯಮಗಳಲ್ಲಿ ಬರುತ್ತಿರುವಂತೆ ಪ್ರತಿಮಾ ಇರಲಿಲ್ಲ ಎಂದಿದ್ದಾರೆ.
ಈ ನಡುವೆ ಪ್ರತಿಮಾ ಅವರು ಇಲಾಖೆಯಲ್ಲಿ ಪ್ರಾಮಾಣಿಕ ಅಧಿಕಾರಿ ಎಂದು ಹೆಸರು ಗಳಿಸಿದ್ದು, ಅವರ ಪ್ರಾಮಾಣಿಕತೆ ಹಲವರ ಕೆಲಸಕ್ಕೆ ಅಡ್ಡಿಯನ್ನುಂಟು ಮಾಡುತ್ತಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಪ್ರತಿಮಾ ಅವರ ಪ್ರಾಮಾಣಿಕ ಕೆಲಸದ ಬಗ್ಗೆ ಸಹೋದ್ಯೋಗಿಗಳು ಮೆಚ್ಚುಗೆಯಿಂದ ಮಾತನಾಡುತ್ತಿದ್ದಾರೆ.
ಕೊಲೆಯಾಗಿರುವ ಪ್ರತಿಮಾ ಅವರ ಮನೆಯಲ್ಲಿ ಯಾವುದೇ ವಸ್ತುಗಳು ಕಾಣೆಯಾಗಿಲ್ಲ ಎನ್ನಲಾಗಿದ್ದು, ಇದು ಕೊಲೆಗೆ ಬೇರೆಯದೇ ಉದ್ದೇಶ ಇರುವುದನ್ನು ಸ್ಪಷ್ಟ ಪಡಿಸುತ್ತಿದೆ. ಕೃತ್ಯ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪೊಲೀಸರ ತನಿಖೆಯ ನಂತರ ಕೊಲೆಯ ಹಿಂದಿರುವ ಕಾರಣವೇನು ಎನ್ನುವುದು ತಿಳಿದು ಬರಬೇಕಾಗಿದೆ.
ಕಾಮೆಂಟ್‌ಗಳಿಲ್ಲ