ಕರಿಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮನೆ ಪಕ್ಕದ ತೋಟಕ್ಕೆ ಹೋದ ವೃದ್ಧೆ ನಾಪತ್ತೆ! ಒಂದು ದಿನ ಕಳೆದರೂ ಸಿಕ್ಕದ ಸುಳಿವು
ಹೊಸನಗರ: ಲವಲವಿಕೆಯಿಂದ ಓಡಾಡಿಕೊಂಡಿದ್ದ 85 ವರ್ಷದ ವೃದ್ಧೆಯೊಬ್ಬರು, ಮನೆ ಪಕ್ಕದ ತೋಟಕ್ಕೆಂದು ಹೋಗಿ ನಾಪತ್ತೆಯಾಗಿರುವ ಘಟನೆ ತಾಲ್ಲೂಕಿನ ಕರಿಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಾದಗಲ್ ಗ್ರಾಮದಲ್ಲಿ ನಡೆದಿದೆ. ಸಾದಗಲ್ ಗ್ರಾಮದ ಚನ್ನಪ್ಪಗೌಡರ ಪತ್ನಿ ಶಾರದಮ್ಮ ನಾಪತ್ತೆಯಾಗಿರುವ ವೃದ್ಧೆ.
ನಿನ್ನೆ ಅಂದರೆ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ತೋಟಕ್ಕೆ ದನ ಬಂದಿದ್ದಾವೇನೋ, ಒಮ್ಮೆ ನೋಡಿಕೊಂಡು ಬರುತ್ತೇನೆ ಎಂದು ಮನೆಯ ಪಕ್ಕದಲ್ಲೇ ಇರುವ ತೋಟಕ್ಕೆ ಹೋದ ಶಾರದಮ್ಮ ಕೆಲ ಸಮಯ ಕಳೆದರೂ ಮನೆಗೆ ವಾಪಾಸ್ಸು ಬರಲಿಲ್ಲ. ಆತಂಕಗೊಂಡ ಮನೆಯವರು ಹತ್ತಿರದ ತೋಟ, ಗದ್ದೆ ಜಮೀನಿನಲ್ಲೆಲ್ಲ ಹುಡುಕಾಡಿದ್ದಾರೆ. ಆದರೂ ಶಾರದಮ್ಮನವರ ಸುಳಿವು ಸಿಕ್ಕಿಲ್ಲ.
ರಾತ್ರಿ ಕಳೆದು ಬೆಳಗಾದರೂ ಮನೆಗೆ ಹಿಂದಿರುಗದ ಶಾರದಮ್ಮನವರ ವಿಷಯ ತಿಳಿದ ಗ್ರಾಮದ ನೂರಾರು ಜನರು ಇಂದು ಬೆಳಿಗ್ಗೆಯಿಂದ ಮನೆಹತ್ತಿರದ ಚಿಕ್ಕಟ್ಟಬ್ಬಿ, ಸಾದಗಲ್, ಕೆರೆ, ಬಾವಿ, ಹಳ್ಳಕೊಳ್ಳಗಳನ್ನು ಬಿಡದೇ ಹುಡುಕಾಡುತ್ತಿದ್ದಾರಾದರೂ, ವೃದ್ಧೆಯ ಸುಳಿವು ಮಾತ್ರ ಸಿಕ್ಕಿಲ್ಲ.
ಈ ನಡುವೆ ವೃದ್ಧೆಯೊಂದಿಗೆ ಮನೆಯಿಂದ ನಾಪತ್ತೆಯಾಗಿದ್ದ ನಾಯಿ ರಾತ್ರಿಯಿಡೀ ಕಾಣಿಸಿರಲಿಲ್ಲ. ಆದರೆ ಇಂದು ಬೆಳಿಗ್ಗೆ ಇದ್ದಕ್ಕಿದ್ದ ಹಾಗೇ ಮನೆಯ ಎದುರು ನಾಯಿ ಕಾಣಿಸಿಕೊಂಡಿದೆ.
ಸ್ಥಳೀಯರು ಹುಡುಕಾಟ ನಡೆಸಿರುವುದರೊಂದಿಗೆ ನಗರ ಪೊಲೀಸ್ ಠಾಣೆಗೂ ಮಾಹಿತಿ ತಿಳಿಸಿದ್ದು, ಪೊಲೀಸರು ಕೂಡ ಶಾರದಮ್ಮನವರ ಶೋಧ ಕಾರ್ಯದಲ್ಲಿ ಜೊತೆಯಾಗಿದ್ದರು.
ಕಾಮೆಂಟ್‌ಗಳಿಲ್ಲ