ಹೊಸನಗರದ ಪ್ರಜಾವಾಣಿ ವರದಿಗಾರ ರವಿ ನಾಗರಕೊಡಿಗೆ ಅವರಿಗೆ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ
ಹೊಸನಗರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ ವಿಶೇಷ ಪ್ರಶಸ್ತಿಗೆ ಹೊಸನಗರ ತಾಲ್ಲೂಕಿನ ಪ್ರಜಾವಾಣಿ ದಿನಪತ್ರಿಕೆಯ ವರದಿಗಾರ ರವಿ ನಾಗರಕೊಡಿಗೆ ಅವರಿಗೆ ಸಂದಿದ್ದು, ನಿನ್ನೆ ಶಿವಮೊಗ್ಗದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಶಿವಮೊಗ್ಗದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭವನ್ನು ಸಂಸದ ಬಿ.ವೈ. ರಾಘವೇಂದ್ರ ಅವರು ಉದ್ಘಾಟಿಸಿ, ಪ್ರಶಸ್ತಿಯನ್ನು ವಿತರಿಸಿ ಅಭಿನಂದಿಸಿದರು.
ಮೂಲತಃ ಹೊಸನಗರ ತಾಲ್ಲೂಕು ನಾಗರಕೊಡಿಗೆಯವರಾದ ರವಿ ನಾಗರಕೊಡಿಗೆ ’ನಾ.ರವಿ’ ಎಂದೇ ತಾಲ್ಲೂಕಿನೆಲ್ಲೆಡೆ ಗುರುತಿಸಿಕೊಂಡವರು. ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಕವಿತೆ, ಹನಿಗವಿತೆಗಳನ್ನು ರಚಿಸುತ್ತಾ ಸಾಹಿತ್ಯ ಲೋಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಇವರು, ಆನಂತರ ಪೂರ್ಣ ಪ್ರಮಾಣದ ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದರು. ’ಕನ್ನಡ ಜನಾಂತರಂಗ’ ದಿನಪತ್ರಿಕೆಯ ಪತ್ರಿಕಾ ವರದಿಗಾರರಾಗಿ ಕೆಲಸ ಆರಂಭಿಸಿದ ಇವರು, ಆನಂತರ ವಿಜಯಕರ್ನಾಟಕ, ವಿಜಯವಾಣಿ ದಿನಪತ್ರಿಕೆಯ ಹೊಸನಗರ ತಾಲ್ಲೂಕು ವರದಿಗಾರರಾಗಿ ಕೆಲಸ ನಿರ್ವಹಿಸಿದ್ದು, ಪ್ರಸ್ತುತ ಪ್ರಜಾವಾಣಿಯ ಹೊಸನಗರ ತಾಲ್ಲೂಕು ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾಗರಕೊಡಿಗೆಯ ದಿ.ಎಲ್.ಜಿ. ರಾಮಸ್ವಾಮಿ ರಾವ್, ರಾಧಮ್ಮ ಇವರ ಪುತ್ರರಾದ ಇವರು ಪತ್ನಿ ಕೋಡೂರಿನ ಆಶಾ, ಮಗ ಎಲ್.ಆರ್. ಪ್ರಮಥ ವಶಿಷ್ಠ ಜೊತೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹೊಸನಗರ ತಾಲ್ಲೂಕು ಘಟಕದ ಅಧ್ಯಕ್ಷರಾಗಿಯೂ ಇವರು ಕಾರ್ಯನಿರ್ವಹಿಸಿದ್ದಾರೆ.
ರವಿ ನಾಗರಕೊಡಿಗೆ ಅವರೊಂದಿಗೆ, ಪ್ರಜಾವಾಣಿಯ ತೀರ್ಥಹಳ್ಳಿ ವರದಿಗಾರರಾದ ನಿರಂಜನ್, ವಿಜಯವಾಣಿ ವರದಿಗಾರರಾದ ನವೀನ್ ಬಿಲ್ಗುಣಿ, ಉದಯವಾಣಿ ಭದ್ರಾವತಿಯ ವರದಿಗಾರ ಜಿ.ಎಸ್. ಸುಧೀಂದ್ರ, ಸಂಯುಕ್ತ ಕರ್ನಾಟಕ ಸಾಗರದ ವರದಿಗಾರ ಮಹೇಶ್ ಹೆಗಡೆ, ಪ್ರಜಾವಾಣಿ ಆನವಟ್ಟಿಯ ವರದಿಗಾರ ರವಿ. ಆರ್ ತಿಮ್ಲಾಪುರ, ಶಿಕಾರಿಪುರದ ಎಂ.ನವೀನ್ ಮತ್ತು ವಿಜಯವಾಣಿಯ ಛಾಯಾಗ್ರಾಹಕರಾದ ಯೋಗರಾಜ್ ಅವರಿಗೂ ಪ್ರಶಸ್ತಿಯನ್ನು ವಿತರಿಸಲಾಯಿತು.
ಕಾಮೆಂಟ್‌ಗಳಿಲ್ಲ